ಬೆಳಗಾವಿ: ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲದ ಪೈಪೋಟಿ ಕಾಣುತ್ತಿರುವ ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯ ಮುನ್ನಡೆಯ ವಿಚಾರವಾಗಿ ಬಹಳ ಕುತೂಹಲದ ಚರ್ಚೆ ನಡೆದಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ತಮ್ಮ ಪ್ರಚಾರ ಹಾಗೂ ಜನ ಬೆಂಬಲದ ಆಧಾರದ ಮೇಲೆ ಎಷ್ಟು ಮುನ್ನಡೆ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ
ಎಲ್ಲಕ್ಕಿಂತ ಮುಖ್ಯವಾಗಿ ಇದು ಸಚಿವ ಸತೀಶ ಜಾರಕಿಹೊಳಿ ಅವರ ಸ್ವಕ್ಷೇತ್ರ. ಸಹಜವಾಗಿಯೇ ಎಲ್ಲರ ಗಮನ ಇದರ ಮೇಲಿರುತ್ತದೆ. ಇದಲ್ಲದೇ ಪಕ್ಕದ ಹುಕ್ಕೇರಿಯ ಬಿಜೆಪಿ ಶಾಸಕ ಉಮೇಶ ಕತ್ತಿ ಹಾಗೂ ಅವರ ಸಹೋದರ ರಮೇಶ ಕತ್ತಿ ಅವರ ನಡೆ ಕೂಡ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಅಷ್ಟೇ ಅಲ್ಲದೇ ಇದು ಚುನಾವಣೆ ಲೆಕ್ಕಾಚಾರದ ಮೇಲೆ ಕೂಡ ಪರಿಣಾಮ ಬೀರಿದೆ.
ವಿಧಾನಸಭೆ ಚುನಾವಣೆಯಲ್ಲಿ ಬಹಳ ಕಡಿಮೆ ಮತಗಳ ಅಂತರದಿಂದ ಈ ಕ್ಷೇತ್ರವನ್ನು ಕಳೆದುಕೊಂಡಿದ್ದ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಅಂತಹ ತಪ್ಪುಗಳಿಗೆ ಅವಕಾಶ ನೀಡದಂತೆ ಪ್ರಚಾರ ಮಾಡಿದೆ. ಕಾಂಗ್ರೆಸ್ ಅಭ್ಯರ್ಥಿಯ ಜೊತೆಗೆ ಸ್ಥಳೀಯ ಶಾಸಕರ ಜೊತೆ ಬಿಜೆಪಿ ಕಾರ್ಯಕರ್ತರು ಪೈಪೋಟಿ ನಡೆಸಿರುವುದರಿಂದ ಮತಗಳ ಮುನ್ನಡೆ ಲೆಕ್ಕಾಚಾರ ಬಹಳ ಕುತೂಹಲ ಮೂಡಿಸಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಲ್ಲಿ ಒಂದೇ ಒಂದು ದಿನ ಪ್ರಚಾರ ಮಾಡದೇ ಬಹಳ ಪ್ರಯಾಸದಿಂದ ಜಯಗಳಿಸಿದ್ದ ಕಾಂಗ್ರೆಸ್ ಪ್ರಭಾವಿ ನಾಯಕ ಸತೀಶ ಜಾರಕಿಹೊಳಿಗೆ ಲೋಕಸಭೆ ಚುನಾವಣೆ ಅತ್ಯಂತ ಪ್ರತಿಷ್ಠೆಯ ಪ್ರಶ್ನೆ. ಸತೀಶ ಅವರ ಮೇಲೆ ಬಹಳ ನಂಬಿಕೆ ಇಟ್ಟುಕೊಂಡಿರುವ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಯಮಕನಮರಡಿ ಕ್ಷೇತ್ರದಿಂದ ಹೆಚ್ಚಿನ ಮುನ್ನಡೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿಯಲ್ಲಿನ ಅಸಮಾಧಾನ ಹಾಗೂ ನಾಯಕರ ನಿರಾಸಕ್ತಿ ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ, ವಿಧಾನಸಭೆ ಚುನಾವಣೆ ಪೆಟ್ಟಿನಿಂದ ಎಚ್ಚೆತ್ತುಕೊಂಡಿದ್ದ ಸತೀಶ ಜಾರಕಿಹೊಳಿ ಲೋಕಸಭೆ ಚುನಾವಣೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದರು. ಕ್ಷೇತ್ರದ ಮೇಲಿನ ತಮ್ಮ ಹಿಡಿತ ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಿದರು. ಇದು ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿಗೆ ನೆರವಾಗಲಿದೆ ಎಂಬುದು ಕ್ಷೇತ್ರದಲ್ಲಿ ಕೇಳಿಬರುತ್ತಿರುವ ಮಾತು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆ ಹಾಗೂ ರಾಜ್ಯ ನಾಯಕರ ಬೆಂಬಲ ಇಲ್ಲದೇ ಇದ್ದರೂ ಬಿಜೆಪಿ ಅಲ್ಪಮತಗಳ ಅಂತರದಿಂದ ಸೋಲು ಕಾಣಬೇಕಾಯಿತು. ಆಗ ಚುನಾವಣೆಯಲ್ಲಿ ಯಾವ ನಾಯಕರೂ ಪ್ರಚಾರಕ್ಕೆ ಬರಲಿಲ್ಲ. ಜೊತೆಗೆ ನಾಯಕರ ಮಧ್ಯೆ ಹೊಂದಾಣಿಕೆ ರಾಜಕಾರಣ ನಡೆಯಿತು. ಅದೇ ರೀತಿ ಲೋಕಸಭೆ ಚುನಾವಣೆ ಸಮಯದಲ್ಲೂ ರಾಜ್ಯ ಹಾಗೂ ಜಿಲ್ಲಾ ನಾಯಕರು ಕ್ಷೇತ್ರಕ್ಕೆ ಬರಲೇ ಇಲ್ಲ ಎಂಬ ಅಸಮಾಧಾನ ಕಾರ್ಯಕರ್ತರಲ್ಲಿದೆ. ಒಂದು ವೇಳೆ ಬಿಜೆಪಿ ಇಲ್ಲಿ ಹಿನ್ನಡೆ ಕಂಡರೆ ಅದಕ್ಕೆ ನಾಯಕರೇ ಕಾರಣ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳುತ್ತಿದೆ.
ಕೇಶವ ಆದಿ