ಬೆಳಗಾವಿ: ಮೊದಲು ಕೇಂದ್ರ ಸರ್ಕಾರ 50 ಕಿ.ಮೀ. ಸ್ಪೀಡ್ ನಲ್ಲಿ ಓಡುತ್ತಿತ್ತು. ಆದರೆ, ಇನ್ನೂ 30 ಕಿ.ಮೀ. ಸ್ಪೀಡ್ ನಲ್ಲೂ ಓಡುವುದಿಲ್ಲಎಂದು ಕೇಂದ್ರ ಸಂಪುಟ ಪುನಾರಚನೆ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಂಡರಪುರಗೆ ಹೋಗುವ ರೈಲಿನಲ್ಲಿ ಚಲಿಸುವಾಗಲೇ ಹತ್ತಿ ಇಳಿಯಬಹುದಿತ್ತು. ಆ ರೀತಿ ಇನ್ನು ಮುಂದೆ ಇವರ ಸರ್ಕಾರ ಹೋಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಇನ್ನೂ ನಾಲ್ವರು ಸಂಸದರನ್ನು ಸಚಿವರನ್ನಾಗಿ ಮಾಡಿದರೂ ಯಾವುದೇ ಲಾಭವಾಗುವುದಿಲ್ಲ. ಕೆಲಸ ಮಾಡುವ ಇಚ್ಛಾಶಕ್ತಿ ಪ್ರಧಾನ ಮಂತ್ರಿಗಳಲ್ಲೇ ಇಲ್ಲ. ಟೀಮ್ ಲೀಡರ್ ಇಚ್ಛಾಶಕ್ತಿ ಹೊಂದಿದ್ದರೆ ಮಾತ್ರ ಕೆಲಸ ಸರಿಯಾಗಿ ನಡೆಯುತ್ತದೆ. ಇಲ್ಲದಿದ್ದರೆ ಅವರ ಕೆಳಗಿನವರು ಏನು ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.
ಪ್ರಧಾನಮಂತ್ರಿಯನ್ನು ಇನ್ನೂವರೆಗೂ ಎಲ್ಲ ಭಾಗದ ಮಂತ್ರಿಗಳು ಸರಿಯಾಗಿ ಭೇಟಿಯಾಗಲು ಸಾಧ್ಯವಾಗಿಲ್ಲ. ಸೇನಾಪತಿ (ಪ್ರಧಾನಿ) ಸ್ಥಾನದಲ್ಲಿರುವ ಮೋದಿಯವರೇ ವಿಫಲರಾದಾಗ, ಇನ್ನು ಅವರ ಕೆಳಗಿರುವ ಸೈನಿಕರಿಂದ (ಸಚಿವರು) ಏನು ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ ಎಂದರು.
ಕೋವಿಡ್ ನಿರ್ವಹಣೆ ಹಾಗೂ ಲಸಿಕೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಸುಪ್ರೀಂ ಕೋರ್ಟ್ ಆದೇಶ ಮಾಡದೇ ಹೋಗಿದ್ದರೆ 1000 ಟನ್ ಆಕ್ಸಿಜನ್ ನಮಗೆ ಸಿಗುತ್ತಿರಲಿಲ್ಲ. ಮೊದಲು ಕೇವಲ 500 ಟನ್ ಆಕ್ಸಿಜನ್ ನೀಡುತ್ತಿದ್ದರು. ಆದರೆ, ಸುಪ್ರೀಂ ಕೋರ್ಟ್ ಆದೇಶದಿಂದ ನಾವು ಹೆಚ್ಚು ಆಕ್ಸಿಜನ್ ಪಡೆಯುವಂತಾಯಿತು ಎಂದು ಹೇಳಿದರು.
ಇದನ್ನೂ ಓದಿ:ಡೆಲ್ಟಾ ಬೆನ್ನಲ್ಲೇ ಲಾಂಬ್ಡಾ ಆತಂಕ: ಭಾರತದಲ್ಲಿ ಲಾಂಬ್ಡಾ ಪ್ರಕರಣ ಪತ್ತೆಯಾಗಿಲ್ಲ: ವರದಿ
ಕೇಂದ್ರ ಸರ್ಕಾರದವರು ಒಮ್ಮೆ ಹೆಚ್ಚು ಲಸಿಕೆ ಪೂರೈಕೆ ಮಾಡುವುದು, ಮತ್ತೊಮ್ಮೆ ಕಡಿಮೆ ನೀಡುವುದು ಮಾಡುತ್ತಿದ್ದಾರೆ. ಹೀಗಾದರೇ ಎಲ್ಲರಿಗೂ ಲಸಿಕೆ ನೀಡಲು ಇನ್ನೂ 2 ವರ್ಷ ಬೇಕಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಅವರ ಶಾಸಕರೇ ಮುಖ್ಯಮಂತ್ರಿಗಳ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಸಚಿವರು ಸರ್ಕಾರ ನಡೆಸಲು ಅಸಮರ್ಥರಾಗಿದ್ದಾರೆ. ಕಾಂಗ್ರೆಸ್ ನಿಂದ ಇದನ್ನು ಜನರ ಗಮನಕ್ಕೆ ತರುವ ಕಾರ್ಯ ಮಾಡುತ್ತಿದ್ದೇವೆ ಎಂದು ಸತೀಶ ಹೇಳಿದರು