ವಿಜಯಪುರ: ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಸರ್ಕಾರ ಬದಲಾವಣೆ ಆಗಲಿದೆ ಎಂದು ರಮೇಶ ಜಾರಕಿಹೊಳಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಇರಲಿದ್ದು, ಸರ್ಕಾರ ಬದಲಾವಣೆ ಆಗದು ಎಂದು ಹೇಳಿದರು.
ಸೋಮವಾರ ಜಿಲ್ಲೆಯ ಇಂಡಿ ತಾಲೂಕಿನ ಹಳಗಣಕಿ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಖಾಸಗಿ ಕಾರ್ಯಕ್ರಮಕ್ಕಾಗಿ ದುಬೈ ಪ್ರವಾಸಕ್ಕೆ ಹೊರಟಿದ್ದೇವೆ ಎಂದರು.
ವಾಲ್ಮೀಕಿ ಸಮಾಜದ ಮುಖಂಡರಿಗೆ ಸರ್ಕಾರ ಬದಲಾಯಿಸುವ ಶಕ್ತಿ ಇದೆ ಎಂದು ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿಕೆ ಕುರಿತು ನನಗೆ ಗೊತ್ತಿಲ್ಲ, ಈ ಬಗ್ಗೆ ಹೇಳಿದವರನ್ನೇ ಕೇಳಿ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸದ್ಯದಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಾಜಿ ಮಂತ್ರಿ ಆಗುತ್ತಾರೆ ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿರುವ ಬಗ್ಗೆ ನನಗೇನೂ ಗೊತ್ತಿಲ್ಲ, ಕಾದು ನೋಡೋಣ ಎಂದ ಸಚಿವ ಸತೀಶ, ಸಿಡಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ದೂರು ನೀಡುವುದಾಗಿ ರಮೇಶ ಜಾರಕಿಹೋಳಿ ಹೇಳಿದ್ದರೆ, ಅದು ಅವರ ವೈಯಕ್ತಿಕ ವಿಚಾರ, ಕಾನೂನಿನಲ್ಲಿ ಅವಕಾಶ ಇರುತ್ತವೆ ಎಂದರು.
ಎರಡೂವರೆ ವರ್ಷದ ಬಳಿಕ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗ್ತಾರೆ ಎಂದು ಕಾಂಗ್ರೆಸ್ ಶಾಸಕ ರವಿ ಗಾಣಿಗ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ಯಾರೂ ಬಹಿರಂಗ ಹೇಳಿಕೆ ನೀಡದಂತೆ ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಲಾರೆ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಯಾವ ಗೊಂದಲವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಮಾತನಾಡಲು ಅವಕಾಶ ಇರುತ್ತದೆ. ಹಾಗಂತ ಅದನ್ನು ಗೊಂದಲ ಎನ್ನಲಾಗದು ಎಂದರು.