ಬೆಳಗಾವಿ : ರಮೇಶ್ ಜಾರಕಿಹೊಳಿ ಯಾರ ಮಾತನ್ನೂ ಕೇಳುವ ಸ್ಟೇಜ್ ನಲ್ಲಿ ಇರಲಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಗೋಕಾಕದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೋಕಾಕದಲ್ಲಿ ಪರಿಸ್ಥಿತಿ ಏನಿದೆ, ಜಾರಕಿಹೊಳಿ ಕುಟುಂಬವನ್ನು ಯಾರು ನಡೆಸುತ್ತಾರೆ ಎಂಬುದು ಗೊತ್ತಿದೆ. ರಮೇಶ್ ವೈಯಕ್ತಿಕವಾಗಿ ಇದ್ದಾರೆ. ಅವರ ಅಳಿಯ ಅಂಬಿರಾವ್ ಪಾಟೀಲ ಮಾತನ್ನು ಬಿಟ್ಟರೆ ರಮೇಶ್ ಮತ್ಯಾರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಮೇಶ್ ಸಿಡಿ ಪ್ರಕರಣದಲ್ಲಿ ಯುವತಿ ಹೇಳಿಕೆ ಅತೀ ಮುಖ್ಯ. ಪೊಲೀಸರು ತನಿಖೆ ನಡೆಸಿ, ಯುವತಿಗೆ ನೋಟಿಸ್ ನೀಡುವ ಮೂಲಕ ವಿಚಾರಣೆ ನಡೆಸಬೇಕು. ಬೇರೆ ಯಾರೇ ದೂರು ಕೊಟ್ಟರೂ ಅದು ಪ್ರಯೋಜನವಾಗಲ್ಲ. ಯುವತಿ ಹೇಳಿಕೆಯೇ ಪ್ರಮುಖವಾಗಿರುತ್ತದೆ ಎಂದರು.
ಪಕ್ಷ ಯಾವುದೇ ಇದ್ದರೂ ಇಂತಹ ಘಟನೆಗಳು ನಡೆಯಬಾರದು. ಹಾಗೆ ಏನಾದರೂ ಇದ್ದರೆ ನೇರವಾಗಿ ಪೊಲೀಸ್ ಠಾಣೆಗೆ ದೂರು ನೀಡಿ, ತನಿಖೆ ನಡೆಸುವಂತೆ ಆಗ್ರಹಿಸಬೇಕು. ಅದನ್ನು ಬಿಟ್ಟು ಇಂತಹ ಪ್ರಕರಣಗಳನ್ನು ರಸ್ತೆಗೆ ತರಬಾರದು ಎಂದರು.
ಸಿಡಿ ಪ್ರಕರಣ ಮುಗಿದ ಅಧ್ಯಾಯ. ಈಗಾಗಲೇ ರಮೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಂಬಂಧ ಪಟ್ಟವರಿಗೆ ಪೊಲೀಸರು ನೋಟಿಸ್ ನೀಡಿ ತನಿಖೆ ನಡೆಸಬೇಕು. ಆಗ ಸತ್ಯಾಂಶ ಹೊರಬರಲಿದೆ ಎಂದರು.