Advertisement

“ವೈಯಕ್ತಿಕ ಬದುಕಿಗಿಂತ ಕರ್ತವ್ಯದಲ್ಲೇ ಆತ್ಮತೃಪ್ತಿ ಇದೆ’

12:37 PM Nov 18, 2019 | mahesh |

ಸುಳ್ಯ: “ಗಂಟೆ ಲೆಕ್ಕ ಹಾಕದೆ, ಹಸಿವಾದಾಗ ಆಹಾರಕ್ಕೆ ಕೈಯೊಡ್ಡದೆ ಜೀವಕ್ಕೆ ಸವಾಲೊಡ್ಡಿ ಪರರ ಜೀವ ರಕ್ಷಿಸಿ ಆತ್ಮ ಸಂತೃಪ್ತಿ ಪಡೆಯುವ ಕರ್ತವ್ಯ ಮಾಡುವ ಅದೃಷ್ಟ ಎಲ್ಲರಿಗೂ ಸಿಗದು. ಇದೊಂದು ಸರಕಾರವೇ ಸಮಾಜ ಸೇವೆಗೆ ಕೊಟ್ಟ ಬಹು ಅವಕಾಶ” ಹೀಗೆಂದು ತನ್ನ ವೃತ್ತಿ ಶೇಷ್ಠ ವೃತ್ತಿ ಎನ್ನುತ್ತಲೇ ಮಕ್ಕಳ ಜತೆ ಮುಖಾಮುಖಿ ಆದದ್ದು ಸುಳ್ಯ ಅಗ್ನಿಶಾಮಕದಳದ ಅಗ್ನಿಶಾಮಕ ಸಿಬಂದಿ, ವಿಜಯಪುರ ಜಿಲ್ಲೆಯ ಕಲ್ಲಪ್ಪ ಚಂದ್ರಪ್ಪ ಮಾದರ್‌. 45ಕ್ಕೂ ಅಧಿಕ ವಿದ್ಯಾರ್ಥಿಗಳ ಜತೆ ಎರಡು ತಾಸು ಸಂವಾದ ನಡೆಸಿದ ಅವರು, ಮಕ್ಕಳ ಹಲವು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದರು. ವೃತ್ತಿಯಲ್ಲಿ ಮೇಲು-ಕೀಳು ಇಲ್ಲ. ಎಲ್ಲವೂ ಶ್ರೇಷ್ಠ ಎಂದ ಅವರ ಮಾತನ್ನು ಆಲಿಸಿದ ಮಕ್ಕಳು ಸಂವಾದದ ಕೊನೆಯಲ್ಲಿ ಡಾಕ್ಟರ್‌, ಎಂಜಿನಿಯರ್‌ ಮಾತ್ರವಲ್ಲದೆ ನಾವು ಅಗ್ನಿಶಾಮಕದಂತಹ ಸಮಾಜಮುಖಿ ಸೇವೆ ಮಾಡಬೇಕು ಎಂಬ ಬಯಕೆ ವ್ಯಕ್ತಪಡಿಸಿ ಸಂವಾದದ ಆಶಯ ಎತ್ತಿ ಹಿಡಿದರು.

Advertisement

ಅಗ್ನಿಶಾಮಕರೆಂದರೆ ಕೇವಲ ಬೆಂಕಿ ನಂದಿಸುವವರು ಅಲ್ಲ. ಎಲ್ಲ ಅವಘಡದ ಸಂದರ್ಭದಲ್ಲೂ ರಕ್ಷಣೆ ನಮ್ಮ ಕೆಲಸ. ನಾವು ವೈಯಕ್ತಿಕ ಜೀವನ ಎಂದು ಕಾಲ ಕಳೆಯುವಂತಿಲ್ಲ. ಯಾವ ಸಮಯದಲ್ಲಿ, ಯಾರ ಕರೆ ಬಂದರೂ ಹಿಂದೆ-ಮುಂದು ನೋಡದೆ ನಿಮ್ಮ ನೆರವಿಗೆ ಬರುವೆವು ಎಂದು ಕಲ್ಲಪ್ಪ ನುಡಿದರು. ನಮಗೆ ಆರು ತಿಂಗಳಿಗೊಮ್ಮೆ ರಜೆ. ಹಬ್ಬ-ಹರಿದಿನಗಳಿಗೆ ಊರಿಗೆ ಹೋಗುವುದು ಕಮ್ಮಿ. ಹೊತ್ತಲ್ಲದ ಹೊತ್ತಿನಲ್ಲಿ ಊಟ, ನಿದ್ದೆ, ಪಯಣ ಇದ್ದದ್ದೆ. ಅದನ್ನೇ ಕಷ್ಟ ಎಂದು ಭಾವಿಸಬೇಡಿ. ನೊಂದವರ ಸೇವೆಗೆ ಸಿಗುವ ಅಮೂಲ್ಯ ಸಮಯ ಎಂದರು.

ಪ್ರಶ್ನೆ: ರಕ್ಷಣೆಗೆ ತೆರಳಿದ ಸಂದರ್ಭ ನಿಮಗೆ ಆಪತ್ತು ಎದುರಾಗಿದೆಯೇ? (ವೀಣಾ ಎಸ್‌., ಕೆವಿಜಿ ಆಂಗ್ಲ ಮಾಧ್ಯಮ ಪ್ರೌಢಶಾಲೆ) ರಕ್ಷಣೆಗೆ ಬೇಕಾದ ತರಬೇತಿ ಪಡೆದು ವೃತ್ತಿ ಸೇರುತ್ತೇವೆ. ಆದರೂ ಒಮೊಮ್ಮೆ ಸಮಸ್ಯೆ ಉಂಟಾಗುತ್ತದೆ. ಮೊಣ್ಣಂಗೇರಿ, ಜೋಡುಪಾಲ ಪ್ರಾಕೃತಿಕ ವಿಕೋಪ ಸಂದರ್ಭ ಪೂರ್ವ ಸಿದ್ಧತೆಯಿಂದ ಎದುರಿಸಲು ಸಾಧ್ಯವಿರಲಿಲ್ಲ. ಮುಳ್ಳಿನ ಮೇಲಿನ ನಡಿಗೆ ಅದು. ಆಗ ಸಮಸ್ಯೆ ಎದುರಿಸಿದ್ದೇವೆ.

ಪ್ರಶ್ನೆ: ನೀವು ರಜೆಯಲ್ಲಿ ಊರಿಗೆ ಹೋಗಿರುವ ಸಂದರ್ಭ ಕರ್ತವ್ಯ ಸ್ಥಳದಲ್ಲಿ ಅಪಾಯ ಬಂದಾಗ ಏನು ಮಾಡುತ್ತಿರಿ? (ನಾಝೀಮಾ, ಗ್ರೀನ್‌ ವ್ಯೂ ಶಾಲೆ)
ಅಗ್ನಿಶಾಮಕರಿಗೆ ಕರ್ತವ್ಯ ಮುಖ್ಯ. ಕಾಯುವ ಹಾಗಿಲ್ಲ. ಕರೆ ಬಂದರೆ ತತ್‌ಕ್ಷಣ ಹೊರಟು ಬರಬೇಕು. ಕರೆಗೆ ಪ್ರಥಮ ಪ್ರಾಶಸ್ಯ. ಬೇರೆಡೆ ಏನೇ ತುರ್ತು ಇದ್ದರೂ ಅದನ್ನು ಬಿಟ್ಟು ಕೆಲಸಕ್ಕೆ ಸೇರಿಕೊಳ್ಳುವುದು ನಮ್ಮ ವೃತ್ತಿ ಧರ್ಮ.

ಪ್ರಶ್ನೆ: ಒಂದೇ ಸಲ ಎರಡೆರಡು ಕಡೆ ರಕ್ಷಣೆಯ ಅನಿವಾರ್ಯತೆ ಉಂಟಾದರೆ ಆಗ ಏನು ಮಾಡುತ್ತೀರಿ? (ಫಾತಿಮತ್‌ ಇಸ್ತಿಫಾ ಎನ್‌.ಎಂ, ಜೂನಿಯರ್‌ ಕಾಲೇಜು ಸುಳ್ಯ)
ನಾವು ಪರಿಸ್ಥಿತಿ ನೋಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಕೆಲಸಕ್ಕೆ ಎಷ್ಟು ಜನ ಬೇಕು ಎಂದು ಅಂದಾಜಿಸಿ ಉಳಿದವರನ್ನು ತತ್‌ಕ್ಷಣ ಅಲ್ಲಿಗೆ ಕಳುಹಿಸುತ್ತೇವೆ. ಇಲ್ಲದಿದ್ದರೆ ಬೇರೆ ಕಡೆಯಿಂದ ವಾಹನ, ಸಿಬಂದಿ ವ್ಯವಸ್ಥೆ ಮಾಡುತ್ತಾರೆ.
ಅಗ್ನಿಶಾಮಕ ದಳಕ್ಕೆ ಆಯ್ಕೆ ಆದ ಸಂದರ್ಭ ಮನೆಯವರ ಪ್ರತಿಕ್ರಿಯೆ ಹೇಗಿತ್ತು? (ಪ್ರತಿಕಾ ಕೆ.ಎಚ್‌., ಕೆವಿಜಿ ಆಂಗ್ಲ ಮಾಧ್ಯಮ ಶಾಲೆ) ತುಂಬಾ ಖುಷಿ ಪಟ್ಟರು. ನಮ್ಮ ಮನೆಯಲ್ಲಿ ಯಾರೂ ವಿದ್ಯಾಭ್ಯಾಸ ಪಡೆದಿರಲಿಲ್ಲ. ಎಲ್ಲರೂ ಹೆಬ್ಬೆಟ್ಟು. ಅವರಿಗೆ ಅಗ್ನಿಶಾಮಕ ದಳ ಅಂದರೆ ಏನು ಅಂತಾನೂ ಗೊತ್ತಿರಲಿಲ್ಲ. ಸಿಹಿ ಹಂಚಿ ಸಂಭ್ರಮಿಸಿದರು. ಕೆಲಸ ದೊರೆತ ಬಳಿಕ ನಾನು ನನ್ನ ತಂಗಿಗೆ ವಿದ್ಯಾಭ್ಯಾಸ ಕೊಡಿಸಿದೆ.

Advertisement

ಹೆಣ್ಣು ಮಕ್ಕಳಿಗೆ ಅಗ್ನಿಶಾಮಕ ದಳದಲ್ಲಿ ಉದ್ಯೋಗವಕಾಶ ನೀಡುತ್ತಿಲ್ಲ? ಏಕೆ? (ರಾಹಿಲಾ, ಶಾರದಾ ಸ್ಕೂಲ್‌)
ಈ ನಿಯಮ ರೂಪಿಸುವ ಕಾಲಘಟ್ಟದಲ್ಲಿ ಆ ರೀತಿ ಇದ್ದೀತು. ಅದಕ್ಕೆ ತಿದ್ದುಪಡಿ ತರಬೇಕು. ನೀವು ಬೇಡಿಕೆ ಇಟ್ಟರೆ ತಿದ್ದುಪಡಿ ತಂದು ನಿಮಗೂ ಅವಕಾಶ ಸಿಗಬಹುದು.

ಪ್ರಶ್ನೆ: ಚಂದ್ರಯಾನ ಮಾಡುವ ಸಾಮರ್ಥ್ಯ ನಮ್ಮಲ್ಲಿ ಇದೆ. ಆದರೆ ಕೊಳವೆ ಬಾವಿಗೆ ಬಿದ್ದರೆ ರಕ್ಷಣೆಗೆ ದಿನಗಟ್ಟಲೆ ಏಕೆ ಬೇಕಾಗುತ್ತದೆ? (ಅಶ್ವಿ‌ನಿ, ಶಾರದಾ ಸ್ಕೂಲ್‌)
ಇಲಾಖೆಗೆ ಎಷ್ಟು ಸಾಧ್ಯ ಅಷ್ಟನ್ನು ನಾವು ಮಾಡುತ್ತೇವೆ. ಆಧುನಿಕ ಉಪಕರಣಗಳ ಅಗತ್ಯ ಇದೆ. ಸಂಶೋಧನೆಗಳು ಆಗಬೇಕು. ಜನಪ್ರತಿನಿಧಿಗಳ ಮೂಲಕ ನಿಮ್ಮ ಬೇಡಿಕೆಯನ್ನು ಮಂಡಿಸಿ.

ಪ್ರಶ್ನೆ: ಅಗ್ನಿಶಾಮಕ ದಳಕ್ಕೆ ಸೇರಲು ವಿದ್ಯಾರ್ಹತೆ ಏನು? ತರಬೇತಿ ಅವಧಿಯಲ್ಲಿ ಕಲಿತ ಅನುಭವ ವೃತ್ತಿಗೆ ಸಾಕಾಗುತ್ತಾದ? (ಮನಸ್ವಿ, ಶಾರದಾ ಹೈಸ್ಕೂಲ್‌)
ಅಗ್ನಿಶಾಮಕ ದಳದಲ್ಲಿ ವಿವಿಧ ಹಂತದ ಉದ್ಯೋಗ ಪಡೆಯಲು ಎಸೆಸೆಲ್ಸಿ, ಬಿಎಸ್ಸಿ ಕೆಮಿಸ್ಟ್ರಿ ಮೊದಲಾದ ವಿದ್ಯಾರ್ಹತೆ ಇದೆ. ತರಬೇತಿ ಹಂತದಲ್ಲಿ ತೇರ್ಗಡೆಯಾದರೆ ಮಾತ್ರ ಕರ್ತವ್ಯಕ್ಕೆ ಕಳುಹಿಸುತ್ತಾರೆ. ಪೂರ್ವ ತರಬೇತಿಯಲ್ಲಿ ನಮ್ಮ ಸಾಮರ್ಥ್ಯವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಸ್ಮಿತಾ, ಮಂಜು, ಇಶಾನ್‌ ಮತ್ತಿತರ ವಿದ್ಯಾರ್ಥಿಗಳು ಪ್ರಶ್ನೋತ್ತರದಲ್ಲಿ ಭಾಗವಹಿಸಿದ್ದರು.

– ಜೀವನ್ಮರಣ ಸ್ಥಿತಿಯಲ್ಲಿದ್ದವರನ್ನು ರಕ್ಷಿಸುವ ಸಂದರ್ಭ ಒದಗಿತ್ತೇ? (ರಾಹಿಲಾ, ಶ್ರೀ ಶಾರದಾ ಹೆಣ್ಮಕ್ಕಳ ಪ್ರೌಢಶಾಲೆ)
ಮರ್ಕಂಜದ ಆಶ್ರಮವೊಂದರಲ್ಲಿ ಕೆಲಸ ಮಾಡಿ ಹಗ್ಗದ ಸಹಾಯದಿಂದ ಮೇಲೇರುತ್ತಿದ್ದ ವಯಸ್ಕ ವ್ಯಕ್ತಿಯೊಬ್ಬರು ಹಗ್ಗ ತುಂಡಾಗಿ ಬಾವಿ ಬಿದಿದ್ದರು. ಆಳವಾದ ಬಾವಿ ಆಗಿತ್ತು. ಅರ್ಧ ಗಂಟೆ ಕಳೆದ ಬಳಿಕ ನನಗೆ ಮಾಹಿತಿ ಸಿಕ್ಕಿತು. ನನಗಿಂತಲೂ ಮೊದಲು ಒಬ್ಬರು ರಕ್ಷಣೆಗೆ ಇಳಿದವರೂ ಬಾವಿಯಲ್ಲೇ ಬಾಕಿಯಾಗಿದ್ದರು. ಬಳಿಕ ತೊಟ್ಟಲು ರೂಪದಲ್ಲಿ ಹಗ್ಗದ ಸಹಾಯದಿಂದ ಮೇಲೆತ್ತಿ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದೆ.

– ಪ್ರಾಣಕ್ಕೆ ಆಪತ್ತು ಇರುವ ಕಾರ್ಯಾಚರಣೆ ವೇಳೆ ನಿಮಗೆ ಕುಟುಂಬದ ನೆನಪಾಗುವುದಿಲ್ಲವೇ? (ನಿತೇಶ್‌ ಕುಮಾರ್‌, ಕೆವಿಜಿ ಐಟಿಐ ಸುಳ್ಯ)
ನಾರ್ಕೋಡು ಸಮೀಪ ಹಸು ಪಾಳು ಬಾವಿಗೆ ಬಿದ್ದಿತ್ತು. 50 ಅಡಿಇಳಿಯಬೇಕಾದ ಸ್ಥಿತಿ. ಅಲ್ಲಿ ಇಳಿದರೆ ಮೇಲೆ ಬರುವುದು ಕಷ್ಟ. ಜೀವದ ಹಂಗು ತೊರೆದು ಇಳಿದೆ, ಹಸುವನ್ನು ರಕ್ಷಿಸಿದೆ. ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಗುಡ್ಡ, ಬೆಟ್ಟ ಯಾವಾಗ ಕುಸಿಯುತ್ತದೆ ಎನ್ನಲು ಸಾಧ್ಯವಿಲ್ಲ. ಆ ವೇಳೆ ಕುಟುಂಬ ನೆನೆಪಾದರೂ, ಕರ್ತವ್ಯದಿಂದ ಹಿಂದಕ್ಕೆ ಸರಿಯಲು ಮನಸ್ಸು ಬಂದಿಲ್ಲ.

ಅಗ್ನಿ ಶಾಮಕ ವೃತ್ತಿಯ ಆಳ ಅರಿವು ಬಿಚ್ಚಿಟ್ಟ ಸಂವಾದ
ಸಮಸ್ಯೆ ಎಂದು ಹೇಳಿ ಕರೆ ಮಾಡುವವರು ಸರಿಯಾಗಿ ಊರು, ವಿಳಾಸ ಹೇಳಬೇಕು. ಹೊರ ಜಿಲ್ಲೆಯ ಸಿಬಂದಿಗೆ ಸ್ಥಳಕ್ಕೆ ಬಂದರೂ ವಿಳಾಸಕ್ಕೆ ಬಾರದ ಸ್ಥಿತಿ ಉಂಟಾಗುತ್ತದೆ. ಅವಘಡದ ಪೂರ್ಣ ಮಾಹಿತಿ ನೀಡಬೇಕು. – ಕಲ್ಲಪ್ಪ ಚಂದ್ರಪ್ಪ ಮಾದರ್‌

ಮೇಲಧಿಕಾರಿಗಳು ಗದರಿದ್ದು ಇದೆಯಾ? (ಸ್ಮಿತಾ)
ಮೇಲಧಿಕಾರಿಗಳು ನಮ್ಮ ಮೇಲೆ ನಿಗಾ ಇಡುವುದು ಅವರ ಜವಾಬ್ದಾರಿ. ಗದರಿದರೂ ವೈಯಕ್ತಿಕವಾಗಿ ಪರಿಗಣಿಸಬಾರದು. ಅವರ ಮಾತು ನಮ್ಮ ತಪ್ಪು ತಿದ್ದಿಕೊಳ್ಳಲು ಎಂದು ಭಾವಿಸಬೇಕು ಎಂದರು.

ರಕ್ಷಣಾ ಕಾರ್ಯದ ಸಂದರ್ಭ ನಿಮ್ಮ ಸಹದ್ಯೋಗಿ ಸಿಬಂದಿಗೆ ತೊಂದರೆಯಾದರೆ ಏನು ಮಾಡುವಿರಿ? (ಮಂಜು)
ಹಿಂದೊಮ್ಮೆ ಕಾರ್ಯಾಚರಣೆ ತೆರಳಿದ ಸಂದರ್ಭ ಚಾಲಕರಿಗೆ ಆರೋಗ್ಯ ಸಮಸ್ಯೆಯಾಯಿತು. ಏನಾದರೂ ರಕ್ಷಣಾ ಕಾರ್ಯ ಮುಗಿಸಿಯೇ ಅಲ್ಲಿಂದ ಬರಬೇಕು.

ನಿಮಗೆ ಸ್ಫೂರ್ತಿ ಏನು? (ಇಶಾನ್‌)
ನನಗೆ ಪೊಲೀಸ್‌, ಆರೋಗ್ಯ ಇಲಾಖೆಯಲ್ಲಿ ಅವಕಾಶ ಸಿಕ್ಕಿತ್ತು. ಎಂಜಿನಿಯರ್‌ ಕನಸು ಇತ್ತು. ಆದರೆ ನನಗೆ ಸಮಾಜ ಸೇವೆಗೆ ಪೂರಕ ಕೆಲಸ ಬೇಕಿತ್ತು. ಈ ಕ್ಷೇತ್ರ ಆಯ್ಕೆ ಮಾಡಿದೆ. ಸರಕಾರ ಸಂಬಳ ಕೊಟ್ಟು ಸಮಾಜ ಸೇವೆ ಮಾಡುವ ಅವಕಾಶ ನೀಡಿದೆ.

ತುರ್ತು ಕಾರ್ಯಾಚರಣೆಗೆ ತೆರಳುವಾಗ ಟ್ರಾಫಿಕ್‌ ಜಾಮ್‌ ಆದರೆ ಪರ್ಯಾಯ ವ್ಯವಸ್ಥೆ ಏನಿದೆ? (ಅಪೇಕ್ಷಾ)
ನಮ್ಮ ಗಾಡಿಗೆ ಸೈರನ್‌ ಇದೆ. ಅದನ್ನು ಬಳಸುತ್ತೇವೆ. ಆಗ ಎಲ್ಲ ಸವಾರರು ಸಂಚಾರಕ್ಕೆ ಅವಕಾಶ ಕೊಡಬೇಕು. ಇದು ಸರಕಾರ ರೂಪಿಸಿದ ನಿಯಮ.

ನಿಮಗೆ ಯೂನಿಫಾರಂ ಕಡ್ಡಾಯವೇ?
(ಅನ್ವಯಾ ಬಿ. ಶಾರದಾ ಸ್ಕೂಲ್‌ ಸುಳ್ಯ)
ಇಲಾಖೆ ನೀಡಿದ ಡ್ರೆಸ್‌ ಇದೆ. ಕರ್ತವ್ಯದಲ್ಲಿ ಇರುವಾಗ ಹಾಕುತ್ತೇವೆ. ರಜೆಯಲ್ಲಿ ಇದ್ದ ಸಂದರ್ಭ ತುರ್ತಾಗಿ ಬರಲು ಹೇಳಿದ ಸಂದರ್ಭದಲ್ಲಿ ಯೂನಿಫಾರಂ ಕಡ್ಡಾಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next