ಗಜೇಂದ್ರಗಡ: ಧರ್ಮ ಮಾರ್ಗದಲ್ಲಿ ಯಾರಿಗೆ ಯಾವುದು ಸುಲಭವೋ ಅದನ್ನು ಅನುಸರಿಸಿ, ತಮಗೆ ಅನುಕೂಲವಾದ ಧರ್ಮ ಅಳವಡಿಸಿಕೊಂಡರೆ ಧರ್ಮಕ್ಕೆ ಭದ್ರ ಬುನಾದಿ ಹಾಕಿದಂತಾಗುತ್ತದೆ. ಈ ನಿಟ್ಟಿನಲ್ಲಿ ಧರ್ಮದ ತಳಹದಿಯಲ್ಲಿ ಮುನ್ನಡೆ ಯಬೇಕಿದೆ ಎಂದು ಸೂಡಿ ಜುಕ್ತಿ ಹಿರೇಮಠದ ಡಾ| ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಹೇಳಿದರು.
ಸಮೀಪದ ಸೂಡಿ ಗ್ರಾಮದ ಶ್ರೀ ಜುಕ್ತಿ ಹಿರೇಮಠ ದಲ್ಲಿ ನಡೆದ 305ನೇ ಮಾಸಿನ ಶಿವಾನುಭವಗೋ ಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಎತ್ತರ ಸೌಧ ನಿರ್ಮಾಣ ಮಾಡಬೇಕಾದರೆ ಅದಕ್ಕೆ ಆಳವಾದ ಭದ್ರ ಬುನಾದಿ ಹಾಕಲೇಬೇಕು. ಜೀವನ ಉಜ್ವಲವಾಗಿ ಬೆಳೆಯಬೇಕಾದರೆ ಭದ್ರ ಬುನಾದಿ ಬೇಕು. ಧರ್ಮವೆಂದರೆ ಉತ್ತಮ ಆಚರಣೆ ಎಂದರ್ಥ.
ಜೀವಾತ್ಮನು ಇಹದಲ್ಲಿ ಸುಖವಾ ಗಿದ್ದು, ಪರಲೋಕದಲ್ಲೂ ಸುಖ ಅನುಭವಿಸುವುದೇ ಧರ್ಮ. ದಾನ ಶ್ರೇಷ್ಠವಾಗಿರುವುದರಿಂದ ಪ್ರತಿಯೊಬ್ಬರೂ ಅನ್ನದಾನದ ಧರ್ಮ ಮಾರ್ಗ ಅವಲಂಬಿಸಬೇಕು. ಪರಮಾತ್ಮನು ಪ್ರತಿಯೊಂದು ಜೀವಿಯ ಉದರದಲ್ಲಿ ಜಠರಾಗ್ನಿಯ ರೂಪದಲ್ಲಿ ನಿವಾಸ ಮಾಡಿರುವುದರಿಂದ ಯಾವುದೇ ಜೀವಿಯನ್ನು ಅನ್ನದಾನದಿಂದ ತೃಪ್ತಿಪಡಿಸಿದರೆ ಪರಮಾತ್ಮನನ್ನೇ ತೃಪ್ತಿಪಡಿಸಿದಂತಾಗುತ್ತದೆ ಎಂದರು.
ಪ್ರತಿಯೊಬ್ಬ ಮನುಷ್ಯ ಧರ್ಮ ಮಾರ್ಗದಲ್ಲಿದ್ದುಕೊಂಡು ತನಗಿಂತ ಸಮಾಜ, ಸಮಾಜಕ್ಕಿಂತ ದೇಶ ಮತ್ತು ಧರ್ಮಕ್ಕಾಗಿ ದುಡಿಯಬೇಕು. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಹೊಂದಿರಬೇಕು. ಜಗತ್ತಿನ ಮುಂದುವರಿದ ದೇಶಗಳು ಇಂದು ಭಾರತೀಯ ಸಂಸ್ಕೃತಿಗೆ ತಲೆ ಬಾಗುತ್ತಿವೆ. ಆದರೆ, ಭಾರತೀಯರು ವಿದೇಶದ ಪ್ರಭಾವಕ್ಕೆ ಸಿಲುಕಿಕೊಂಡು ಮೂಲ ಸಂಸ್ಕೃತಿ ಮರೆಯುತ್ತಿದ್ದಾರೆ. ಧರ್ಮ ಸಂಸ್ಕಾರ ಕಳೆದುಕೊಂಡಾಗ ಮನುಷ್ಯ ಪಶುವಿಗೆ ಸಮಾನವಾಗುತ್ತಾನೆ. ಮನುಕುಲದ ಉದ್ಧಾರಕ್ಕಾಗಿ ಪ್ರತಿಯೊಬ್ಬರಿಗೂ ಧರ್ಮ ಸಂಸ್ಕಾರ ಅವಶ್ಯಕವಾಗಿದೆ. ಯೋಗ್ಯ ಗುರು ದೊರೆಯಬೇಕಾದರೆ ಶ್ರದ್ಧಾ, ಭಕ್ತಿ ಸೇವೆಯ ಶಿಷ್ಯನಿರಬೇಕಾಗುತ್ತದೆ. ಸೇವೆಯ ಗುರುವಿಗೆ ಸಂತೃಪ್ತಿ ನೀಡಬೇಕು. ಆಗಲೇ ಶಿಷ್ಯನಿಗೆ ಸ್ಥಾನಮಾನಗಳು ಲಭಿಸುತ್ತವೆ ಎಂದರು.
ವೇ.ಮೂ. ಸಿದ್ಧೇಶ್ವರ ಶಾಸ್ತ್ರಿ, ಎಸ್.ಡಿ. ಪಾಟೀಲ, ರುದ್ರಪ್ಪ ಮಾರನಬಸರಿ, ಶರಣಪ್ಪ ಹೂಗಾರ, ಶರಣಪ್ಪ ಕಾಶಪ್ಪನವರ, ಉಂಏಶ ಗುಡಿಮನಿ ಇನ್ನಿತರರಿದ್ದರು.