ಚಿತ್ರದುರ್ಗ: ಮೊದಲ ಬಾರಿ ಜಿಲ್ಲಾ ಧಿಕಾರಿಯಾಗಿ ಚಿತ್ರದುರ್ಗದಲ್ಲಿ ಕೆಲಸ ಮಾಡಿದ್ದೇನೆ. ಇಲ್ಲಿನ ಜನರು, ಅಧಿಕಾರಿಗಳ ಪ್ರೀತಿ, ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಜಿಲ್ಲಾ ಧಿಕಾರಿ ವಿ.ವಿ.ಜ್ಯೋತ್ಸ್ನಾ ಹೇಳಿದರು. ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೂತನ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಸ್ವಾಗತ ಹಾಗೂ ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಂದು ವರ್ಷ ಮೂರು ತಿಂಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಈ ವೇಳೆ ವಿಧಾನಸಭಾ ಚುನಾವಣೆ, ವಿಧಾನಪರಿಷತ್ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಾಗಿದೆ. ಈ ಎಲ್ಲಾ ಚುನಾವಣೆಗಳನ್ನು ಅತ್ಯಂತ ಯಶಸ್ವಿಯಾಗಿ ಮಾಡಲು ಸಾಧ್ಯವಾಗಿರುವುದು ಅತ್ಯುತ್ತಮ ಅಧಿಕಾರಿಗಳ ತಂಡದ ಸಹಕಾರದಿಂದ ಎಂದರು.
ಮಕ್ಕಳು ಶಾಲೆಯಿಂದ ಹೊರಗುಳಿಯಬಾರದೆಂದು “ವಿದ್ಯಾಶಕ್ತಿ’ ಕಾರ್ಯಕ್ರಮದ ಮೂಲಕ ಅನೇಕ ಮಕ್ಕಳನ್ನು ಶಾಲೆಗೆ ಮರಳಿ ತರಲು ಸಾಧ್ಯವಾಯಿತು. ಒಂದೇ ದಿನ ಏಕಕಾಲದಲ್ಲಿ 189 ಗ್ರಾಮಗಳಲ್ಲಿ ಅಧಿಕಾರಿಗಳ ತಂಡ ವಾಸ್ತವ್ಯ ಹೂಡುವ ಮೂಲಕ ಜನರ ಸಮಸ್ಯೆ ಅರಿತೆವು. ಸಾವಿರಾರು ಮಕ್ಕಳನ್ನು ಶಾಲೆಗೆ ಕರೆತಂದ ತೃಪ್ತಿ ಇದೆ ಎಂದು ತಿಳಿಸಿದರು.
ನೂತನ ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಸಂವಿಧಾನದ ಮೂರು ಅಂಗಗಳಲ್ಲಿ ಕಾರ್ಯಾಂಗ ಪ್ರಮುಖ ಅಂಗವಾಗಿದೆ. ಸ್ವಾತಂತ್ರ್ಯಾ ಬಂದು ಇಷ್ಟು ವರ್ಷಗಳಾದರೂ ಇನ್ನೂ ಅನೇಕ ಸಮಸ್ಯೆಗಳಿವೆ. ಅನೇಕ ಸಾಮಾಜಿಕ ಸಮಸ್ಯೆಗಳಿಂದ ಶೌಚಾಲಯಗಳನ್ನು ಎಲ್ಲರೂ ಹೊಂದಲು ಸಾಧ್ಯವಾಗಿಲ್ಲ. ಇಂತಹ ಸಾಮಾಜಿಕ ಸಮಸ್ಯೆಗಳನ್ನು ಎಲ್ಲರೂ ಒಟ್ಟಾಗಿ ಹೋಗಲಾಡಿಸಬೇಕು ಎಂದರು. ಅಧಿಕಾರಿಗಳಾದ ನಾವೆಲ್ಲರೂ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಚಿತ್ರದುರ್ಗ ಜಿಲ್ಲೆಗೆ ಹಿಂದುಳಿದ ಜಿಲ್ಲೆ, ಬರಪೀಡಿತ ಜಿಲ್ಲೆ ಎಂಬ ಹೆಸರಿದೆ. ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಮುಂದೊಂದು ದಿನ ಮುಂದುವರೆದ ಜಿಲ್ಲೆಯನ್ನಾಗಿಸಬೇಕಾಗಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಕೋರಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶ ಎಸ್.ಬಿ. ವಸ್ತ್ರಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಹಿಂದುಳಿದವರು, ಬಡತನದಲ್ಲಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜನರಿಗೆ ಕುಡಿಯುವ ನೀರು, ಉತ್ತಮ ರಸ್ತೆ ಹಾಗೂ ಆರೋಗ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ನೂತನ ಜಿಲ್ಲಾಧಿಕಾರಿಯವರು ಗಮನ ನೀಡಬೇಕು. ಹಿಂದಿನ ಜಿಲ್ಲಾಕಾರಿ ಸಹ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್. ರವೀಂದ್ರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಡಾ| ನಂದಿನಿ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.