Advertisement

ಲಾಭಿಲ್ಲದ ವ್ಯಾಪಾರಾ ಮಾಡಾಕ್‌ ಅವರೇನು ರೈತರಾ?

09:29 AM Nov 28, 2021 | Team Udayavani |

ಹಟ್ಟೆಬ್ಬಕ್ಕ ಹೊಸಾ ಸೀರಿ ಕೊಡಸಬೇಕಂತ ಯಜಮಾನ್ತಿ ಮೊದ್ಲ ಕೇಳಿದ್ಲು, ನಾನೂ ಹಬ್ಬದೊಳಗ ಕಬ್ಬು ಹೋದ್ರ ಚೊಲೊ ಸೀರಿನ ಕೊಡಸ್ತೇನಿ ಅಂತ ಹೇಳಿದ್ನಿ, ಪಂಚಮ್ಯಾಗ ಶುರುವಾಗಿದ್ದ ಮಳಿ ಮಾನಮ್ಮಿ ಮುಗುದು ಹಟ್ಟೆಬ್ಬ ಬಂದ್ರೂ ಬಿಡವಾಲ್ತು, ಹಬ್ಬಕ್ಕ ಮೊದ್ಲ ಕಬ್ಬು ಹೋಗ್ಲಿಲ್ಲಾ ಯಜಮಾನ್ತಿಗಿ ಹೊಸಾ ಸೀರಿ ಬರಲಿಲ್ಲಾ.

Advertisement

ಹಂಗಂತ ಹಬ್ಟಾ ಮಾಡೂದು ಬಿಡಾಕ್‌ ಅಕ್ಕೇತಿ, ಅತ್ತಿ ಸತ್ರೂ ಅಮಾಸಿ ನಿಲ್ಲೂದಿಲ್ಲಂತ ಗಾದಿ ಮಾತೈತಿ, ಅಂತಾ ದೊಡ್‌ ಹಬ್ಟಾ ಮಾಡೂದು ಬಿಡಾಕ್‌ ಅಕ್ಕೇತಿ? ಹಟ್ಟೆವ್ವನ ಇಟ್ಟು ಯತ್ಗೋಳ ಮೆರವಣಿಗಿ ಮಾಡಿದ್ವಿ. ಆದ್ರ, ರೈತರಂಗ ಬ್ಯಾಸರದಾಗ ಯಜಮಾನ್ತಿ ಇರೋ ಸೀರಿನ ಉಟ್ಕೊಂಡು ಲಕ್ಷ್ಮೀ ಪೂಜೆನೂ ಮಾಡಿದ್ಲು.

ಹಬ್ಬ ಮುಗುದು ಹದಿನೈದು ದಿನಾ ಕಳದ್ರೂ ಮಳಿ ನಿಲ್ಲವಾಲ್ತು, ರೈತರು ವರ್ಷಾನುಗಟ್ಟಲೇ ಬೆವರು ಸುರಿಸಿ ದುಡಿದ ಬೆಳಿ ಎಲ್ಲಾ ನೀರಾಗ್‌ ನಿಂತು ಕೊಳತು ಹೊಂಟೇತಿ, ವರ್ಷಿಡಿ ದುಡುದು ಸುಗ್ಗಿ ಟೈಮಿನ್ಯಾಗ ಬೆಳದ ಬೆಳಿ ಎಲ್ಲಾ ನೀರು ಪಾಲಾದ್ರ ರೈತರ ಪರಿಸ್ಥಿತಿ ಹೆಂಗಾಗಬಾರದು? ಕಣ್‌ ಮುಂದ ಬೆಳದ ಮಗಾ ಅಪ್ಪನ ಮುಂದ ಜೀವಾ ಕಳಕೊಂಡ್ರ ಎಷ್ಟು ಸಂಗಟ ಅಕ್ಕೇತೋ, ಹಂಗ ರೈತಗೂ ತಾ ಬೆಳದ ಬೆಳಿ ಕಣ್‌ ಮುಂದ ತೇಲಿ ಹೋಗೂದು ನೋಡಿ ಸಂಗಟ ಅಕ್ಕೇತಿ. ಆದ್ರ ರೈತ ತನ್ನ ಕಷ್ಟಾ ಯಾರ್‌ ಮುಂದ ಹೇಳಬೇಕು.

ರೈತರ ಕಷ್ಟಾ ಕೇಳಾಕ ಯಾರಿಗೂ ಟೈಮ್‌ ಇಲ್ಲದಂಗ ಆಗೇತಿ. ತಮ್‌ ವಿರುದ್ಧ ಇರೋ ಕಾನೂನು ವಾಪಸ್‌ ತೊಗೋರಿ ಅಂತೇಳಿ ರೈತರು ಮಳಿ, ಬಿಸಿಲಿ, ತಂಡಿಗಿ ಹೆದರದನ ವರ್ಷಗಟ್ಟಲೇ ಬೀದ್ಯಾಗ ಕುಂತ್ರೂ ತಲಿ ಕೆಡಿಸಿಕೊಳ್ಳದಿರೋ ಅಧಿಕಾರಸ್ತರು, ಇಲೆಕ್ಷೆನ್ಯಾಗ ಎಲ್ಲಿ ಸೋಲತೇವೋ ಅಂತೇಳಿ ಕಾನೂನು ವಾಪಸ್‌ ಪಡದ್ರು ಅನಸ್ತೆçತಿ. ಆದ್ರೂ, ರೈತರು ಬೆಳದ ಬೆಳೆಗೆ ಎಷ್ಟು ಬೆಲೆ ಕೊಡ್ತೇವಿ ಅಂತ ಮಾತ್ರ ಹೇಳಾಕ ರೆಡಿ ಇಲ್ಲ. ಆದಾಯದ ನೆಚ್ಚಿಗಿ ಇಲ್ಲದಿದ್ರೂ ಕಷ್ಟಾಪಟ್ಟು ಬೆವರು ಸುರಿಸಿ ದುಡಿಯೋ ಉದ್ಯೋಗ ಅಂದ್ರ ಬೇಸಾಯ ಒಂದ.

ಮಳಿ, ಪ್ರವಾಹ, ಬರ ಎಲ್ಲಾನೂ ಎದುರಿಸಿ ಹೆಂಗರ ಮಾಡಿ ನಾಲ್ಕು ಕಾಳು ಕೈಗಿ ಬರತಾವು ಅನ್ನುವಷ್ಟರಾಗ ಅಡಮಳಿ ಕಾಟ, ಅದ್ರಾಗೂ ಪಾರಾಗಿ ಅಷ್ಟೊ ಇಷ್ಟೊ ಉಳಿಸಿಕೊಂಡು ಪ್ಯಾಟಿಗಿ ಮಾರಾಕ ಬಂದ್ರ ಎಷ್ಟು ರೇಟ್‌ ಸಿಗತೈತಿ ಅನ್ನೋ ನಂಬಿಕಿಲ್ಲ. ಕೊಡೊ ರೇಟಿಗೊಂದು ಕಾನೂನು ಮಾಡ್ರಿ ಅಂದ್ರ ಆಳಾರು ಕಾಣದಿರೊ ಕರೆನ್ಸಿ ಬೆನ್ನತ್ತಿ ಕಳ್ಳಾ ಪೊಲೀಸ್‌ ಆಟಾ ಆಡಾಕತ್ತಾರು.

Advertisement

ನಾವು ಸಣ್ಣಾರಿದ್ದಾಗ ಕಡ್ಡಿಪೆಟ್ಟಿಗಿ ಕವರ್ನ ಕಟ್‌ ಮಾಡ್ಕೊಂಡು ಅವ್ನ ರೊಕ್ಕಾ ಅಂದ್ಕೊಂಡು ಆಟಾ ಆಡ್ತಿದ್ವಿ, ಚಾವಿ ಕಡ್ಡಿಪೆಟ್ಟಿಗಿ ಕವರ್‌ ಇದ್ರ ಒಂದ್ರೂಪಾಯಿ, ಡಬಲ್‌ ಕಪ್‌ ಕಡ್ಡಿಪೆಟ್ಟಿಗಿ ಕವರ್‌ ಇದ್ರ ಯಾಡ್‌ರೂಪಾಯಿ ಅಂತ ನಾವ ಅದ್ಕ ರೇಟ್‌ ಫಿಕ್ಸ್‌ ಮಾಡಿ, ರೊಕ್ಕಿಲ್ಲದ್ದರೂ, ಕಾಗದಾನನ ರೊಕ್ಕಾ ಅಂದ್ಕೊಂಡು ಆಟಾ ಆಡ್ತಿದ್ವಿ, ಈಗ ಶ್ರೀಮಂತರು ರೊಕ್ಕಾ ಲೆಕ್ಕಾ ಇಡಾಕ್‌ ಆಗ್ಲಾಕ ಬಿಟ್‌ ಕಾಯಿನ್‌ ಆಟಾ ಶುರು ಮಾಡ್ಯಾರಂತ ಅನಸ್ತೈತಿ. ಮದ್ಲು ಕಳ್ಳರು ಮನಿಗಿ ಬಂದ ತುಡುಗು ಮಾಡ್ತಿದ್ರು, ಈಗ ಮನ್ಯಾಗ ಕುಂತ ತುಡುಗು ಮಾಡು ಕಾಲ ಬಂದು ಹಗಲಗಳ್ಳರು ಟೆಜೂರ್ಯಾಗ, ಸಂಧಕದಾಗ ರೊಕ್ಕಾ ಇಡೂ ಬದ್ಲು, ನೀರಿನ ಪೈಪಿನ್ಯಾಗ, ಪಾಯಿಖಾನ್ಯಾಗ ಇಡಾಕ್‌ ಶುರು ಮಾಡ್ಯಾರಂತ ಅನಸ್ತೈತಿ.

ಡಿ ದರ್ಜೆ ನೌಕರ ಕೊಳ್ಳಾಗ ಕನ್ನಡದ ಟವಾಲ್‌ ಹಾಕ್ಕೊಂಡು ಕೋಟ್ಯಾಂತ ರೂಪಾಯಿ ಗಳಸ್ತಾನು ಅಂದ್ರ ಅವನು ಯಾರ ಹೆಸರ ಮ್ಯಾಲ ಏನ್‌ ದಂಧೆ ಮಾಡಿರಬೇಕಂತ? ಬ್ಲಾಕ್‌ ಮನಿ, ಭ್ರಷ್ಟಾಚಾರ ನಿಲ್ಲಸಾಕಂತನ ಮೋದಿ ಸಾಹೇಬ್ರು ನೋಟಿನ ಬಣ್ಣಾ ಬದಲಿಸಿದ್ರು, ಆದ್ರೂ ಫಾರ್ಟಿ ಪರ್ಸೆಂಟ್‌ ಕಮಿಷನ್‌ಗೆ ದಂಧೆ ಓಪನ್ನಾಗೆ ನಡ್ಯಾಕತ್ತೇತಿ ಅಂತ ಅಂದ್ರ, ಸರ್ಕಾರಿ ವ್ಯವಸ್ಥೆ ಎಲ್ಲಿಗಿ ಬಂದು ನಿಂತೈತಿ ಅನ್ನೂದ ತಿಳಿದಂಗ ಆಗೇತಿ.

ಪರ್ಸೆಂಟೇಜ್‌ ದಂಧೆ ಇದೊಂದ ಸರ್ಕಾರದಾಗ ಐತಂತಲ್ಲಾ. ಸ್ವಾತಂತ್ರ್ಯ ಬಂದಾಗಿಂದ್ಲೂ ಪರ್ಸಂಟೇಜ್‌ ಇಲ್ಲದ ಯಾವ ಯೋಜನೆನೂ ಜಾರಿಗಿ ಬಂದಗಿಲ್ಲ. ಮೊದ್ಲು ಪರ್ಸೆಂಟೇಜ್‌ ಪ್ರಮಾಣ ಕಡಿಮಿ ಇತ್ತಂತ ಅನಸ್ತೈತಿ, ಈಗ ಸ್ವಲ್ಪ ಜಾಸ್ತಿ ಆಗಿರಬೇಕು. ಅದ್ಕ ಕಾಂಟ್ರ್ಯಾಕ್ಟರ್ಗೂ ತಲಿ ಕೆಟ್ಟಂಗ್‌ ಕಾಣತೈತಿ. ಅದ್ಕ ಪ್ರಧಾನಿಗೆ ಪತ್ರಾ ಬರದು ಆಳಾರ ನಿದ್ದಿಗೆಡಿಸ್ಯಾರಂತ ಕಾಣತೈತಿ.

ಕಾಂಗ್ರೆಸ್ನ್ಯಾರೂ ಇದ ಕಾವಿನ್ಯಾಗ ಸರ್ಕಾರ ಕೆಡಿವಿ ಬಿಡೋನ ಅಂತ ಕಸರತ್ತು ನಡಿಸಾಕತ್ತಾರು. ಹೆಂಗರ ಮಾಡಿ ದೌಡ್ನ ಸಿಎಂ ಆಗಬೇಕು ಅಂತ ಡಿಕೆ ಶಿವಕುಮಾರ್‌, ಸಿದ್ದರಾಮಯ್ಯ ಹಗಲು ರಾತ್ರಿ ಬಡಬಡಸಾಕತ್ತಾರು, ಇಬರಿಬ್ಬರ ಗದ್ದಲದಾಗ ಗೌಡರ ಜೋಡಿ ಸರ್ಕಾರ ಮಾಡೂದು ಬಂದ್ರ ಲಕ್‌ ಹೊಡಿಬೌದು ಅಂತ ಕಸರತ್ತು ಮಾಡಾಕತ್ತಿದ್ದ ಬಾಡಗಂಡಗಿ ಪಾಟೀಲ್ರಿಗೆ ಟಿಕೆಟ್‌ ತಪ್ಪಿಸಿ ಸೈಡ್‌ ಸರಿಸಿದ್ರು.

ಹಿರ್ಯಾರ ಮನಿ ಅಂತ ಕರಿಸಿಕೊಳ್ತಿದ್ದ ಪರಿಷತ್ನ ಎಲ್ಲಾರೂ ಸೇರಿ ವ್ಯಾಪಾರಸ್ತರ ಮನಿ ಮಾಡಾಕ್‌ ಏನಬೇಕೋ ಎಲ್ಲಾ ಮಾಡಾಕತ್ತಾರು. ಟಿಕೆಟ್‌ ತೊಗೊಬೇಕಂದ್ರ ಮಿನಿಮಮ್‌ ಹತ್ತುಕೋಟಿ ಖರ್ಚು ಮಾಡ್ತೇನಿ ಅಂತ ಗ್ಯಾರೆಂಟಿ ಕೊಟ್ರ ಮಾತ್ರ ಟಿಕೆಟ್‌ ಅಂತ ಪಕ್ಷದ ಅಧ್ಯಕ್ಷರ ಫ‌ರ್ಮಾನ್‌ ಹೊರಡಿಸಿದ್ರ ಪಕ್ಷಕ್ಕಾಗಿ ಮಣ್ಣು ಹೊರೊ ಕಾರ್ಯಕರ್ತಾ ಹೆಂಗ್‌ ಟಿಕೆಟ್‌ ತೊಗೊಳ್ಳಾಕಕ್ಕೇತಿ? ವ್ಯಾಪಾರಸ್ಥರು ಮಾತ್ರ ಪರಿಷತ್‌ ಟಿಕೆಟ್‌ ತೊಗೊಳ್ಳಾಕ್‌ ಸಾಧ್ಯ. ಬೆಂಗಳೂರಿನ ಕ್ಯಾಂಡಿಡೇಟ್‌ ಒಬ್ರು ಒಂದ್‌ ಓಟಿಗೆ ಐವತ್ತು ಲಕ್ಷಾ ಕೊಟ್ಟಾದ್ರೂ ಗೆಲ್ಲತೇನಿ ಅಂತ ಹೇಳ್ತಾರಂತ. ಲಕ್ಷಗಟ್ಟಲೇ ಕೊಟ್ಟು ಓಟ್‌ ಖರೀದಿ ಮಾಡಾರು, ಪರಿಷತ್ತಿಗೆ ಬಂದೇನು ನಾಡು, ನುಡಿ ಅಂತ ಭಾಷಣಾ ಮಾಡ್ತಾರಾ? ತಮ್ಮ ಅಕ್ರಮ ವ್ಯವಹಾರಗೋಳ ರಕ್ಷಣೆ ಮಾಡ್ಕೊಳ್ಳಾಕ ಇದೊಂದು ಪದವಿ ಖರೀದಿ ಮಾಡ್ತಾರು ಅಂತ ಅನಸ್ತೈತಿ.

ಎಲ್ಲಾ ವ್ಯಾಪಾರಸ್ತರೇ ಬಂದು ಸೇರಿಕೊಂಡ ಮ್ಯಾಲ ರೈತಗ ಬೆಂಬಲ ಬೆಲೆ ಕೊಡ್ರಿ, ರೈತರ ಪರ ಕಾನೂನು ಮಾಡ್ರಿ ಅಂದ್ರ ಕೇಳ್ತಾರ ಅವರು? ಅವರ ಬಿಜಿನೆಸ್‌ ಜಾಸ್ತಿ ಮಾಡಾಕ್‌ ಏನ್‌ ಕಾನೂನು ಬೇಕೋ ಅದ್ನ ಮಾಡ್ತಾರು. ದೇಶಕ್ಕ ಸ್ವಾತಂತ್ರ್ಯ ಬಂದಾಗಿಂದ್ಲೂ ಅಧಿಕಾರಕ್ಕ ಬಂದಿರೋ ಎಲ್ಲಾ ಸರ್ಕಾರಗೋಳು ರೈತ ಪರ ಸರ್ಕಾರ ಅಂತ ಹೇಳ್ಕೋಂತನ ಬಂದಾರು. ಆದ್ರೂ, ಅನ್ನದಾತನ ಆದಾಯ ಒಂದ್‌ ಪರ್ಸೆಂಟೂ ಹೆಚ್ಚಾಗಿಲ್ಲ. ಆದ್ರ, ಹತ್ತು ವರ್ಷ ಸರ್ಕಾರಿ ಕೆಲಸಾ ಮಾಡೋ ಗುಮಾಸ್ತನ ಆದಾಯ ಐದ ನೂರು ಪರ್ಸೆಂಟ್‌ ಹೆಚ್ಚಕ್ಕೇತಿ ಅಂದ್ರ ಸರ್ಕಾರಗೋಳು ಯಾರ ಪರವಾಗಿ ಕೆಲಸಾ ಮಾಡಾಕತ್ತಾವು ಅಂತ. ಹಿಂಗಾಗೇ ಸರ್ಕಾರ ಕಾನೂನು ವಾಪಸ್‌ ತೊಗೊಳ್ಳೋ ಭರವಸೆ ಕೊಟ್ರೂ ರೈತರು ಹೋರಾಟ ಹಿಂಪಡ್ಯಾಕ ರೆಡಿಯಿಲ್ಲ ಅಂತ ಅನಸ್ತೆçತಿ. ಹಬ್ಬದ ಸೀರಿ ಕೊಡ್ಸೋ ಭರವಸೆ ಕೊಟ್ರೂ ಸೀರಿ ಮನಿಗಿ ಬರೂಮಟಾ ರೈತರಂಗ ಮನ್ಯಾಗ ಸಣ್ಣಗ ಹೋರಾಟ ಶುರುವ ಐತಿ.

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next