Advertisement
ಯಾರಾದ್ರು ವ್ಯಕ್ತಿ ರಾತ್ರೋ ರಾತ್ರಿ ಸ್ಟಾರ್ ಆದ್ರ ಆಂವ ಬದಲಾಗದಿದ್ದರೂ ಅವರ ಆಜು ಬಾಜು ಇರಾರು ತಮಗ ತಾವ ಬದಲಕ್ಕಾರಂತ. ಬೊಮ್ಮಾಯಿ ಸಾಹೇಬ್ರು ಸಿಎಂ ಆಗಿರೋದ್ಕ ಯಜಮಾನ್ತಿ ಅಷ್ಟ ಅಲ್ಲಾ. ಬಹುತೇಕ ಉತ್ತರ ಕರ್ನಾಟಕದ ಮಂದಿ ತಮಗ ತಾವ ಸ್ಟೇಟಸ್ ಚೇಂಜ್ ಮಾಡ್ಕೊಂಡು, ಸುವರ್ಣ ಯುಗ ಬಂತು ಅನ್ನಾರಂಗ ಸಂಭ್ರಮ ಪಟ್ಟಾರು.
Related Articles
Advertisement
ಹೈಕಮಾಂಡ್ ಯಡಿಯೂರಪ್ಪ ಅವರ್ನ ಇಳಸಾಕ ಮಾಡಿದ್ದ ಕಸರತ್ತು ನೊಡಿದ್ರ ಏನೋ ದೊಡ್ಡ ಮಟ್ಟದ ಕ್ರಾಂತಿನ ಆಗಿ ಬಿಡತೈತಿ ಅನಾಂಗ ಇತ್ತು. ಈಗ ನೋಡಿದ್ರ ಗುಡ್ಡಾ ಅಗದು ಇಲಿ ಹಿಡದ್ರು ಅನ್ನಾರಂಗ ಹಿಂದಿನ ಮಂತ್ರಿಗೋಳ್ನ ಮುಂದುವರೆಸಿ ಹಳೆ ಬಾಗಿಲಿಗೆ ಪಾಲಿಸ್ ಮಾಡಿ ವಾರ್ನಿಸ್ ಹಚ್ಚಿದಂಗ ಆಗೇತಿ.
ಬೊಮ್ಮಾಯಿ ಸಾಹೇಬ್ರು ಭವಿಷ್ಯದ ಲೆಕ್ಕಾಚಾರ ಇಟ್ಕೊಂಡು ದೊಡ್ಡ ಗೌಡರ ಮನಿಗಿ ಹೋಗಿದ್ದು ನೋಡಿ ಯಡಿಯೂರಪ್ಪ ಏನು ಸುಮ್ನ ಕುಂದ್ರತಾರು ಅಂತೇನ ಅನಸುದಿಲ್ಲ. ಯಾಕಂದ್ರ ಇಷ್ಟೆಲ್ಲಾ ಮಾಡಿದ್ರೂ ಸ್ವಂತ ಮಗಗ ಒಂದು ಮಂತ್ರಿ ಸ್ಥಾನ ಕೊಡಸಾಕ್ ಆಗ್ಲಿಲ್ಲಾ ಅಂದ್ರ ಸುಮ್ನ ಕುಂದ್ರತಾರು ಅಂತೇನು ಅನಸುದಿಲ್ಲ. ಹೈಕಮಾಂಡು ಬೊಮ್ಮಾಯಿ ಸಾಹೇಬ್ರನ ಯಡಿಯೂರಪ್ಪ ಹಿಡಿತದಿಂದ ಹೊರಗ ತರಾಕ ಕಸರತ್ತು ನಡಿಸಿದಂಗ ಕಾಣತೈತಿ. ಇವರ ಇಬ್ಬರ ನಡಕ ಬೊಮ್ಮಾಯಿ ಸಾಹೇಬ್ರುದು ಹುಬ್ಬಳ್ಯಾಗ ತಗ್ಗು ಬಿದ್ದಿರೋ ರಸ್ತೆದಾಗ ಹೆಂಡ್ತಿ ಕರಕೊಂಡು ಸ್ಕೂಟರ್ ಓಡಿಸಿದಂಗ ಆಕ್ಕೇತಿ ಅಂತ ಅನಸ್ತೆತಿ.
ಅದರ ನಡಕ ಇಪ್ಪತ್ತು ವರ್ಷದಾಗ ಫಸ್ಟ್ ಟೈಮ್ ಕ್ಯಾಬಿನೆಟ್ ನಿಂದ ಹೊರಗುಳದಿರೋ ಜಾರಕಿಹೊಳಿ ಬ್ರದರ್ಸು ಸುಮ್ಮನ ಕುಂದ್ರತಾರು ಅಂತ ಅನಸುದಿಲ್ಲ. ಬೊಮ್ಮಾಯಿ ಸಾಹೇಬ್ರು ಎಷ್ಟು ದಿನಾ ಅಧಿಕಾರದಾಗ ಇದ್ರೂ ಅದೃಷ್ಟದ ಅವಕಾಶ, ಈ ಟೈಮಿನ್ಯಾಗ ನಮ್ಮಾರ ಸಿಎಂ ಆಗ್ಯಾರು ಅಂತೇಳಿ ಉತ್ತರ ಕರ್ನಾಟಕ ಮಂದಿ ತಮ್ಮ ಸ್ಟೇಟಸ್ ತಾವ ಚೇಂಜ್ ಮಾಡ್ಕೊಂಡಾರು. ಅವರ ಸ್ಟೇಟಸ್ ಬದಲಾಗಬೇಕು ಅಂದ್ರ ಬೊಮ್ಮಾಯಿ ಸಾಹೇಬ್ರು ಆ ಭಾಗದ ಕಡೆ ಸ್ವಲ್ಪ ಹೆಚ್ಚಿನಗಮನಹರಿಸಿದ್ರಜನರು ತಮಗ ತಾವ ಸಂಭ್ರಮ ಪಟ್ಟಿದ್ಕೂ ಒಂದ್ ಅರ್ಥಾ ಇರತೈತಿ. ಇಲ್ಲಾಂದ್ರ ಶೆಟ್ರಂಗ ಬಿಟ್ಟಿ ಅಧಿಕಾರ ಬಂದಷ್ಟು ದಿನಾ ಜಾತ್ರಿ ಮಾಡಿದ್ರಾತು ಅಂದ್ಕೊಂಡ್ರ, ಹುಬ್ಬಳ್ಳಿ-ಧಾರವಾಡದಾಗಿನಿ ಗುಂಡಿನೂ ಮುಚ್ಚಾಕ ಆಗುದಿಲ್ಲ.
ಶಂಕರ ಪಾಗೋಜಿ