ಪ್ರತಿಯೊಬ್ಬರಿಗೂ ಪ್ರವಾಸ ಎಂಬುದು ಮನಸ್ಸಿಗೆ ಮುದ ನೀಡುವಂತದ್ದು.
ಎಲ್ಲರಿಗೂ ಒಂದೆರಡು ದಿನ ಎಲ್ಲಿಯಾದರೂ ಹಸುರು ಸಿರಿಯಲ್ಲಿ ಅಥವಾ ಸಮುದ್ರ ತೀರದ ಪ್ರದೇಶಗಳಲ್ಲಿ ಸಮಯ ಕಳೆಯಬೇಕು, ದೇಹ ಮನಸ್ಸಿಗೆ ಸ್ವಲ್ಪ ವಿರಾಮ ನೀಡಬೇಕೆಂಬ ಆಸೆ ಇದ್ದೇ ಇರುತ್ತದೆ. ನಮಗೂ ಹೀಗೆ ಅನಿಸಿದ್ದು ಸುಳ್ಳಲ್ಲ.
ಡಿಸೆಂಬರ್‌ನಲ್ಲಿ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಅನಿವಾರ್ಯ ಕಾರಣ ಜತೆಗೆ ಕೋವಿಡ್ ನಿರ್ಬಂಧಗಳು ಪ್ರವಾಸಕ್ಕೆ ಅಡ್ಡಿಯಾಗಿದ್ದವು. ಈ ಕಾರಣದಿಂದ ಬದಲಾವಣೆಗಾಗಿ ನಾನು ಮತ್ತು ನನ್ನ ಗೆಳೆಯರಾದ ಗಣೇಶ ಮತ್ತು ಬಸವರಾಜ ಎಲ್ಲಿಗಾದರೂ ಹೊರಡಲು ತೀರ್ಮಾನಿಸಿದೆವು. ವಯಸ್ಸಿನಲ್ಲಿ ಚಿಕ್ಕವರಾದರೂ ನಮ್ಮ ಸ್ನೇಹಕ್ಕೆ ಮಾತ್ರ ವಯಸ್ಸಿನ ಅಡ್ಡಿ ಇಲ್ಲ. ಎಲ್ಲಿಗಾದರೂ ಪ್ರವಾಸಕ್ಕೆ ಹೋಗಬೇಕು ಅಂತ ಆಗಾಗ ಚರ್ಚೆ ನಡೆಸುತ್ತಿದ್ದೆವು.
ಶಾಂತವಾಗಿರುವ, ಹಸುರಿನಿಂದ ಕೂಡಿದ ಸ್ಥಳಕ್ಕೆ ಭೇಟಿ ನೀಡಬೇಕು ಎಂಬುದು ಎಲ್ಲರ ಒಮ್ಮತದ ಅಭಿಪ್ರಾಯವಾಗಿತ್ತು. ಅದರಂತೆ ಸಾತೋಡ್ಡಿ ಜಲಪಾತಕ್ಕೆ ಹೋಗುವುದು ಎಂದು ತೀರ್ಮಾನಿಸಲಾಯಿತು. ಅದರಂತೆ ಬೈಕ್‌ನಲ್ಲಿ ತೆರಳುವುದಕ್ಕೆ ನಿರ್ಧರಿಸಿದೆವು.
ಗಣೇಶ ಮತ್ತು ಬಸವರಾಜ ಅವರಿಗೆ ರಜೆ ಇರುವುದರಿಂದ ರವಿವಾರ ನಮ್ಮ ಪ್ರವಾಸದ ದಿನ ನಿಗಧಿಯಾಯಿತು. ನಿರ್ಧರಿಸಿದ ದಿನದಂದು ಬೆಳಗ್ಗೆ ಬೈಕ್ ಹತ್ತಿ ಹುಬ್ಬಳ್ಳಿ-ಕಲಘಟಗಿ-ಯಲ್ಲಾಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಬೈಕ್‌ನಲ್ಲಿ ಪ್ರಯಾಣ ಬೆಳೆಸಿದೆವು. ಬೆಳ್ಳಂಬೆಳಗ್ಗೆ ಚಳಿ ಇದ್ದರೂ ನಮ್ಮ ಯಾತ್ರೆ ಖುಷಿಯಿಂದ ಪ್ರಾರಂಭವಾಯಿತು. ಕ್ರಮೇಣ ಸೂರ್ಯನ ಕಿರಣಗಳು ನಮ್ಮನ್ನು ಸೋಕಿ ಸ್ವಲ್ಪ ಮಟ್ಟಿಗೆ ಚಳಿ ಕಡಿಮೆಯಾಯಿತು.
ಬಿಸಿಲಿನ ತಾಪ ಹೆಚ್ಚಾಗತೊಡಗಿತು. ಗೆಳೆಯರು ಉಪಾಹಾರ ಮುಗಿಸಿ ಪ್ರಯಾಣ ಪ್ರಾರಂಭ ಮುಂದುವರಿಸುವ ಎಂದಾಗ ನನಗೂ ಸರಿ ಎನಿಸಿತು. ದೇವಿಕೊಪ್ಪದಲ್ಲಿ ಹೊಟೇಲ್ ಒಂದರಲ್ಲಿ ತಿಂಡಿ ಮುಗಿಸಿ, ಉತ್ತರ ಕರ್ನಾಟಕದ ಕಡಕ್ ಚಾ ಕುಡಿದ ಮೇಲೆ ನಮ್ಮ ಬೈಕ್‌ನ ಚಕ್ರ ಮುಂದುವರಿಯಿತು.
ಬಳಿಕ ಎಲ್ಲೂ ನಿಲ್ಲದೆ ನಿರಂತರ ಪ್ರಯಾಣ ಬೆಳೆಸಿ ಯಲ್ಲಾಪುರ ತಲುಪಿದೆವು.ಅಲ್ಲಿಂದ ಸಾತೋಡ್ಡಿ ಜಲಪಾತಕ್ಕೆ 25 ಕಿ.ಮೀ. ಅಂತರ. ದಾರಿ ಉದ್ದಕ್ಕೂ ಹಚ್ಚ ಹಸುರಿನ ನೋಟ ನಮ್ಮ ಗಮನ ಸೆಳೆಯಿತು. ದಾರಿ ಮಧ್ಯ ಅಲ್ಲಲ್ಲಿ ಕಚ್ಛಾ ರಸ್ತೆ ಇದೆ. ಉಳಿದಂತೆ ಸಿಸಿ ರಸ್ತೆ, ಡಾಂಬರ ರಸ್ತೆಯೂ ಸಿಗುತ್ತದೆ. ಹಚ್ಚ ಹಸುರಿನ ಪ್ರದೇಶದಲ್ಲಿ ಗಾಡಿ ನಿಲ್ಲಿಸಿ ಫೋಟೋ ಶೂಟ್ ಮಾಡಿಸಿಕೊಂಡವು. ಸುಂದರ ಪ್ರಕೃತಿ ಮಡಿಲಲ್ಲಿ ವಿಹರಿಸುತ್ತ ದಾರಿ ಕ್ರಮಿಸಿದ್ದೇ ಗೊತ್ತಾಗಲಿಲ್ಲ. ಜಲಪಾತದ ಪ್ರವೇಶ ದ್ವಾರ ತಲುಪಿದೆವು. ಅಲ್ಲಿ ವಾಹನ ನಿಲುಗಡೆ ಮಾಡಿದೆವು. ಪಾರ್ಕಿಂಗ್ ಬೈಕ್‌ಗೆ 10 ರೂ.(ಒಬ್ಬರಿಗೆ 10 ರೂ.)ಶುಲ್ಕ ಪಾವತಿ ಮಾಡಿದೆವು. ಅಲ್ಲಿಂದ 1 ಕಿ.ಮೀ. ನಡೆದು ಜಲಪಾತ ತಲುಪಿದೆವು. ಅಲ್ಲಿಯೇ ಇದ್ದ ಹೋಟೆಲ್ ಒಂದರಲ್ಲಿ ಊಟಕ್ಕೆ ಪಲಾವ್ ಪಾರ್ಸಲ್ ತೆಗೆದುಕೊಂಡೆವು.
1 ಕಿ.ಮೀ. ದೂರ ಹೇಗೆ ಸಾಗಿದೆವು ಎಂದು ಗೊತ್ತಾಗಲಿಲ್ಲ. ಹಚ್ಚ ಹಸುರಿನ ವಾತಾವರಣ ಜತೆಗೆ ಸುಸಜ್ಜಿತ ರಸ್ತೆ. ಜಲಪಾತ ಸಮಿಪಿಸುತ್ತಿದ್ದಂತೆ ಎತ್ತರದಿಂದ ಧುಮುಕುವ ನೀರಿನ ಸಪ್ಪಳವೇ ರೋಮಾಂಚನಕಾರಿ ಅನುಭವ. ನಡೆದ ಸುಸ್ತೆಲ್ಲ ಅಲ್ಲಿಗೇ ಮಾಯ. ಜಲಪಾತ ಹತ್ತಿರ ಹೋದಂತೆ ಮತ್ತಷ್ಟು ಖುಷಿ ಉಲ್ಬಣಗೊಂಡು ಕೇಕೆ ಹಾಕಲು ಪ್ರಾರಂಭಿಸಿದೆವು. ಅಅನಂತರ ಅಲ್ಲಿಯೇ ಸ್ನಾನ ಮಾಡಿ ನೀರಿನಲ್ಲಿ 1-2 ಗಂಟೆಗಳ ಕಾಲ ಕಳೆದೆವು. ಒಂದೆಡೆ ಹಚ್ಚ ಹಸುರಿನ ಕಾಡು, ಎತ್ತರದಿಂದ ಧುಮುಕುವ ಜಲಪಾತ ನೋಡಿ ನಮ್ಮನ್ನೆ ನಾವು ಮರೆತು ಕಾಲ ಕಳೆದವು.
ಜತೆಗೆ ಸಾಕಷ್ಟು ಫೋಟೋವನ್ನೂ ಕ್ಲಿಕ್ಕಿಸಿಕೊಂಡೆವು. ನೀರಿನಲ್ಲಿ ಆಟ ಆಡಿದ ಬಳಿಕ ಹೊಟ್ಟೆ ಚುರುಗಟ್ಟಲು ಆರಂಭಿಸಿತು. ಹೀಗಾಗಿ ನಾವು ಒಯ್ದ ಪಲಾವ್ ತಿನ್ನಲು ಸೂಕ್ತ ಜಾಗ ಹುಡುಕಿ ಕುಳಿತೆವು. ಆ ಸಂದರ್ಭದಲ್ಲಿ ಕಪಿ ಸೈನ್ಯ ಹಾಜರಾಯಿತು. ಅವುಗಳಿಗೂ ಸ್ವಲ್ಪ ಊಟ ನೀಡಿ, ನಾವೂ ಮಾಡಿದೆವು. ಅನಂತರ ಒಲ್ಲದ ಮನಸ್ಸಿನಿಂದ ಬರಬೇಕಾಯಿತು. ಊರಿನ ಕಡೆಗೆ ಪ್ರಯಾಣ ಆರಂಭಿಸಿದೆವು. 6 ಕಿ.ಮೀ. ಕ್ರಮಿಸಿ ಶಿವಪುರ ತೂಗು ಸೇತುವೆ ನೋಡಿಕೊಂಡು ಊರ ಕಡೆಗೆ ಬೈಕ್ ಓಡಿಸಿದೆವು.
ಮುತ್ತಪ್ಪ ಎಸ್. ಕ್ಯಾಲಕೊಂಡ
ಕರ್ನಾಟಕ ಜಾನಪದ ವಿ.ವಿ.ಗೋಟಗೋಡಿ, ಶಿಗ್ಗಾವಿ