Advertisement

ಮುಖ್ಯಮಂತ್ರಿ ಹುದ್ದೆಯಿಂದಿಳಿಯುವವರ ಬಾಯಿಂದ ಯಾವ ವಾಣಿ ಹೊರ ಬರುತ್ತದೆ… : ಸತೀಶ್ ಜಾರಕಿಹೊಳಿ

05:28 PM Jul 19, 2021 | Team Udayavani |

ಬೆಳಗಾವಿ : ಮುಖ್ಯಮಂತ್ರಿ ಹುದ್ದೆಯಿಂದ ಒಬ್ಬರು ಕೆಳಗಿಳಿಯುತ್ತಾರೆ, ಮತ್ತೊಬ್ಬರು ಆ ಹುದ್ದೆಗೇರುತ್ತಾರೆ. ಆದರೆ, ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಯುವವರ ಬಾಯಿಂದ ಯಾವ ಸಂದೇಶ ಹೊರ ಬರುತ್ತದೆ ಎಂದು ಕಾಯುತ್ತಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾರ್ಮಿಕವಾಗಿ ಹೇಳಿದ್ದಾರೆ.

Advertisement

ನಗರದ ಕಾಂಗ್ರೆಸ್ ಭವನದಲ್ಲಿ  ಇಂದು(ಸೋಮವಾರ, ಜುಲೈ 19) ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಬದಲಾವಣೆ ಅದು ಪಕ್ಷದ ಆಂತರಿಕ ವಿಷಯ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಬದಲಾವಣೆಯಿಂದ ಕಾಂಗ್ರೆಸ್ ನವರಿಗೆ ಯಾವ ಲಾಭವೂ ಇಲ್ಲ, ನಷ್ಟವೂ ಇಲ್ಲ. ಸಿಎಂ ಬದಲಾದರೂ ಸರ್ಕಾರ ಅವರದ್ದೇ ಇರುತ್ತದೆ. ಹೀಗಾಗಿ ನಾವು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ : ವಿಶಾಲ ಗಾಣಿಗ ಕೊಲೆ ಪ್ರಕರಣ: ಪತಿಯಿಂದಲೇ ಕೊಲೆಗೆ ಸುಪಾರಿ? : ಹಂತಕರಿಬ್ಬರು ಪೊಲೀಸ್ ವಶದಲ್ಲಿ

ಮಧ್ಯಂತರ ಚುನಾವಣೆ ಬರಬಹುದು : ಸತೀಶ್ ಜಾರಕಿಹೊಳಿ

Advertisement

ರಾಜಕೀಯದಲ್ಲಿ ಹೀಗೇಯೇ ಎಂದು ಹೇಳಲೂ ಆಗುವುದಿಲ್ಲ. ಮಧ್ಯಂತರ ಚುನಾವಣೆ ಬಂದರೂ ಬರಬಹುದು. ಹೀಗಾಗಿ, ಕಾಂಗ್ರೆಸ್ ಪಕ್ಷದಿಂದ ರಾಜ್ಯಾದ್ಯಂತ ಈಗಿನಿಂದಲೇ ಪಕ್ಷ ಸಂಘಟನೆ ಮಾಡುತ್ತಿದ್ದೇವೆ ಎಂದು ಅವರು ಅಭಿಪ್ರಾಯ ಪಟ್ಟರು.

ಜಿಲ್ಲೆ ಸೇರಿ ಮುಂಬೈ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ನಾವು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ. ತಾಪಂ, ಜಿಪಂ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ರಾಜಕೀಯ ಎಂದ ಮೇಲೆ ಜಾತಿ ಲೆಕ್ಕಾಚಾರ ಇದ್ದೆ ಇರುತ್ತದೆ. ಆಯಾ ಜಾತಿ ಮುಖಂಡರು ಕಾಂಗ್ರೆಸ್ ನಲ್ಲಿ ಪಕ್ಷ‌ ಸಂಘಟನೆ ಮಾಡುವಲ್ಲಿ ನಿರತರಾಗಿದ್ದಾರೆ, ಅದು‌ ಸ್ವಾಭಾವಿಕ ಎಂದು ಸತೀಶ ಪ್ರತಿಕ್ರಿಯಿಸಿದರು.

ಬೆಳಗಾವಿ ಸ್ಮಾರ್ಟ್ ಸಿಟಿ ಕಾಮಗಾರಿ ಅವೈಜ್ಞಾನಿಕವಾಗಿದೆ. ದೆಹಲಿಯಲ್ಲಿ ಕುಳಿತು ಯೋಜನೆ ರೂಪಿಸಿ, ಆದೇಶ ಮಾಡುತ್ತಾರೆ. ಆದರೆ, ಅದು ಇಲ್ಲಿನ ಪರಿಸ್ಥಿತಿಗೆ ಅನ್ವಯವಾಗುವುದಿಲ್ಲ. ಹೀಗಾಗಿ ಇಂಥ ಅವಘಡಗಳು ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ‌ಶಾಸಕರನ್ನು ಕರೆದುಕೊಂಡು‌ ಸಭೆ ಮಾಡಬೇಕು. ಸ್ಥಳೀಯರೇ ಸಚಿವರಿದ್ದಾಗ ಸುಲಭವಾಗುತ್ತದೆ. ಬೇರೆ ಜಿಲ್ಲೆಯವರನ್ನು ಉಸ್ತುವಾರಿಯನ್ನಾಗಿ ಮಾಡಿದರೆ ಸಮಸ್ಯೆಯಾಗುತ್ತದೆ ಎಂದಿದ್ದಾರೆ.

ಇತ್ತೀಚೆಗೆ ನಡೆದ ಬೆಳಗಾವಿ ಜಿಲ್ಲಾ ಕೆಡಿಪಿ ಸಭೆಯಲ್ಲಿ ಸುಮಾರು 20 ಇಲಾಖೆಗಳ ಬಗ್ಗೆ ಚರ್ಚೆಯೇ ಆಗಿಲ್ಲ. ಇಲಾಖಾವಾರು ಪ್ರತ್ಯೇಕವಾಗಿ ಸಭೆ ಮಾಡಿದರೆ ಮಾತ್ರ ಸಮಸ್ಯೆ ಬಗೆಹರಿಯುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಾವು ಉಸ್ತುವಾರಿ ಸಚಿವರಾಗಿದ್ದಾಗ ಕೆಡಿಪಿ ಸಭೆ ಹೊರತುಪಡಿಸಿ, ಎಲ್ಲ ಇಲಾಖೆಗಳ ಪ್ರತ್ಯೇಕ ಸಭೆ ಮಾಡುತ್ತಿದ್ದೆವು. ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಸಭೆಗಳನ್ನೂ ಮಾಡಿದ್ದೇವೆ. ಜಿಲ್ಲಾಧಿಕಾರಿಗಳನ್ನು ನಾವೇ ಕರೆಸಿ ಸಭೆ ಮಾಡಿದ್ದೇವೆ. ಆದರೆ, ಈಗ ಜಿಲ್ಲೆಯಲ್ಲಿ ಸಮಸ್ಯೆಗಳನ್ನು ಕೇಳುವವರೇ ಇಲ್ಲವಾಗಿದ್ದಾರೆ.

ಜಿಲ್ಲೆಯ ಜನಪ್ರತಿನಿಧಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಾರೆ. ಅಲ್ಲಿಂದ ಸೀದಾ ತಮ್ಮ ಕ್ಷೇತ್ರಗಳಿಗೆ ತೆರಳುತ್ತಾರೆ. ಹೀಗಾಗಿ, ಸಮಸ್ಯೆಗಳು  ಹೆಚ್ಚಾಗುತ್ತಿವೆ ಎಂದು ಸತೀಶ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ :  ಬಾಹ್ಯಾಕಾಶ ಸಾಹಸ…ಜೆಫ್ ಬೆಝೋಸ್ ತಂಡಕ್ಕೆ ಮುಂಬೈನ ಯುವತಿ ಸಂಜಲ್ ಸಾಥ್!

Advertisement

Udayavani is now on Telegram. Click here to join our channel and stay updated with the latest news.

Next