Advertisement
ಮಳೆಗಾಲದಲ್ಲಿ ಪ್ರತೀ ದಿನ ಈ ಕಾಲುಸಂಕ ದಾಟಿ ಹತ್ತಾರು ವಿದ್ಯಾರ್ಥಿಗಳು ತುಂಬಿ ಹರಿಯುವ ಹೊಳೆ ದಾಟುತ್ತಾರೆ. ಕಾಲ್ತೋಡು ಘಟನೆಯ ಬಳಿಕ ಇಲ್ಲಿನ ಜನರ ಆತಂಕ ಇನ್ನಷ್ಟು ಹೆಚ್ಚಿದೆ.
ಇಲ್ಲಿನ ಸಮಸ್ಯೆ ಕುರಿತು ಉದಯವಾಣಿ ಎರಡೆರಡು ಬಾರಿ ವರದಿ ಪ್ರಕಟಿಸಿತ್ತು. ಗೋಳಿಹೊಳೆ ಗ್ರಾ.ಪಂ. ವ್ಯಾಪ್ತಿಯ ಎಳಜಿತ್, ಸಾತೇರಿ, ಬಾಳೆಗದ್ದೆ ನಡುವಣ ಈ ಹೊಳೆ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಊರವರೇ ನಿರ್ಮಿಸಿರುವ ತಾತ್ಕಾಲಿಕ ಮರದ ದಿಮ್ಮಿಯ ಕಾಲುಸಂಕ ಒಂದೆರಡು ಬಾರಿ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಸಂಪರ್ಕ ಅನಿವಾರ್ಯ; ಹೀಗಾಗಿ ಮತ್ತೆ ನಿರ್ಮಿಸಿಕೊಂಡಿದ್ದಾರೆ. ಪುಟಾಣಿ ಮಕ್ಕಳು, ವೃದ್ಧರು ಎಂಬ ಭೇದವಿಲ್ಲದೆ ಎಲ್ಲರೂ ಈ ಸಂಕ ದಾಟಲು ಜೀವ ಕೈಯಲ್ಲಿ ಹಿಡಿದು ಸರ್ಕಸ್ ಮಾಡಬೇಕಿದೆ. ಶಾಶ್ವತ ಸೇತುವೆಗಾಗಿ ಹಲವು ಬಾರಿ ಮನವಿ ನೀಡಿದರೂ ಸ್ಪಂದನ ದೊರೆತಿಲ್ಲ.
Related Articles
ಕಳೆದ ವರ್ಷ ಈ ಸಂಕದಿಂದ ಒಂದಿಬ್ಬರು ಮಕ್ಕಳು ನೀರಿಗೆ ಬಿದ್ದಿದ್ದು ಸ್ಥಳೀಯರು ರಕ್ಷಿಸಿದ್ದರು. ಈ ಸೇತುವೆಯ ಮೂಲಕ ಸಾಗದಿದ್ದರೆ 10 ಕಿ.ಮೀ. ಸುತ್ತು ಬಳಸಿ ಸಾಗಬೇಕು. ಅಪಾಯವೆಂಬುದು ಗೊತ್ತಿದ್ದರೂ ಕಾಲುಸಂಕದ ಬಳಕೆ ಅನಿವಾರ್ಯವಾಗಿದೆ. ಬೈಂದೂರು ಭಾಗದಲ್ಲಿ ಇಂತಹ ಅನೇಕ ಕಾಲು ಸಂಕಗಳಿವೆ. ಸಾಂತೇರಿ ಕಾಲುಸಂಕ ಅತ್ಯಂತ ಅಪಾಯಕಾರಿಯಾಗಿದೆ.
Advertisement
ಜಿಲ್ಲಾಡಳಿತಕ್ಕೆ ಮನವಿಸಾತೇರಿ ಕಾಲುಸಂಕ ಇರುವಲ್ಲಿ ಶಾಶ್ವತ ಸೇತುವೆ ನಿರ್ಮಾಣಕ್ಕೆ ಪ್ರಕೃತಿ ವಿಕೋಪ ನಿಧಿಯಲ್ಲಿ ಅನುದಾನ ನೀಡಲು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ ಎಂದು ಗೋಳಿಹೊಳೆ ಗ್ರಾ.ಪಂ. ಪಿಡಿಒ ಮಾಧವ ತಿಳಿಸಿದ್ದಾರೆ. ಬಹುತೇಕ ಕಡೆ ಇದೇ ಸ್ಥಿತಿ
ಕಾಲ್ತೋಡು, ಸಾಂತೇರಿ ಮಾತ್ರ ಅಲ್ಲ; ಕರಾವಳಿ ಮತ್ತು ಮಲೆನಾಡಿನ ಅನೇಕ ಕಡೆ ಹಳ್ಳ, ಹೊಳೆಗಳನ್ನು ದಾಟಲು ಇಂತಹ ಕಾಲುಸಂಕಗಳೇ ಗತಿ. ನಿತ್ಯವೂ ಇಂತಹ ಸಂಕ ದಾಟಬೇಕಾದ ಸ್ಥಿತಿ ದಕ್ಷಿಣ ಕನ್ನಡದ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ, ಉಡುಪಿ ಜಿಲ್ಲೆಯ ಹೆಬ್ರಿ, ಬೈಂದೂರು, ಕುಂದಾಪುರ ಮತ್ತಿತರ ತಾಲೂಕುಗಳಲ್ಲಿ ಇದೆ. ಬೇಸಗೆಯಲ್ಲಿ ಬಿದ್ದರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಬಹುದು. ಮಳೆಗಾಲದಲ್ಲಿ ಅಗಲ ಕಿರಿದಾದ ಈ ಹಳ್ಳ-ಹೊಳೆಗಳು ತುಂಬಿ ಹರಿಯುತ್ತವೆ. ಬಿದ್ದರೆ ಪುಟ್ಟ ಮಕ್ಕಳಷ್ಟೇ ಅಲ್ಲ; ದೊಡ್ಡವರು ಕೂಡ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಬಹುದು. ಇಂಥ ಎಲ್ಲ ಕಡೆ ಶಾಶ್ವತ ಸೇತುವೆ ನಿರ್ಮಾಣಕ್ಕೆ ಜನಪ್ರತಿನಿಧಿಗಳು, ಆಡಳಿತ ಮುತುವರ್ಜಿ ವಹಿಸಬೇಕಿದೆ. ಗುಡ್ಡಗಾಡು ಪ್ರದೇಶವಾದ ಕಾರಣ ಹಲವೆಡೆ ಕಾಲುಸಂಕದ ಸಮಸ್ಯೆಗಳಿವೆ. ಕಾಲ್ತೋಡಿನ 17 ಕಡೆ ಕಾಲುಸಂಕಗಳಿದ್ದು ಅವುಗಳಲ್ಲಿ ಐದು ಕಡೆ ಶಾಶ್ವತ ಸೇತುವೆ ಆಗಿದೆ. ಸಾತೇರಿ ಕೂಡ ಗಮನಕ್ಕೆ ಬಂದಿದ್ದು ಶೀಘ್ರ ಸೂಕ್ತ ಕ್ರಮಕ್ಕೆ ಕೈಗೊಳ್ಳಲು ಜಿಲ್ಲಾಡಳಿತದಲ್ಲಿ ಇರುವ ಅವಕಾಶದಲ್ಲಿ ಸ್ಪಂದಿಸುವೆ.
– ಬಿ.ಎಂ. ಸುಕುಮಾರ ಶೆಟ್ಟಿ, ಬೈಂದೂರು ಶಾಸಕ ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದರೂ ಮಂಜೂ ರಾತಿ ದೊರೆತಿಲ್ಲ. ಸರಕಾರ ಅನುದಾನ ಮೀಸಲಿಟ್ಟಿಲ್ಲ. ಕಾಲ್ತೋಡು ಘಟನೆಯಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ, ಈ ಸಂಕದ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ ಪಡುತ್ತಿದ್ದಾರೆ. ಅವಘಡ ಸಂಭವಿಸುವ ಮೊದಲೇ ಸರಕಾರ, ಇಲಾಖೆ ಗಮನ ಹರಿಸಬೇಕಾಗಿದೆ.
– ಆನಂದ ಪೂಜಾರಿ, ಶೆಟ್ಟಿ, ಸ್ಥಳೀಯರು