“ನಾವು ಏನು ಅಂದುಕೊಂಡಿದ್ದೆವೋ, ಅದಕ್ಕಿಂತಲೂ ಚೆನ್ನಾಗಿ ಸಿನಿಮಾ ಬಂದಿದೆ. ರಿಲೀಸ್‌ಗೂ ಮೊದಲೇ ಒಳ್ಳೆಯ ರೆಸ್ಪಾನ್ಸ್ ಸಿಗ್ತಿದೆ. ನಾವು ಮೊದಲು ಸುಮಾರು 200 ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದೆವು. ಆದ್ರೆ ಈಗ ಸುಮಾರು 300 ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದೆ. ಸಾಂಗ್ಸ್, ಟ್ರೇಲರ್ ಎಲ್ಲದಕ್ಕೂ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ. ರಿಲೀಸ್‌ಗೂ ಮೊದಲೇ ಒಳ್ಳೆಯ ಮೊತ್ತಕ್ಕೆ ಸಿನಿಮಾ ಸೇಲ್ ಆಗಿದೆ. ಇದಕ್ಕಿಂತ ಖುಷಿ ಇನ್ನೇನು ಬೇಕು…’ ಹೀಗೆ ಹೇಳುತ್ತ ಮಾತಿಗಿಳಿದವರು ನಟ ನೀನಾಸಂ ಸತೀಶ್.
ಅಂದಹಾಗೆ, ಸತೀಶ್ ಇಷ್ಟು ಖುಷಿಯಾಗಿ ಹೇಳಿಕೊಂಡಿದ್ದು, ಇಂದು ತೆರೆಗೆ ಬರುತ್ತಿರುವ ಅವರ “ಬ್ರಹ್ಮಚಾರಿ’ ಚಿತ್ರದ ಬಗ್ಗೆ. “ಅಯೋಗ್ಯ’ ಚಿತ್ರದ ಸಕ್ಸಸ್ ಬಳಿಕ ಸತೀಶ್ ಅಭಿನಯದ ಮತ್ತೂಂದು ಚಿತ್ರ “ಬ್ರಹ್ಮಚಾರಿ’ ಸಾಕಷ್ಟು ನಿರೀಕ್ಷೆಗಳೊಂದಿಗೆ ಈ ವಾರ ತೆರೆಗೆ ಬರುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ ಮಾತಿಗೆ ಸಿಕ್ಕ ನೀನಾಸಂ ಸತೀಶ್, “ಬ್ರಹ್ಮಚಾರಿ’ಯ ಹಿಂದಿನ ಒಂದಷ್ಟು ಸಂಗತಿಗಳನ್ನು ತೆರೆದಿಟ್ಟರು.
“ಟೈಟಲ್ಲೇ ಹೇಳುವಂತೆ, “ಬ್ರಹ್ಮಚಾರಿ’ ಔಟ್ ಆ್ಯಂಡ್ ಔಟ್ ರೊಮ್ಯಾಂಟಿಕ್-ಕಾಮಿಡಿ ಸಿನಿಮಾ. ಹಾಗಾಗಿ ಸಿನಿಮಾದಲ್ಲಿ ರೊಮ್ಯಾನ್ಸ್-ಕಾಮಿಡಿ ಎರಡೂ ಸ್ವಲ್ಪ ಹೆಚ್ಚಾಗಿಯೇ ಇದೆ. ಇಲ್ಲಿಯವರೆಗೆ ನಾನು ಮಾಡಿದ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ಇದರಲ್ಲಿದೆ. ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಅನ್ನೋ ನಂಬಿಕೆ ಇದೆ. ಥಿಯೇಟರ್‌ಗೆ ಬರುವ ಪ್ರೇಕ್ಷಕರು ಕಂಪ್ಲೀಟ್ ಎಂಜಾಯ್ ಮಾಡಬೇಕು ಅನ್ನೋದು ನಮ್ಮ ಉದ್ದೇಶ. ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು “ಬ್ರಹ್ಮಚಾರಿ’ ಸಿನಿಮಾ ಮಾಡಿದ್ದೇವೆ. ಹಾಗಾಗಿ ಕೊಟ್ಟ ಕಾಸಿಗೆ ಮೋಸ ಮಾಡದೆ “ಬ್ರಹ್ಮಚಾರಿ’ ಮನರಂಜಿಸುತ್ತಾನೆ’ ಎಂಬ ಭರವಸೆಯ ಮಾತುಗಳನ್ನಾಡುತ್ತಾರೆ ಸತೀಶ್.
ಒಂದೆಡೆ ಈಗಾಗಲೇ ಬಿಡುಗಡೆಯಾಗಿರುವ “ಬ್ರಹ್ಮಚಾರಿ’ ಚಿತ್ರದ ಟ್ರೇಲರ್, ಹಾಡುಗಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಟ್ರೇಲರ್-ಸಾಂಗ್ಸ್ ನೋಡಿದವರು “ಬ್ರಹ್ಮಚಾರಿ’ ಸಖತ್ “ಹಾಟ್’ ಆಗಿವೆ, ಸತೀಶ್-ಅದಿತಿ ಕೆಮಿಸ್ಟ್ರಿ ಕೊಂಚ “ಕ್ಲೋಸ್’ ಆಗಿದೆ, ಚಿತ್ರದಲ್ಲಿ “ಪೋಲಿ’ತನ ಎದ್ದು ಕಾಣುತ್ತಿದೆ ಎನ್ನುವ ಕಾಮೆಂಟ್ಸ್ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸುವ ಸತೀಶ್, “ಇದೊಂದು ರೊಮ್ಯಾಂಟಿಕ್-ಕಾಮಿಡಿ ಸಿನಿಮಾವಾಗಿರುವುದರಿಂದ, ಸನ್ನಿವೇಶಕ್ಕೆ ಸೀಮಿತವಾಗಿರುವ ಮತ್ತು ಅಗತ್ಯವಿರುವಷ್ಟು ಮಾತ್ರ ಅಂಥ ಡೈಲಾಗ್ಸ್, ಸೀನ್‌ಗಳು ಇವೆಯಷ್ಟೆ. ಎಲ್ಲೂ ಅನಗತ್ಯವಾಗಿ ಏನನ್ನೂ ಹೇಳಿಲ್ಲ, ತೋರಿಸಿಲ್ಲ. ಇಡೀ ಸಿನಿಮಾದಲ್ಲಿ ಕೆಲವೊಂದು ಸನ್ನಿವೇಶಗಳನ್ನು ಹೊರತುಪಡಿಸಿದರೆ, ಪ್ರೇಕ್ಷಕರು ಅಂದುಕೊಳ್ಳುವ
“ಪೋಲಿ’ ತನ ಆಗಲಿ, ಮುಜುಗರ ತರಿಸುವ
ದೃಶ್ಯಗಳಾಗಲಿ ಖಂಡಿತ ಇಲ್ಲ.
ಇಡೀ ಫ್ಯಾಮಿಲಿ ಕುಳಿತು ಎಂಜಾಯ್ ಮಾಡಬಹುದಾದಂಥ ಸಿನಿಮಾ ಇದು. ಸೆನ್ಸಾರ್ ಕೂಡ ಯಾವುದೇ ಕಟ್ಸ್ ಇಲ್ಲದೆ “ಯು/ಎ’ ಸರ್ಟಿಫಿಕೆಟ್ ಕೊಟ್ಟಿದೆ. ಸಿನಿಮಾ ನೋಡಿದ ಮೇಲೆ ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ’ ಎನ್ನುತ್ತಾರೆ.
“ಬ್ರಹ್ಮಚಾರಿ’ ಚಿತ್ರದ ಸಹ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಮಾತನಾಡುವ ಸತೀಶ್, “ಇದೊಂದು ಟೀಮ್ ವರ್ಕ್‌ನಿಂದಾದ ಸಿನಿಮಾ. ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ, ಇಡೀ ಸಿನಿಮಾವನ್ನು ಚೆಂದಗಾಣಿಸಿದ್ದಾರೆ. ಹೀರೋಯಿನ್ ಅದಿತಿ ಪ್ರಭುದೇವ, ಶಿವರಾಜ್ ಕೆ.ಆರ್ ಪೇಟೆ, ದತ್ತಣ್ಣ ಎಲ್ಲರ ನಟನೆ ಕೂಡ ನೋಡುಗರಿಗೆ ಇಷ್ಟವಾಗುತ್ತದೆ. ತುಂಬ ಪ್ಯಾಷನೇಟ್ ಆಗಿರುವ ನಿರ್ಮಾಪಕ ಉದಯ್ ಮೆಹ್ತಾ, ಯಾವುದಕ್ಕೂ ಕೊರತೆಯಾಗದಂತೆ ಸಿನಿಮಾ ನಿರ್ಮಿಸಿದ್ದಾರೆ. ನಿರ್ದೇಶಕ ಚಂದ್ರ ಮೋಹನ್ ತೆರೆಹಿಂದಿನ ನಿಜವಾದ ಹೀರೋ. ಚಿತ್ರದ ಸಣ್ಣ ಸಣ್ಣ ಸೂಕ್ಷ್ಮ ವಿಷಯಗಳನ್ನೂ ಪರಿಣಾಮಕಾರಿಯಾಗಿ ತೆರೆಮೇಲೆ ತಂದಿದ್ದಾರೆ. ಒಟ್ಟಾರೆ ಇಡೀ ಟೀಮ್ ಎಫರ್ಟ್ ಹೇಗಿದೆ ಅನ್ನೋದು ಸ್ಕ್ರೀನ್ ಮೇಲೆ ಗೊತ್ತಾಗುತ್ತದೆ’ ಎನ್ನುತ್ತಾರೆ. ಒಟ್ಟಾರೆ ತೆರೆಗೆ ಬರೋದಕ್ಕೂ ಮುನ್ನವೇ ತನ್ನ ಟೈಟಲ್, ಪೋಸ್ಟರ್, ಟ್ರೇಲರ್ ಮತ್ತು ಹಾಡುಗಳ ಮೂಲಕ ಗಾಂಧಿನಗರದ ಸಿನಿಮಂದಿಯ ಗಮನ ಸೆಳೆಯುತ್ತಿರುವ “ಬ್ರಹ್ಮಚಾರಿ’ ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಮನರಂಜನೆ ನೀಡಿ, ಇಷ್ಟವಾಗುತ್ತಾನೆ ಅನ್ನೋದು ಇದೇ ವಾರಾಂತ್ಯದಲ್ಲಿ ಗೊತ್ತಾಗಲಿದೆ.
ಜಿ.ಎಸ್. ಕಾರ್ತಿಕ ಸುಧನ್