ಕಾರವಾರ: ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಹಣಕೋಣ ಸಾತೇರಿ ದೇವಿ ದರ್ಶನಕ್ಕೆ ಭಕ್ತರ ಸಾಗರವೇ ಹರಿದು ಬಂದಿದೆ. ವರ್ಷದಲ್ಲಿ ಏಳು ದಿನ ಮಾತ್ರ ಬಾಗಿಲು ತೆರೆಯುವ ಶ್ರೀ ಸಾತೇರಿ ದೇವಿ ದರ್ಶನಕ್ಕೆ ಜಿಲ್ಲೆಯ ಮಾತ್ರವಲ್ಲದೆ ಗೋವಾ ಹಾಗೂ ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸುತ್ತಿದ್ದು, ಸೆ.9ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದರಿಂದಾಗಿ ಸೋಮವಾರ ಬೆಳಗ್ಗೆಯಿಂದಲೇ ಸಾವಿರಾರು ಜನ ಸರದಿ
ಸಾಲಿನಲ್ಲಿ ನಿಂತು ಶ್ರೀ ದೇವಿ ದರ್ಶನ ಪಡೆದುಕೊಳ್ಳೂತ್ತಿದ್ದಾರೆ. ಶುಕ್ರವಾರದತನಕ ಸಾರ್ವಜನಿಕರಿಗೆ ದೇವಾಲಯ ತೆರದಿರುತ್ತದೆ.
ಹೂ, ಹಣ್ಣು-ಕಾಯಿ ಸೇರಿದಂತೆ ಉಡಿ ತುಂಬುವ ಮೂಲಕ ತಮ್ಮ ಹರಕೆಗಳನ್ನು ದಿನವೂ ಸಲ್ಲಿಸಲಾಗುತ್ತಿದೆ. ಕಾರವಾರ ತಾಲೂಕಿನ ಹಣಕೋಣ ಗ್ರಾಮದಲ್ಲಿರುವ ಸಾತೇರಿ ದೇವಸ್ಥಾನದಲ್ಲಿ ದೇವಿ ದರ್ಶನಕ್ಕೆ ವರ್ಷದಲ್ಲಿ ಏಳು ದಿನ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ. ಸಾತೇರಿ ದೇವಿ ತನ್ನ ಜಾತ್ರಾ ಮಹೋತ್ಸವದಲ್ಲಿ ಮಾತ್ರ ಭಕ್ತರಿಗೆ ದರ್ಶನ ಸೆ.4 ರಂದು ಕುಳಾವಿ ಸಮುದಾಯದ ಮಾತೆಯ , ಕುವರಿಯರಿಂದ ಅಡಕೆ, ಪುರುಷರಿಂದ ತಳಯಿ ಸಲ್ಲಿಸಲಾಗುತ್ತದೆ. ಸೆ.9 ರಂದು ಸಂಜೆ 4 ರವರೆಗೆ ಸೇವೆ ಸ್ವೀಕಾರ, 5ಕ್ಕೆ ದೇವಸ್ಥಾನದ ಗರ್ಭಗುಡಿ ಬಾಗಿಲನ್ನು ಪುನಃ ಮುಚ್ಚಲಾಗುತ್ತದೆ.
ಈ ಸಾತೇರಿ ದೇವಿ ಭಕ್ತರ ಕಷ್ಟಗಳನ್ನು ನಿವಾರಿಸುತ್ತಿದ್ದಳೆ ಎಂಬ ಕತೆಯಿದೆ. ಒಮ್ಮೆ ದೇವಿ ಬಾವಿಯ ಪಕ್ಕದಲ್ಲಿ ಸ್ನಾನ ಮಾಡಿ ಕೂದಲನ್ನ ಬಾಚಿಕೊಳ್ಳುವಾಗ ದುಷ್ಟನ ಕಣ್ಣು ದೇವಿ ಮೇಲೆ ಬಿದ್ದು ದೈವ ಸಮಾನ ಸ್ತ್ರೀ ಬಳಿ ಬಂದಾಗ ಆಕೆ ರಕ್ಷಣೆಗಾಗಿ ಬಾವಿಗೆ ಹಾರಿ ಅದೃಶ್ಯಳಾದಳಂತೆ. ಬಳಿಕ ಊರಿನ ಹಿರಿಯನೊಬ್ಬನಿಗೆ ದೇವಿ ಕನಸಿನಲ್ಲಿ ಬಂದು ತಾನು ಬಾವಿಯಲ್ಲಿ ಅದೃಶ್ಯಳಾಗಿದ್ದು, ತಾನು ನೆಲೆಸಿರುವ ಸ್ಥಳದಲ್ಲೇ ಸಣ್ಣ ಗುಡಿಯೊಂದನ್ನು ಕಟ್ಟಿಕೊಡುವಂತೆ ಹೇಳಿದಳು ಎಂಬ ಕತೆ ಈಗಲೂ ಜನಜನಿತವಾಗಿದೆ.
ವರ್ಷದಲ್ಲಿ 7 ದಿನಗಳ ಕಾಲ ಮಾತ್ರ ತನ್ನ ದರ್ಶನ ನೀಡುವುದಾಗಿ ತಿಳಿಸಿದ್ದಳಂತೆ. ಅದರಂತೆ ನಂತರದ ದಿನಗಳಲ್ಲಿ ಹಣಕೋಣದಲ್ಲಿ ಚಿಕ್ಕ ಗುಡಿ ಕಟ್ಟಲಾಯಿತು. ಈ ದೇವತೆ ಹಾಗೂ ದೇವಸ್ಥಾನದ ಇತಿಹಾಸದಂತೆ ಇಲ್ಲಿಯವರೆಗೂ ಏಳು ದಿನ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ದೊರಕಿಸಿಕೊಡಲಾಗುತ್ತದೆ.