ಮಂಗಳೂರು: ನಗರದ ನಾಗುರಿಯಲ್ಲಿ ನ. 19ರಂದು ಕುಕ್ಕರ್ ಬಾಂಬ್ ಸ್ಫೋಟಕ್ಕೆ ಮೊದಲು ಕರಾವಳಿಯಲ್ಲಿ ಸ್ಯಾಟಲೈಟ್ ಫೋನ್‌ಗಳು ಕ್ರಿಯಾಶೀಲವಾಗಿದ್ದವು ಎಂಬ ಮಾಹಿತಿ ಈಗ ಲಭ್ಯವಾಗಿದೆ.
ಕರಾವಳಿಯ ದಟ್ಟಾರಣ್ಯ ಪ್ರದೇಶದಲ್ಲಿ ನಿಗೂಢ ಚಟುವಟಿಕೆಗಳು ನಡೆದಿರುವ ಬಗ್ಗೆ ಗುಪ್ತಚರ ಮೂಲಗಳು ದೃಢಪಡಿಸಿವೆ. ಸ್ಫೋಟಕ್ಕೂ ಮುನ್ನ ಹಲವಾರು ಬಾರಿ ಉಪಗ್ರಹ ಫೋನ್‌ಗಳು ರಿಂಗ್ ಆಗುತ್ತಿದ್ದವು.
ನ. 18ರಂದು ಬಂಟ್ವಾಳ ಬಳಿಯ ಕಕ್ಕಿಂಜೆ ಅರಣ್ಯ ಪ್ರದೇಶದಲ್ಲಿ ತುರಾಯಾ ಸ್ಯಾಟಲೈಟ್ ಫೋನ್ ಸಕ್ರಿಯವಾಗಿದ್ದುದು ತಿಳಿದುಬಂದಿದೆ. ನ. 19ರಂದು ಬಂಟ್ವಾಳದ ಬಿ.ಸಿ. ರೋಡ್‌ಗೆ ಶಾರೀಕ್ ಬಂದಿದ್ದ ಎನ್ನುವ ಹಿನ್ನೆಲೆಯಲ್ಲಿ ಈ ಅಂಶವೀಗ ಮಹತ್ವ ಪಡೆದುಕೊಂಡಿದೆ. ಯಾರೋ ನಿಗೂಢ ವ್ಯಕ್ತಿಗಳು ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿದ್ದುದು ಬೇಹುಗಾರಿಕೆ ಇಲಾಖೆಗೆ ಗೊತ್ತಾಗಿದೆ. ಕಕ್ಕಿಂಜೆ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 2 ಕಡೆಗಳಲ್ಲಿ, ಉಡುಪಿಯ ಒಂದು ಕಡೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಿಂದ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಲಾಗಿದೆ.
ಕಳೆದ 15 ದಿನಗಳ ಅಂತರದಲ್ಲಿ ನಾಲ್ಕು ಕಡೆಗಳಿಂದ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಲಾಗಿದೆ. ನ. 6ರಂದು ರಾಣೆಬೆನ್ನೂರು ಮತ್ತು ಉಡುಪಿಯಿಂದಲೂ ಸ್ಯಾಟಲೈಟ್ ಫೋನ್ ಸಕ್ರಿಯವಾಗಿತ್ತು. ಕೇಂದ್ರ ಬೇಹುಗಾರಿಕೆ ಸಂಸ್ಥೆಯಿಂದ ರಾಜ್ಯ ಗುಪ್ತಚರ ಇಲಾಖೆಗೆ ಈ ಕುರಿತು ವರದಿ ರವಾನೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಯಾಟಲೈಟ್ ಫೋನ್ ಲೊಕೇಶನ್ ಆಧರಿಸಿ ಪೊಲೀಸರು ಹಾಗೂ ಎನ್‌ಐಎ ತನಿಖೆಗೆ ಮುಂದಾಗಿದ್ದಾರೆ.