Advertisement

ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣಕ್ಕೆ ಚಾಲನೆ

12:38 PM Feb 04, 2020 | Suhan S |

ವಿಜಯಪುರ: ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣ ನಿರ್ಮಿಸಿದ್ದು ಬೆಂಗಳೂರು ಹೊರತುಪಡಿಸಿ ವಿಜಯಪುರ ನಗರದಲ್ಲಿ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣ ಆರಂಭಿಸಲಾಗಿದೆ. ಇದಲ್ಲದೇ ಭವಿಷ್ಯದಲ್ಲಿ ವಿಜಯಪುರ-ಮುಂಬೈ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Advertisement

ಸೋಮವಾರ ನರಗದಲ್ಲಿ 1.65 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣದಲ್ಲಿ ಬಸ್‌ ಕಾರ್ಯಾಚರಣೆಗೆ ಚಾಲನೆ ನೀಡುವ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜತ್‌, ಸಾತಾರಾ, ಪುಣೆ ಎಕ್ಸ್‌ಪ್ರೆಸ್‌ ಹೆದ್ದಾರಿ ಮೂಲಕ ವಿಜಯಪುರ ನಗರದಿಂದ ನೇರವಾಗಿ ಮುಂಬೈಗೆ ತಲುಪುವ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣಕ್ಕೆ ಸಲ್ಲಿಸಿರುವ ಕೇಂದ್ರ ಸರ್ಕರದ ಪ್ರಸ್ತಾವನೆ ನೀತಿ ಆಯೋಗದ ಮುಂದಿದೆ ಎಂದು ವಿವರಿಸಿದರು.

ಹುಮನಾಬಾದ-ಚಿಕ್ಕೋಡಿ ಮತ್ತು ಚಿತ್ರದುರ್ಗ, ಸೊಲ್ಲಾಪುರ, ಮುಂಬೈ ಹಾಗೂ ವಿಜಯಪುರದಿಂದ ರಿಂಗ್‌ ರಸ್ತೆ ನಿರ್ಮಾಣದ ಪ್ರಸ್ತಾವನೆ ಕೂಡಾ ಕೇಂದ್ರ ಸರ್ಕಾರದ ಮುಂದಿದೆ. ಬರುವ ಮೂರು ವರ್ಷಗಳಲ್ಲಿ ವಿಜಯಪುರ ಆಕರ್ಷಕ ರೀತಿಯಲ್ಲಿ ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು. ಸದ್ಯಕ್ಕೆ ಕೇಂದ್ರ ಬಸ್‌ ನಿಲ್ದಾಣ ಒಳಗೊಂಡು 1,473 ಬಸ್‌ಗಳ ಮಾರ್ಗಸೂಚಿ ಇದ್ದು 573 ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣಕ್ಕೆ ಸ್ಥಳಾಂತರಗೊಳ್ಳಲಿವೆ. ಆರಂಭಿಕವಾಗಿ 233 ಬಸ್‌ಗಳು ಅಥಣಿ ಮಾರ್ಗದಲ್ಲಿ ಮಾರ್ಗಸೂಚಿಗಳನ್ನು ನಿಗದಿಪಡಿಸಿವೆ.

ನಗರದ ಕೇಂದ್ರ ಬಸ್‌ ನಿಲ್ದಾಣ ಸೇರಿದಂತೆ ನಗರದಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಣ, ಅಪಘಾತ ನಿಯಂತ್ರಣ, ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿಯಾಗಲಿದ್ದು, ಪ್ರತಿ 5 ನಿಮಿಷಕ್ಕೊಮ್ಮೆ ಬಸ್‌ ಗಳ ವ್ಯವಸ್ಥೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ವಿಜಯಪುರಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಸುಮಾರು 500 ಕೋಟಿ ರೂ. ಕಾಮಗಾರಿಗಳಿಗೆ ವೇಗ ದೊರೆಯಲಿದೆ ಎಂದು ವಿವರಿಸಿದರು.

ಬಸ್‌ಗಳಿಗೆ ಚಾಲನೆ ನೀಡಿದ ಮೇಲ್ಮನೆ ಸದಸ್ಯ ಸುನೀಲಗೌಡ ಪಾಟೀಲ, ನಗರದಲ್ಲಿ ಸ್ಯಾಟ್‌ ಲೈಟ್‌ ಬಸ್‌ ನಿಲ್ದಾಣ ಅತ್ಯಂತ ವೇಗವಾಗಿ ನಿರ್ಮಾಣವಾಗುವಲ್ಲಿ ವಿಶೇಷ ಕಾಳಜಿ ವಹಿಸಿರುವ ಶಾಸಕ ಬಸನಗೌಡ ಪಾಟೀಲ ಅವರ ಪರಿಶ್ರಮ ದೊಡ್ಡದಿದೆ. ಮುಖ್ಯಮಂತ್ರಿಗಳ ನಿಧಿ ಯಿಂದ 1ಕೋಟಿ ರೂ., ನಗರ ಶಾಸಕರ ನಿಧಿ ಯಿಂದ 25 ಲಕ್ಷ ರೂ., ನನ್ನ ಶಾಸಕ ನಿಧಿ ಯಿಂದ 32 ಲಕ್ಷ ರೂ. ಅನುದಾನ ಪಡೆದು ಈ ಬಸ್‌ ನಿಲ್ದಾಣ ಅಭಿವೃದ್ಧಿ ಪಡಿಸಿದೆ ಎಂದು ವಿವರಿಸಿದರು.

Advertisement

ನಗರದಲ್ಲಿ ಐತಿಹಾಸಿಕ ಪ್ರಸಿದ್ಧವಾದ ನೂರಾರು ಸ್ಮಾರಕಗಳಿದ್ದು, ಪ್ರವಾಸೊಧ್ಯಮ ಹಾಗೂ ಉದ್ಯೋಗ ಸೃಷ್ಟಿಗಾಗಿ ನಗರದಲ್ಲಿ ಮೂಲಸೌಕರ್ಯ ಸೃಜನೆಗೆ ರಸ್ತೆ, ಸಂಚಾರ ದಟ್ಟಣೆ, ಬಸ್‌ ನಿಲ್ದಾಣಗಳ ಸುಧಾರಣೆ ಆಗುವ ತುರ್ತು ಅವಶ್ಯಕತೆ ಇದೆ. ನಿತ್ಯ ನಗರಕ್ಕೆ ಆಗಮಿಸುವ 1,500 ಬಸ್‌ಗಳಲ್ಲಿ 200 ಬಸ್‌ಗಳು ಈ ಬಸ್‌ ನಿಲ್ದಾಣದ ಮೂಲಕ ಸಂಚಾರ ನಡೆಸುವುದರಿಂದ ಸಂಚಾರ ವ್ಯವಸ್ಥೆ ಸುಧಾರಣೆಗೊಳ್ಳಲಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾ ಧಿಕಾರಿ ವೈ.ಎಸ್‌. ಪಾಟೀಲ, ಎಎಸ್ಪಿ ರಾಮ್‌ ಅರಿಸಿದ್ದಿ, ಕಲಬುರಗಿ ರಸ್ತೆ ಸಾರಿಗೆ ಸಂಸ್ಥೆ ಕಾರ್ಯನಿರ್ವಾಹಕ ಅಭಿಯಂತರ ಮೆಹಬೂಬ್‌, ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗೀಯ ನಿಯಂತ್ರಣಾ ಧಿಕಾರಿ ಗಂಗಾಧರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next