Advertisement

ಕೇರಳ ಗಡಿಯಲ್ಲೂ ಸ್ಯಾಟಲೈಟ್‌ ಫೋನ್‌ ಬಳಕೆ ಹೆಚ್ಚಳ? ಗುಪ್ತಚರ ಇಲಾಖೆಗೆ ತಲೆನೋವು

01:11 AM Jan 08, 2023 | Team Udayavani |

ಮಂಗಳೂರು/ಕಾಸರಗೋಡು: ಇದುವರೆಗೆ ಕರಾ ವಳಿಯ ಹಲವೆಡೆ ಸದ್ದು ಮಾಡುತ್ತಿದ್ದ ನಿಷೇಧಿತ ಸ್ಯಾಟಲೈಟ್‌ ಫೋನ್‌ ಈಗ ಕೇರಳ-ಕರ್ನಾಟಕ ಗಡಿಭಾಗದಲ್ಲೂ ರಿಂಗಣಿಸುತ್ತಿ ರುವುದು ಭದ್ರತ ಪಡೆಗಳಿಗೆ ಸವಾಲಾಗಿ ಪರಿಣಮಿಸಿದೆ.

Advertisement

ಗುರುವಾರ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ಎಣ್ಮಕಜೆ ಪಂಚಾಯತ್‌ನ ಸ್ವರ್ಗ, ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಪಾಣಾಜೆಯ ಒಂದು ಕಿ.ಮೀ. ಪ್ರದೇಶ ವ್ಯಾಪ್ತಿಯಲ್ಲಿ ಸ್ಯಾಟಲೈಟ್‌ ಫೋನ್‌ ಸಿಗ್ನಲ್‌ ಪತ್ತೆಯಾಗಿರುವ ಬಗ್ಗೆ ವರದಿಯಾಗಿತ್ತು. ಈಗಾಗಲೇ ಕೇರಳದ ಸ್ಪೆಷಲ್‌ ಬ್ರಾಂಚ್‌ ಪೊಲೀಸರು ಇದರ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಈ ಮಧ್ಯೆ ಕೇರಳ-ಕರ್ನಾಟಕದ ಗಡಿಯಲ್ಲಿನ ಬಂಟಾಜೆ, ಕೇರಳದ ಪರಪ್ಪ ರೇಂಜ್‌ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಪ್ರದೇಶದಲ್ಲೂ ಸ್ಯಾಟಲೈಟ್‌ ಫೋನ್‌ ಬಳಸುತ್ತಿರಬಹುದೆಂದು ಶಂಕಿಸಲಾಗಿದೆ.

ಕೆಲವು ವರ್ಷಗಳಿಂದ ದಕ್ಷಿಣ ಕನ್ನಡ, ಉಡುಪಿಯ ಕಾಡಂಚಿನ ಭಾಗಗಳಲ್ಲಿ ಕೆಲವೊಮ್ಮೆ ನಿಷೇಧಿತ ತುರಾಯಾ ಸ್ಯಾಟಲೈಟ್‌ ಫೋನ್‌ ಕರೆಗಳು ಬರುತ್ತಿರುವುದನ್ನು ಗುಪ್ತಚರ ಇಲಾಖೆ ಗಮನಿಸಿತ್ತು. ಆದರೆ ಇದರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ಕೇಂದ್ರೀಯ ಗುಪ್ತಚರ ಇಲಾಖೆ ತನಿಖೆ ಕೈಗೊಂಡಿರುವುದು ಬಿಟ್ಟರೆ ಇದುವರೆಗೆ ಬೇರೆ ಮಾಹಿತಿ ಬಹಿರಂಗಪಡಿಸಿಲ್ಲ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರು ಈ ಸಂಬಂಧ ಪ್ರತಿಕ್ರಿಯಿಸಿದ್ದು, ಗುರುವಾರ ನಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಸ್ಯಾಟಲೈಟ್‌ ಫೋನ್‌ ಕರೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಿಲ್ಲ ಎಂದು ಖಚಿತಪಡಿಸಿದ್ದಾರೆ.

ಮಂಗಳೂರಿನ ಕಂಕನಾಡಿ ಬಳಿ ನ. 19ರಂದು ಕುಕ್ಕರ್‌ ಬಾಂಬ್‌ ಸ್ಫೋಟ ಸಂಭವಿಸಿತ್ತು. ಅದಕ್ಕೆ ಒಂದು ದಿನ ಮೊದಲು ಬಂಟ್ವಾಳ ಬಳಿಯ ಕಕ್ಕಿಂಜೆ ಅರಣ್ಯ ಪ್ರದೇಶದಲ್ಲಿ ತುರಾಯಾ ಸ್ಯಾಟಲೈಟ್‌ ಫೋನ್‌ ಕ್ರಿಯಾಶೀಲವಾಗಿತ್ತು. ಅಲ್ಲದೇ ಕಕ್ಕಿಂಜೆ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 2 ಕಡೆಗಳಲ್ಲಿ, ಉಡುಪಿಯ ಒಂದು ಕಡೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಿಂದ ಸ್ಯಾಟಲೈಟ್‌ ಫೋನ್‌ ರಿಂಗಣಿಸಿತ್ತು. ನವೆಂಬರ್‌ನಲ್ಲಿ 15 ದಿನಗಳ ಅಂತರದಲ್ಲಿ ನಾಲ್ಕು ಕಡೆಗಳಿಂದ ಸ್ಯಾಟಲೈಟ್‌ ಫೋನ್‌ ಬಳಸಲಾಗಿದೆ ಎನ್ನಲಾಗಿದೆ.

ಇದಕ್ಕೆ ಮೊದಲು ಜೂನ್‌ ತಿಂಗಳಲ್ಲಿ ಮಂಗಳೂರು ಹೊರವಲಯದ ನಾಟೆಕಲ್‌, ಕುಳಾಯಿ ಹಾಗೂ ಉತ್ತರ ಕನ್ನಡದ ಯಲ್ಲಾಪುರದ ನಾಲ್ಕು ಕಡೆ ಸ್ಯಾಟಲೈಟ್‌ ಫೋನ್‌ ಸಿಗ್ನಲ್‌ ಸಂಪರ್ಕವಾಗಿರುವುದು ಪತ್ತೆಯಾಗಿತ್ತು. ಮೊಬೈಲ್‌ ಫೋನ್‌ನಲ್ಲಾದರೆ ಟವರ್‌ ಲೊಕೇಶನ್‌ ಹಿಡಿದುಕೊಂಡು ತನಿಖೆ ನಡೆಸುವುದು ಸುಲಭ. ಆದರೆ ಸ್ಯಾಟಲೈಟ್‌ ಫೋನ್‌ ನೇರ ಉಪಗ್ರಹ ಮೂಲಕ ಕರೆಬರುವುದು ಹಾಗೂ ಇವುಗಳ ಸಂಸ್ಥೆಗಳು ವಿದೇಶಿ ಕಂಪೆನಿಗಳಾಗಿರುವುದು ಭಾರತೀಯ ಬೇಹು ಸಂಸ್ಥೆಗಳ ತನಿಖೆಗೆ ಕೊಂಚ ಅಡ್ಡಿಯಾಗಿದೆ.

Advertisement

ಸ್ವರ್ಗದಲ್ಲಿ ಇಂಟೆಲಿಜೆನ್ಸ್‌
ನಿಗಾ ಇರಿಸಿದೆ.ದ.ಕ. ವ್ಯಾಪ್ತಿಯಲ್ಲಿ ಗುರುವಾರ ಸ್ಯಾಟಲೈಟ್‌ ಫೋನ್‌ ಕರೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ

-ಹೃಷಿಕೇಶ್‌ ಸೋನಾವಣೆ, ಎಸ್ಪಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next