ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ 2018-19ನೇ ಸಾಲಿನ ಸ್ವಚ್ಛ ರತ್ನ ಮತ್ತು ಕಾಯಕಲ್ಪ ಪ್ರಶಸ್ತಿಗಳು ಲಭ್ಯವಾಗಿವೆ ಎಂದು ಡಿಎಚ್‌ಒ ಡಾ. ಅಮರ್‌ನಾಥ್ ತಿಳಿಸಿದರು.
ನಗರದ ಆರೋಗ್ಯ ಇಲಾಖೆಯ ತರಬೇತಿ ಸಭಾಂಗಣದಲ್ಲಿ ಆಯೋಜಿಸಿದ್ದ ಇಲಾಖೆಯ ಕಾರ್ಯಕ್ರಮಗಳ ಮಾಹಿತಿ ಶಿಬಿರದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಜಿಲ್ಲೆಗೆ 17 ಪ್ರಶಸ್ತಿಗಳು ಲಭ್ಯವಾಗಿವೆ. ಸ್ವಚ್ಛತೆ ಕಾಪಾಡಿಕೊಳ್ಳುವ ಆಸ್ಪತ್ರೆಗಳಿಗೆ ಸ್ವಚ್ಛ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಈ ಬಾರಿ ಸಾತನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಿಕ್ಕಿದೆ ಎಂದು ಹೇಳಿದರು.
ವಿವಿಧ ಆಸ್ಪತ್ರೆಗಳಿಗೆ ಮೆಚ್ಚುಗೆ ಪತ್ರ: ಚನ್ನಪಟ್ಟಣ ತಾಲೂಕು ಆಸ್ಪತ್ರೆ, ಕನಕಪುರ ತಾಲೂಕು ಆಸ್ಪತ್ರೆಗಳಿಗೆ ಕಾಯಕಲ್ಪ ಪ್ರಶಸ್ತಿ ಸಿಕ್ಕಿದೆ. ಉಳಿದಂತೆ ಜಿಲ್ಲೆಯ ಕೋಡಿಹಳ್ಳಿ, ವಿಜಿದೊಡ್ಡಿ, ಹೊಸದುರ್ಗ, ಬೇವೂರು, ಇಗ್ಗಲೂರು, ಜಗದಾಪುರ, ವೈ.ಟಿ.ಹಳ್ಳಿ, ಸುಗ್ಗನಹಳ್ಳಿ (ಮಾಗಡಿ), ತಗ್ಗೀಕುಪ್ಪೆ, ಬನ್ನಿಕುಪ್ಪೆ, ಗಾಣಕಲ್, ಲಕ್ಷ್ಮೀಪುರ, ಎಂ.ಜಿ.ಪಾಳ್ಯ ಆಸ್ಪತ್ರೆಗಳಿಗೂ ಮೆಚ್ಚುಗೆ ಪ್ರಮಾಣ ಪತ್ರ ಸಿಕ್ಕಿದೆ. ಕನಕಪುರದ ಯು.ಪಿ.ಎಚ್.ಸಿಗೆ ಅತ್ಯುತ್ತಮ ಪ್ರಶಸ್ತಿ ಸಿಕ್ಕಿದೆ ಎಂದು ತಿಳಿಸಿದರು.
ಆಯುಷ್ಮಾನ್ ಭಾರತ್ ಚಾಲನೆ: ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯಡಿ ನಾಗರಿಕರ ನೋಂದಣಿ ಆರಂಭವಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿಯೂ ನೋಂದಣಿ ಮಾಡಲಾಗುತ್ತಿದೆ. ನಾಗರಿಕರು ಆಧಾರ್ ಮತ್ತು ಪಡಿತರ ಚೀಟಿ ದಾಖಲೆ ಮತ್ತು 10 ರೂ. ನೋಂದಣಿ ಶುಲ್ಕ ಕೊಟ್ಟು ಕಾರ್ಡ್ ಪಡೆಯಬಹುದು. ಮಧ್ಯವರ್ತಿಗಳ ಮಾತಿಗೆ ಮರಳಾಗಬಾರದು. ಕಾರ್ಡ್ ಇಲ್ಲದಿದ್ದರೂ ಈ ಯೋಜನೆಯ ಸೌಲಭ್ಯ ಪಡೆಯುವುದು ಸಾಧ್ಯವಿದೆ. ಹೀಗಾಗಿ ನಾಗರಿಕರು ಆತಂಕ ಪಡದೆ, ಸಾವಧಾನವಾಗಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಈ ಯೋಜನೆಯಡಿಯಲ್ಲಿ ಬಿಪಿಎಲ್ ಕಾರ್ಡ್ ಉಳ್ಳ ಕುಟುಂಬ ವಾರ್ಷಿಕ 5 ಲಕ್ಷ ರೂ.ವರೆಗೆ ಉನ್ನತ ಚಿಕಿತ್ಸೆ ಪಡೆಯಲು ಸಾಧ್ಯವಿದೆ. ಎಪಿಎಲ್ ಕಾರ್ಡ್‌ದಾರರಿಗೆ ಶೇ.30ರಷ್ಟು ರಿಯಾಯಿತಿ ಸಿಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ದಂತಭಾಗ್ಯ ಯೋಜನೆ: ರಾಜ್ಯ ಸರ್ಕಾರ ದಂತ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಹಿರಿಯ ನಾಗರಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಮಂದಿ ಈ ಯೋಜನೆಯ ಉಪಯೋಗ ಪಡೆದುಕೊಂಡಿದ್ದಾರೆ. ಬಡ ಕುಟುಂಬಗಳ ಹಿರಿಯ ನಾಗರಿಕರು ಇದೀಗ ವಯೋಮಾನದ ಕಾರಣ ಎದುರಾಗುವ ದಂತ ಸಮಸ್ಯೆಗಳಿಗೆ ನಿರಾತಂಕವಾಗಿ ಪರಿಹಾರ ಸಿಗಲಿದೆ ಎಂದು ಹೇಳಿದರು.
ವಿವಿಧ ಕಾರ್ಯಕ್ರಮಗಳ ಮಾಹಿತಿ: ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಎಂ.ದಕ್ಷಿಣಾ ಮೂರ್ತಿ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಆಶಾ ಕಾರ್ಯಕರ್ತೆಯರು ಮೂಲಕ ಜಾರಿಯಾಗುವ ಯೋಜನೆಗಳು, ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯವಿರುವ ಸವಲತ್ತುಗಳು ಹೀಗೆ ಆರೋಗ್ಯ ಇಲಾಖೆಯ ಮೂಲಕ ದೊರೆಯುವ ಸವಲತ್ತು, ಯೋಜನೆ, ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ಪ್ರಸನ್ನ ಕುಮಾರ್, ಎಂ.ಎಚ್.ಪ್ರಕಾಶ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.