Advertisement

ಸಾಸ್ತಾನ ಟೋಲ್‌ ಗೇಟ್‌ ನಲ್ಲಿ ನೌಕರರ ಪ್ರತಿಭಟನೆ

03:20 AM Jun 02, 2018 | Karthik A |

ಕೋಟ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾಸ್ತಾನ ಟೋಲ್‌ ಗೇಟ್‌ ನ ಸಿಬಂದಿಗಳು ಜೂ 1ರಂದು ಮುಷ್ಕರ ನಡೆಸಿದರು. ಈ ಸಂದರ್ಭ ಎಲ್ಲ ವಾಹನಗಳು ಶುಲ್ಕ ರಹಿತವಾಗಿ ತೆರಳಿದವು. ಬೆಳಗ್ಗೆ 8ಗಂಟೆಗೆ ಸಿಬಂದಿಗಳು ಟೋಲ್‌ ಪ್ಲಾಜಾದಿಂದ ಹೊರಬಂದು ಮುಷ್ಕರ ಆರಂಭಿಸಿದರು. ಅನಂತರ ಟೋಲ್‌ ಗುತ್ತಿಗೆ ವಹಿಸಿಕೊಂಡ ಕಂಪನಿಯ ಅಧಿಕಾರಿಗಳು ಸಿಬಂದಿಗಳಲ್ಲಿ ಕಾರ್ಯ ನಿರ್ವಹಿಸುವಂತೆ ಮನವಿ ಮಾಡಿದರು ಪ್ರಯೋಜನವಾಗಲಿಲ್ಲ. ಹೀಗೆ ಅಪರಾಹ್ನ 12.30ರ ತನಕ ಮುಷ್ಕರ ನಡೆಯಿತು.

Advertisement

ಕಾರ್ಮಿಕರ ಬೇಡಿಕೆಗಳೇನು?
ಸರಿಯಾದ ವೇತನ ನಿಗದಿ ಮಾಡಬೇಕು ಹಾಗೂ ಸಮವಸ್ತ್ರ, ಫಿ.ಎಫ್‌. ಮುಂತಾದ ಮೂಲ ಸೌಕರ್ಯಗಳನ್ನು ನೀಡಬೇಕು. ನಿಗದಿತ ದಿನಾಂಕದಂದೆ ವೇತನ ಪಾವತಿ ಮಾಡಬೇಕು.ವೇತನ ಹೊಂದಾಣಿಕೆಗೆ ಸರಿಯಾದ ದಾಖಲೆ ನೀಡಬೇಕು. ಹೊರ ರಾಜ್ಯದ ಕಾರ್ಮಿಕರು, ಸ್ಥಳೀಯ ಕಾರ್ಮಿಕರ ನಡುವೆ ತಾರತಮ್ಯ ಮಾಡಬಾರದು. ಕಾರ್ಮಿಕ ನಾಯಕರುಗಳಿಗೆ ಕಿರುಕುಳ ನೀಡಬಾರದು ಎಂದು ಆಗ್ರಹಿಸಿದರು. ಅದೇ ರೀತಿ ಭದ್ರತಾ ಸಿಬಂದಿಗಳು ಕೂಡ ಸರಿಯಾದ ವೇತನ ನೀಡಬೇಕು. ಕರ್ತವ್ಯ ನಿರ್ವಹಿಸಲು ಪೂರಕ ವಾತಾವರಣ ನಿರ್ಮಿಸಿಕೊಡಬೇಕು. ಸಿಬಂದಿ ಕೊರತೆ ನೀಗಿಸಬೇಕು. ವೇತನದಲ್ಲಿ ಕಡಿತಗೊಳಿಸುವ ಹಣದ ಕುರಿತು ದಾಖಲೆ ನೀಡಬೇಕು ಎಂದು ಆಗ್ರಹಿಸಿದರು.


ಬೇಡಿಕೆ ಈಡೇರಿಸುವ ಭರವಸೆ 

ಅನಂತರ ಟೋಲ್‌ ಮೆನೇಜರ್‌ ರವಿಬಾಬು ಹಾಗೂ ಸಾಸ್ತಾನ ಟೋಲ್‌ ನ ಮುಖ್ಯಸ್ಥ  ಕೇಶವ ಮೂರ್ತಿ ಅವರು ಕಾರ್ಮಿಕ ಮುಖಂಡ ಯೋಗೇಶ ಕುಮಾರ್‌ ಮತ್ತು ಸಿಬಂದಿಗಳೊಂದಿಗೆ ಮಾತುಕತೆ ನಡೆಸಿ ಜೂ 10ರೊಳಗೆ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. ಅನಂತರ ಸಿಬಂದಿಗಳು ಮುಷ್ಕರ ಹಿಂಪಡೆದು ಕರ್ತವ್ಯಕ್ಕೆ ಹಾಜರಾದರು. ಕೋಟ ಪೊಲೀಸ್‌ ಠಾಣೆ ಉಪನಿರೀಕ್ಷಕ ಸಂತೋಷ ಎ.ಕಾಯ್ಕಿಣಿ ಹಾಗೂ ಸಿಬಂದಿಗಳು ಉಪಸ್ಥಿತರಿದ್ದು ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆೆ ವಹಿಸಿದರು.

ಜೀವ ಒತ್ತೆ ಇತ್ತು ಕೆಲಸ ಮಾಡಿದರೂ ಸರಿಯಾದ ವೇತನವಿಲ್ಲ ನಾವು ಕರ್ತವ್ಯದ ಸಂದರ್ಭ ಬಿಸಿಲು, ಮಳೆಯಲ್ಲಿ ನಿಂತು ಸೊರಗುತ್ತಿದ್ದೇವೆ. ಒಮ್ಮೊಮ್ಮೆ ಸುಡು ಬಿಸಿಲಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದ, ವಾಹನದ ಹೊಗೆಯಿಂದ ಅನಾರೋಗ್ಯಕ್ಕೊಳಗಾದ ಘಟನೆಗಳು ನಡೆದಿದೆ. ಈ ರೀತಿ ಕಷ್ಟದಲ್ಲಿ ಕೆಲಸ ಮಾಡಿದರು ಕೂಡ ನಮಗೆ ನೀಡಬೇಕಾದ 10ಸಾವಿರ ರೂ ವೇತನದಲ್ಲಿ 2 ಸಾವಿರ ಕಡಿತ ಮಾಡಿ ನೀಡಲಾಗುತ್ತದೆ. ಯಾಕೆ ಕಡಿತ ಎನ್ನುವುದಕ್ಕೆ ಸರಿಯಾದ ಕಾರಣ ನೀಡುವುದಿಲ್ಲ. ಬಿಸಿಲು-ಮಳೆಯ ರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡುವುದಿಲ್ಲ. ಹೆಚ್ಚಿಗೆ ಮಾತನಾಡಿದರೆ ಕೆಲಸದಿಂದ ಕೈಬಿಡುತ್ತಾರೆ. ನಮ್ಮ ಕಷ್ಟ ಕೇಳುವವರಿಲ್ಲ ಎಂದು ಟೋಲ್‌ ನ ಭದ್ರತೆ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸಿಬಂದಿಯೋರ್ವರು ತಮ್ಮ ಕಷ್ಟ ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next