Advertisement

ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಕ್ರಮವಿಲ್ಲ

12:30 AM Jan 19, 2019 | Team Udayavani |

ಕೋಟ: ಏನಾದರೂ ಘಟಿಸದ ಹೊರತು ಕೆಲವೊಮ್ಮೆ ನಾವು ಎಚ್ಚೆತ್ತುಕೊಳ್ಳುವುದೇ ಇಲ್ಲ. ಇದಕ್ಕೊಂದು ಉದಾಹರಣೆ ಐರೋಡಿ ಗ್ರಾ.ಪಂ. ವ್ಯಾಪ್ತಿಯ ಸಾಸ್ತಾನ-ಕೋಡಿ ಕನ್ಯಾಣ ರಸ್ತೆಯಲ್ಲಿ ಅಪಾಯಕಾರಿಯಾಗಿ ಬಾಯ್ದೆರೆದ ಕೆರೆಯೊಂದಿದ್ದು,  ವಾಹನ ಸವಾರರು ಸ್ವಲ್ಪ ಎಡವಿದರೂ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಆದರೆ ಇಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. 
 
ಅಂಕುಡೊಂಕು ರಸ್ತೆ 
ಕೋಡಿಕನ್ಯಾಣ ಮೀನುಗಾರಿಕೆ ಜಟ್ಟಿಗೆ ಸಂಪರ್ಕ ಬೆಸೆಯುವ ಪ್ರಮುಖ ರಸ್ತೆಗೆ ತಾಗಿಕೊಂಡು ಅಂಕುಡೊಂಕಾದ ತಿರುವಿನಲ್ಲಿÉ  ಅರ್ಧ ಎಕ್ರೆ ವಿಸ್ತೀರ್ಣದ ಈ ಅಪಾಯಕಾರಿ ಕೆರೆ ಇದೆ. ಇದರ  ಮೇಲ್ಭಾಗ ಸಂಪೂರ್ಣ ತೆರೆದ ಸ್ಥಿತಿಯಲ್ಲಿದ್ದು ವಾಹನ ಸವಾರರು ಕೊಂಚ ಎಡವಿದರೂ ಕೆರೆಗೆ ಬೀಳಬಹುದು. ಈ ಮೀನುಗಾರಿಕೆ ರಸ್ತೆ  ಸಾಸ್ತಾನದ ಮೂಲಕ ಕೋಡಿಕನ್ಯಾಣ, ಪಾರಂಪಳ್ಳಿ ಪಡುಕರೆಯನ್ನು ಸಂಪರ್ಕಿಸುವುದರಿಂದ ಪ್ರತಿದಿನ ಸಾವಿರಾರು ಮಂದಿ ಇಲ್ಲಿ  ಸಂಚರಿಸುತ್ತಾರೆ. 

Advertisement

ಮೂರು ಬಾರಿ ಸಣ್ಣ ಅವಘಡ
ಪೊದೆಗಳು ಆವರಿಸಿರುವುದರಿಂದ ಇಲ್ಲಿ ಕೆರೆಯನ್ನು ಗುರುತಿಸಲಾಗದ ಸ್ಥಿತಿ ಇದೆ.ಹೀಗಾಗಿ ಈ ಹಿಂದೆ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ಸವಾರರು ಮೂರು ಬಾರಿ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು ಕೂದಲೆಳೆ ಅಂತರದಿಂದ ಪಾರಾದ ಉದಾಹರಣೆಗಳಿವೆ.
  
ತಡೆಗೋಡೆ ಮನವಿ ಕೇಳ್ಳೋರಿಲ್ಲ!
ತಡೆಗೋಡೆ ನಿರ್ಮಿಸುವಂತೆ  ಈ ಹಿಂದೆ  ಹಲವಾರು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಮುಂದೆ ದುರಂತ ಎದುರಾಗುವ ಮುನ್ನ  ತಡೆಬೇಲಿ ನಿರ್ಮಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ. 

ದುರಂತ ನಡೆಯುವ ಮುನ್ನ ಎಚ್ಚೆತ್ತುಕೊಳ್ಳಿ 
ದೊಡ್ಡ ಮಟ್ಟದ ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಸ್ಥಳೀಯರು ಹಲವು ಬಾರಿ ಮನವಿ  ಮಾಡಿದ್ದೇವೆ. ಸಂಬಂಧಪಟ್ಟವರು ತಡೆಗೋಡೆ ನಿರ್ಮಿಸುವ ಕುರಿತು ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ. 
– ಆಣ್ಣಪ್ಪ ಕುಂದರ್‌ ಕೋಡಿ,
ಸ್ಥಳೀಯ ನಿವಾಸಿ

ಗ್ರಾ.ಪಂ.ಅನುದಾನದಲ್ಲಿ ಸಾಧ್ಯವಿಲ್ಲ
ಕೆರೆಗೆ ತಡೆಬೇಲಿ ನಿರ್ಮಿಸುವಂತೆ ಹಲವಾರು ಬಾರಿ ಮನವಿ ಬಂದಿದೆ. ಆದರೆ  ಗ್ರಾ.ಪಂ. ಅನುದಾನದಲ್ಲಿ ಈ ಕಾಮಗಾರಿ ಸಾಧ್ಯವಿಲ್ಲ. ಹೀಗಾಗಿ ಜಿ.ಪಂ., ತಾ.ಪಂ ಅಥವಾ ಶಾಸಕರು, ಸಂಸದರ ನಿಧಿಯಿಂದ ಕಾಮಗಾರಿ ನಡೆಯಬೇಕು. ಹಿಂದೆ ಗ್ರಾಮಸಭೆಯಲ್ಲೂ ಈ ವಿಚಾರ ಪ್ರಸ್ತಾವವಾಗಿದೆ ಮತ್ತು ನಾನು ಕೂಡ  ಜನಪ್ರತಿನಿಧಿಗಳ ಬಳಿ ಬೇಡಿಕೆ ಸಲ್ಲಿಸಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ರಸ್ತೆ ಕೋಡಿ ಗ್ರಾ.ಪಂ. ಹಾಗೂ ಸಾಲಿಗ್ರಾಮ ಪ.ಪಂ.ಗೆ ತಾಗಿಕೊಂಡಿದ್ದು ಅಲ್ಲಿನ ನಿವಾಸಿಗಳು   ಮನವಿ ಮಾಡಬೇಕಿದೆ. ನಮ್ಮ ಗ್ರಾ.ಪಂ. ವತಿಯಿಂದ  ಮತ್ತೂಮ್ಮೆ ಎಲ್ಲರಿಗೂ ಮನವಿ ಮಾಡುತ್ತೇವೆ.
– ಮೊಸೇಸ್‌ ರೋಡಿಗ್ರಸ್‌, ಅಧ್ಯಕ್ಷರು ಗ್ರಾ.ಪಂ. ಐರೋಡಿ

– ರಾಜೇಶ್‌ ಗಾಣಿಗ ಅಚ್ಲಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next