Advertisement

ಸಾಸ್ತಾನ ಟೋಲ್‌ಗೇಟ್‌: ಬ್ರಹ್ಮಾವರದ ವಾಹನಗಳಿಗೆ ಸುಂಕ ವಿನಾಯಿತಿಗೆ ನಿರ್ಣಯ

09:02 PM Dec 19, 2019 | Team Udayavani |

ಉಡುಪಿ: ಸಾಸ್ತಾನ ಟೋಲ್‌ಗೇಟ್‌ ನಿಂದ 10 ಕಿ.ಮೀ. ವ್ಯಾಪ್ತಿಯಲ್ಲಿರುವ ಬ್ರಹ್ಮಾವರದ ಸ್ಥಳೀಯ ವಾಹನಗಳಿಗೆ ಟೋಲ್‌ ಸುಂಕ ವಿನಾಯಿತಿ ನೀಡುವಂತೆ ರಾ.ಹೆ. ಪ್ರಾಧಿಕಾರ, ಜಿಲ್ಲಾಧಿಕಾರಿ ಹಾಗೂ ನವಯುಗ ಸಂಸ್ಥೆಗೆ ಪತ್ರ ಬರೆಯುವುದಾಗಿ ಗುರುವಾರ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

Advertisement

ಸ್ಥಳೀಯರಿಗೆ ವಿನಾಯಿತಿ ನೀಡಿ
ತಾ.ಪಂ. ಸದಸ್ಯ ಸುಧೀರ್‌ ಶೆಟ್ಟಿ ಮಾತನಾಡಿ, ಸಾಸ್ತಾನದಲ್ಲಿ ಟೋಲ್‌ಗೇಟ್‌ ನಿರ್ಮಾಣ ಮಾಡುವಾಗ ಟೋಲ್‌ಗೇಟ್‌ನ 10 ಕಿ.ಮೀ. ವ್ಯಾಪ್ತಿಯಲ್ಲಿ ಸ್ಥಳೀಯರಿಗೆ ಟೋಲ್‌ಶುಲ್ಕ ವಿನಾಯಿತಿ ನೀಡುವುದಾಗಿ ಭರವಸೆಯಿತ್ತಿದ್ದರು. ಆದರೆ ಇದೀಗ ನವಯುಗ ಗುತ್ತಿಗೆ ಸಂಸ್ಥೆ ಬ್ರಹ್ಮಾವರ ಭಾಗದಿಂದ ವಾಹನಗಳಿಗೂ ಟೋಲ್‌ ಶುಲ್ಕ ವಿಧಿಸುತ್ತಿದೆ. ಕೋಟದಲ್ಲಿ ಸರಕಾರಿ ಕಚೇರಿಗೆ ತೆರಳಬೇಕಾದರೆ 45 ರೂ. ಶುಲ್ಕ ಕಟ್ಟಬೇಕಾಗಿದೆ. ಕೋಟ ಮಣೂರಿನ ವಾಹನಗಳಿಗೆ ನೀಡುವ ರಿಯಾಯಿತಿ ಬ್ರಹ್ಮಾವರದ ವಾಹನಗಳಿಗೂ ನೀಡಬೇಕು. ಗುತ್ತಿಗೆ ಸಂಸ್ಥೆ ನೀಡಿದ ಮಾತು ಉಳಿಸಿಕೊಳ್ಳಲಿ. ಸ್ಥಳೀಯರ ವಾಹನಗಳ ಉಚಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಫ‌ಲಾನುಭವಿಗಳ ಪಿಂಚಣಿಗೆ ಖೊಕ್‌!
ತಾ.ಪಂ. ಸದಸ್ಯೆ ಡಾ| ಸುನೀತಾ ಶೆಟ್ಟಿ ಮಾತನಾಡಿ, ಪಿಂಚಣಿ ಪಾವತಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಇನ್ನೂ ಪರಿಹಾರವಾಗಿಲ್ಲ. ಕೆಲ ಫ‌ಲಾನುಭವಿಗಳಿಗೆ 5 ತಿಂಗಳಾದರೂ ಹಣ ಪಾವತಿಯಾಗುತ್ತಿಲ್ಲ. ಈ ಕುರಿತು ಬ್ರಹ್ಮಾವರದಲ್ಲಿ ಪಿಂಚಣಿ ಅದಾಲತ್‌ ನಡೆಸಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಗ್ರಾಮೀಣ ಭಾಗದ ಅನೇಕ ಮಂದಿ ಪಿಂಚಣಿ ನಂಬಿಕೊಂಡು ಜೀವನ ಸಾಗಿಸುವವರು ಇದ್ದಾರೆ. ಅವರೆಲ್ಲ ಮಾಸಿಕ ಪಿಂಚಣಿ ದೊರಕದೆ ತೊಂದರೆಗೆ ಸಿಲುಕಿದ್ದಾರೆ. ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕು ಹಾಗೂ ಪಿಂಚಣಿ ನಿಧಾನ ಗತಿಗೆ ಕಾರಣವೇನೆಂದು ಪ್ರಶ್ನಿಸಿದರು.

ಸಮರ್ಪಕ ಸರ್ವೆ ನಡೆದಿಲ್ಲ
ಸದಸ್ಯ ದಿನೇಶ್‌ ಕೋಟ್ಯಾನ್‌ ಮಾತನಾಡಿ, ಪಲಿಮಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿನ ರಶೀದಿಯಲ್ಲಿ ಅವ್ಯವಹಾರದ ಕುರಿತು ತಾ.ಪಂ.ನಿಂದ ಜಿ.ಪಂ.ಗೆ ದೂರು ಸಲ್ಲಿಸಲಾಗಿದೆ. ಆದರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಕುರಿತು ಸಮರ್ಪಕ ಸರ್ವೆ ನಡೆದಿಲ್ಲ, ಈ ಬಗ್ಗೆ ಸಮರ್ಪಕ ಸರ್ವೆ ನಡೆಯಬೇಕಾಗಿದೆ ಎಂದು ಆಗ್ರಹಿಸಿದರು.

ಸಮಗ್ರ ತನಿಖೆ ನಡೆಯಲಿದೆ
ಪ್ರಶ್ನೆಗೆ ಪ್ರತಿಕ್ರಿಯಿಸಿದ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಈ ಪ್ರಕರಣದ ತನಿಖಗೆ ನಡೆಸುವ ಕುರಿತು ತನಿಖಾಧಿಕಾರಿಯವರನ್ನು ನೇಮಿಸಲಾಗಿದೆ. ತುರ್ತಾಗಿ ವರದಿಯನ್ನು ನೀಡಲು ಸೂಚಿಸಲಾಗಿದೆ, ಪ್ರಕರಣಕ್ಕೆ ಸಂಬಂಧಿಸಿದ ಸಿಬಂದಿಯವರನ್ನು ತನಿಖೆಗೆ ನಿಗದಿ ಪಡಿಸಿದ ದಿನದಂದು ಹಾಜರಾಗಲು ಸೂಚಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯಾಗಲಿದೆ ಎಂದರು.

Advertisement

ಬೀದಿ ನಾಯಿಗಳಿಗೆ ಸಂತಾನಹರಣ
ಬೀದಿ ನಾಯಿ ಹಾವಳಿಯಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿ, ಸ್ಥಳೀಯ ಗ್ರಾ.ಪಂ. ಅನುದಾನ
ಲಭ್ಯತೆ ಅನುಗುಣವಾಗಿ ಸರಕಾರ ನಿಯಮದಂತೆ ಬೀದಿನಾಯಿಗಳಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಹಮ್ಮಿಕೊಳ್ಳಲಾಗುತ್ತದೆ. ಸ್ಥಳೀಯ ಪಶು ವೈದ್ಯಾಧಿಕಾರಿಗಳು ಗ್ರಾ.ಪಂ. ಸಹಕಾರದೊಂದಿಗೆ ಎಲ್ಲ ನಾಯಿಗಳಿಗೆ ಹುಚ್ಚುನಾಯಿ ನಿರೋಧಕ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅದಕ್ಕಾಗಿ 2.50 ಲ.ರೂ. ಕೇಳಲಾಗಿದೆ ಎಂದರು.ಈ ಸಂದರ್ಭ ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್‌, ಉಪಾಧ್ಯಕ್ಷ ಭುಜಂಗ ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್‌ ಕುಮಾರ್‌ ಬೈಲಕೆರೆ, ತಾ.ಪಂ. ಪ್ರಭಾರ ಸಿಇಒ ಮೋಹನ್‌ ರಾಜ್‌ ಉಪಸ್ಥಿತರಿದ್ದರು.

ಪಿಂಚಣಿಗೆ ತಾಂತ್ರಿಕ ಸಮಸ್ಯೆ!
ಪ್ರಶ್ನೆಗೆ ಉತ್ತರಿಸಿದ ಬ್ರಹ್ಮಾವರದ ತಹಶೀಲ್ದಾರ್‌, ಪಿಂಚಣಿ ತಡವಾಗಲು ತಾಂತ್ರಿಕ ಕಾರಣಗಳಿವೆ. ಪಿಂಚಣಿ ಅರ್ಜಿ ಗಳನ್ನು ಕೆ 1ನಿಂದ ಕೆ2ಗೆ ವರ್ಗಾಯಿಸುವಲ್ಲಿ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಗಳನ್ನು ನಿವಾರಿಸುವಂತೆ ಪಿಂಚಣಿ ನಿರ್ದೇಶನಾ ಲಯದ ಗಮನಕ್ಕೆ ತರಲಾಗಿದೆ ಎಂದರು.

ಹುದ್ದೆಗಳ ಭರ್ತಿಗೆ ನಿರ್ಣಯ
ತಾ.ಪಂ. ನಲ್ಲಿ 29 ಹುದ್ದೆಗಳಿವೆ. ಅದರಲ್ಲಿ 2 ಹುದ್ದೆಗಳು ಮಾತ್ರ ಭರ್ತಿಯಾಗಿದೆ. ಉಳಿದ 27 ಹುದ್ದೆಗಳು ಡೆಪ್ಯೂಟೇಶನ್‌ ಆಧಾರದ ಮೇಲೆ ಗ್ರಾ.ಪಂ. ಸಿಬಂದಿ, ಪಿಡಿಒ, ಲೆಕ್ಕ ಸಹಾಯಕರು ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಸರಕಾರ ತಾ.ಪಂ. ಡೆಪ್ಯೂಟೇಶನ್‌ನಲ್ಲಿ ಕೆಲಸ ಮಾಡುವವರು ಆಯಾ ಗ್ರಾ.ಪಂ. ತೆರಳುವಂತೆ ಸೂಚನೆ ಮಾಡಿದ್ದು, ಇದರಿಂದಾಗಿ ತಾ.ಪಂ. ನಲ್ಲಿ ಎಲ್ಲ ಹುದ್ದೆಗಳು ಖಾಲಿಯಾಗಲಿವೆ. ಸರಕಾರ ಮೊದಲು ತಾ.ಪಂ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಡೆಪ್ಯೂಟೇಶನ್‌ ಸಿಬಂದಿಯನ್ನು ಹಿಂದೆ ಕಳುಹಿಸುವಂತೆ ಸರಕಾರಕ್ಕೆ ಬರೆಯುವುದಾಗಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next