ಚೆನ್ನೈ: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಭಾರತೀಯ ಜನತಾ ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡಿದ ಬಳಿಕ ಇದೀಗ ಮತ್ತೋರ್ವ ಅಧಿಕಾರಿಯ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದೆ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ್ ಸೆಂಥಿಲ್ ಕೂಡಾ ರಾಜಕೀಯ ಪ್ರವೇಶ ಮಾಡಲಿದ್ದಾರೆ.
ಆಂಗ್ಲ ಮಾಧ್ಯಮ ಹಿಂದೂಸ್ಥಾನ್ ಟೈಮ್ಸ್ ಈ ಬಗ್ಗೆ ವರದಿ ಮಾಡಿದ್ದು, ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದಿದೆ.
ಸೋಮವಾರ ಹೊಸದಿಲ್ಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಶಿಕಾಂತ್ ಸೆಂಥಿಲ್ ಅವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ. ತನ್ನ ರಾಜಕೀಯ ಪ್ರವೇಶ, ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಸೇರ್ಪಡೆಯಾಗಲಿದ್ದೇನೆ ಎನ್ನುವ ವಿಚಾರಗಳ ಬಗ್ಗೆ ಶಶಿಕಾಂತ್ ಸೆಂಥಿಲ್ ಅವರು ಹೇಳಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಸಿ.ಟಿ. ರವಿ ರಾಜೀನಾಮೆ ಅಂಗೀಕಾರ: ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆ
ನಾಗರಿಕ ಸೇವಾ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಶಶಿಕಾಂತ್ ಸೆಂಥಿಲ್ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಪೌರತ್ವ (ತಿದ್ದುಪಡಿ) ಕಾಯ್ದೆಯ ಕುರಿತು ನರೇಂದ್ರ ಮೋದಿ ಸರ್ಕಾರದ ನಡೆಯ ವಿರುದ್ಧ ದೇಶದ ಹಲವಾರು ಭಾಗಗಳಲ್ಲಿ ಪ್ರಚಾರ ಮಾಡಿದ್ದರು.
ಕಳೆದ ಆಗಸ್ಟ್ ನಲ್ಲಿ ಮಾಜಿ ಐಎಎಸ್ ಅಧಿಕಾರಿ ಅಣ್ಣಾಮಲೈ ಅವರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದರು. ಅವರನ್ನು ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ತಮಿಳುನಾಡು ವಿಧಾನಸಭೆಗೆ ಏಳು ತಿಂಗಳು ಬಾಕಿ ಇರುವಾಗ ಇಬ್ಬರು ಮಾಜಿ ಅಧಿಕಾರಿಗಳ ರಾಜಕೀಯ ಸೇರ್ಪಡೆ ಹೊಸ ಚಟುವಟಿಕೆಗಳಿಗೆ ಕಾರಣವಾಗಿದೆ.