Advertisement
ಜೈಲು ವಾಸ ಮುಗಿಸಿ ಬೆಂಗಳೂರಿನಿಂದ ಚೆನ್ನೈಗೆ ಆಗಮಸಿದ ಶಶಿಕಲಾ ಆವರನ್ನು ಭಾರೀ ಜನಸಮೂಹ ರಸ್ತೆಯ ಇಕ್ಕೆಲಗಳಲ್ಲೂ ನಿಂತು ಬರಮಾಡಿಕೊಂಡಿತ್ತು. ಅಂದು ಶಶಿಕಲಾ ಅವರಿಗಿದ್ದ ಜನಬೆಂಬಲ ನೋಡಿ ಸ್ವತಃ ರಾಜ್ಯ ನಾಯಕರೇ ಆಶ್ಚರ್ಯಕ್ಕೆ ಒಳಗಾಗಿದ್ದರು. ಅಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅವರು, ಇಂದಿನಿಂದಲೇ ಸಕ್ರಿಯ ರಾಜಕೀಯದಲ್ಲಿ ಭಾಗಿಯಾಗುವುದಾಗಿ ಹೇಳಿದ್ದರು. ಆದರೆ ಬುಧವಾರ ಇದ್ದಕ್ಕಿದ್ದಂತೇ ಯು-ಟರ್ನ್ ತೆಗೆದುಕೊಂಡಿದ್ದಾರೆ. ಇದು ಶಶಿಕಲಾ ಅವರ ಸ್ವಯಂ ನಿರ್ಧಾರವೇ? ಅಥವಾ ಬೇರೆ ಯಾರಾದರೂ ಶಶಿಕಲಾ ಅವರ ಈ ರಾಜಕೀಯ ಚಿತ್ರಕಥೆಯನ್ನು ಹೆಣೆದಿದ್ದಾರೆಯೇ ಅಥವಾ ನಿರ್ದೇಶಿಸಿದ್ದಾರೆಯೇ? ಎಂಬ ಅನುಮಾನ ಮೂಡುತ್ತದೆ.
Related Articles
Advertisement
ಶಶಿಕಲಾ ನಟರಾಜನ್ ಅವರ “ರಾಜಕೀಯಕ್ಕೆ ವಿದಾಯ’ ಕೇವಲ ತಾತ್ಕಾಲಿಕ ಎಂಬುದು ರಾಜ ಕೀಯ ವಿಶ್ಲೇಷಕರ ಅಭಿಪ್ರಾಯ. ಈ ನಿರ್ಧಾರಕ್ಕೆ ಹಲವು ಕಾರಣಗಳನ್ನು ಪಟ್ಟಿ ಮಾಡಬಹುದಾಗಿದೆ. ಮೊದಲನೆ ಯದಾಗಿ ಶಶಿಕಲಾ ಅವರು ಎಐಎಡಿಎಂಕೆ ಪಕ್ಷಕ್ಕೆ ಮತ್ತೆ ಸೇರ್ಪಡೆಯಾಗುವ ಬಯಕೆಯನ್ನು ಹೊಂದಿದ್ದರು. ಇದಕ್ಕಾಗಿಯೇ ಬೆಂಗಳೂರಿನಿಂದ ಚೆನ್ನೈಗೆ ತೆರಳಿದ ಕಾರಿನಲ್ಲಿ ಪಕ್ಷದ ಬಾವುಟವನ್ನು ಅಳವಡಿಸಲಾಗಿತ್ತು. ಇದನ್ನು ಎಐಎಡಿಎಂಕೆ ನಾಯಕರು ವಿರೋಧಿಸಿದ್ದರು. ಪಕ್ಷವನ್ನು ಶಶಿಕಲಾ ತನ್ನ ಹಿಡಿತಕ್ಕೆ ತೆಗೆದುಕೊಂಡರೆ ತಮಗೆ ಹಿನ್ನಡೆಯಾದೀತು ಎಂಬ ಭಯ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಅವರಿಗಿತ್ತು.
ಶಶಿಕಲಾ ಒಂದು ವೇಳೆ ಎಐಎಡಿಎಂಕೆಯ ಒಳಕ್ಕೆ ಬಂದದ್ದೇ ಆದರೆ ಪಕ್ಷ ಮೂರು ಹೋಳಾಗಲಿದೆ ಎಂಬ ಎಚ್ಚರಿಕೆಯನ್ನು ರಾಜಕೀಯ ವಿಶ್ಲೇಷಕರು ಕೊಟ್ಟಿದ್ದರು. ಇದು ವಾಸ್ತವಕ್ಕೆ ತೀರಾ ಹತ್ತಿರವೂ ಆಗಿತ್ತು. ಯಾಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಅವರನ್ನು ಬದಿಗೆ ಸರಿಸಿ ಶಶಿಕಲಾ ಅವರು ಪಕ್ಷದ ಮೇಲೆ ಹಿಡಿತ ಸಾಧಿಸಿದರೆ ಎಐಎಡಿಎಂಕೆಯಲ್ಲಿ ಭಿನ್ನಮತ ಸ್ಫೋಟಗೊಳ್ಳುತ್ತಿತ್ತು. ಹೀಗಾಗಿ ಪರೋಕ್ಷ ವಾಗಿ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಅವರ ಮೇಲೆ ಕುಪಿತರಾಗಿರುವ ಶಶಿಕಲಾ ಅವರು ಅಖಾಡ ದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ತನ್ನ ಸಹಾಯವಿಲ್ಲದೇ ಎಐಎಡಿಎಂಕೆ ಎಷ್ಟರ ಮಟ್ಟಿಗೆ ಬಲಿಷ್ಠ ಎಂಬುದನ್ನೂ ನೋಡುವ ತಂತ್ರವಾಗಿದೆ. ಇಲ್ಲಿ ಎಐಎಡಿಎಂಕೆ ಒಂದು ವೇಳೆ ಸೋತರೇ ಶಶಿಕಲಾ ಅವರು ಗೆದ್ದಂತೆ. ಯಾಕೆಂದರೆ ಶಶಿಕಲಾ ಅವರ ಇಮೇಜ್ ಮತ್ತಷ್ಟು ಬಲಿಷ್ಠವಾಗುತ್ತದೆ.
“ಬಾಜೀಗರ್’ ಸಿನೆಮಾದಲ್ಲಿನ ಸಂಭಾಷಣೆಯ ಈ ಸಾಲೊಂದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. “ಕಭೀ ಕಭೀ ಜೀತ್ನೆà ಕೆ ಲಿಯೇ ಕುಚ್ ಹಾರ್‌ನಾ ಪಡ್ತಾ ಹೈ, ಔರ್ ಹಾರ್ ಕರ್ ಜೀತ್ನೆವಾಲೇ ಕೋ, ಬಾಜಿಗರ್ ಕೆಹೆತೇ ಹೈ’ (ಕೆಲವೊಮ್ಮೆ ನಾವು ಗೆಲ್ಲಲು ಏನನ್ನಾದರೂ ಕಳೆದುಕೊಳ್ಳಬೇಕಾಗುತ್ತದೆ ಮತ್ತು ಸೋತು ಗೆದ್ದವನನ್ನು ಜಾದೂಗಾರ ಎನ್ನುತ್ತೇವೆ). ಸದ್ಯ ತಮಿಳುನಾಡು ರಾಜಕೀಯದಲ್ಲಿ ಇದೇ ಬೆಳವಣಿಗೆಗಳು ಆಗುತ್ತಿ ರುವಂಥದ್ದು. ಶಶಿಕಲಾ ಪಕ್ಷದಲ್ಲಿ ಇದ್ದರೂ ಇಲ್ಲದೇ ಇದ್ದರೂ ದಿ| ಜಯಲಲಿತಾ ಅನಂತರದ ಸ್ಥಾನದ ಲ್ಲಂತೂ ಇರಲಿದ್ದಾರೆ. ಶಶಿಕಲಾ ಅವರು ತನ್ನ ವೈಯಕ್ತಿಕ ಇಮೇಜ್ ಅನ್ನು ಮತ್ತಷ್ಟು ಬೆಳೆಸಿಕೊಳ್ಳಲು ಮುಂದಾಗುತ್ತಿದ್ದಾರೆ.
ಮೇಲ್ನೋಟಕ್ಕೆ ಯಾರಿಗೆ ಗೆಲುವು? :
ಶಶಿಕಲಾ ಅವರ ಪ್ರಭಾವ ತಗ್ಗಿಸಲು ಎಐಎಡಿ ಎಂಕೆಯ ಹಾಲಿ ನಾಯಕರು ಮುಂದಾಗಿದ್ದರು ಎಂಬ ಮಾತುಗಳಿದ್ದವು. ಪಕ್ಷದಿಂದ ಹೊರಹೋಗಿರುವ ಶಶಿಕಲಾ ಅವರನ್ನು ರಾಜಕೀಯವಾಗಿ ಮೂಲೆ ಗುಂಪು ಮಾಡುವ ಪ್ರಯತ್ನಗಳು ಭರದಿಂದಲೇ ನಡೆಯುತ್ತಿದ್ದವು. ಶಶಿಕಲಾ ಮತ್ತು ಅವರ ಸಂಬಂಧಿ ಟಿಟಿವಿ ದಿನಕರನ್ ಎಐಎಡಿಎಂಕೆಯಲ್ಲಿ ಮತ್ತೆ ಅಧಿಪತ್ಯ ಸ್ಥಾಪಿಸದಂತೆ ತಡೆಯುವ ಪ್ರಯತ್ನವಾಗಿ ಇಬ್ಬರನ್ನೂ ರಾಜಕೀಯವಾಗಿ ಮೂಲೆಗುಂಪಾಗಿಸಲು ತೆರೆಮರೆಯಲ್ಲಿಯೇ ಯತ್ನಗಳು ನಡೆಯುತ್ತಿದ್ದವು. ಆದರೆ ಶಶಿಕಲಾ ಅವರ ರಾಜಕೀಯ ನಿವೃತ್ತಿಯಿಂದ ಎಐಎಡಿಎಂಕೆ ನಾಯಕರಿಗೆ ತಾತ್ಕಾಲಿಕ ಗೆಲುವಾಗಿದೆ ಎಂದು ಹೇಳಲಾಗುತ್ತಿದೆ. ಇದರ ಜತೆಗೆ ಪ್ರತ್ಯೇಕ ಪಕ್ಷ ಸ್ಥಾಪಿಸಿಕೊಂಡಿದ್ದ ಟಿಟಿವಿ ದಿನಕರನ್ ಮಾತೃಪಕ್ಷಕ್ಕೆ ಸೇರುವ ಕನಸು ಭಗ್ನಗೊಂಡಿದೆ.
ಬಿಜೆಪಿ ಹಾದಿ ಸುಗಮ? :
ಜಯಲಲಿತಾ ಕಾಲಾನಂತರ ಎಐಎಡಿಎಂಕೆಯಲ್ಲಿನ ದಿಢೀರ್ ಬೆಳವಣಿಗೆಗಳ ಹಿಂದೆ ಬಿಜೆಪಿಯ ಪಾತ್ರ ಇರುವಿಕೆ ಸ್ಪಷ್ಟ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ. ರಾಜ್ಯದಲ್ಲಿ ತಳವೂರಲು ಬಿಜೆಪಿ ಅಂಚಿನಲ್ಲಿ ಕಾಯುತ್ತಿದೆ. ಅದಕ್ಕಿಂತಲೂ ಮುಂದುವರಿದು ನೋಡುವುದಾದರೆ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಮಾತುಕತೆ ಅಂತಿಮ ಹಂತದಲ್ಲಿದೆ. ಇಲ್ಲಿ ಶಶಿಕಲಾ ಅವರನ್ನು ಪಕ್ಷದಲ್ಲೇ ಉಳಿಸಿಕೊಂಡರೇ ಬಿಜೆಪಿ ಜತೆ ಮೈತ್ರಿಗೆ ತೊಂದರೆಯಾಗಲಿದೆ. ಯಾಕೆಂದರೆ ಈಗಾಗಲೇ ಕೇಂದ್ರ ಬಿಜೆಪಿ ನಾಯಕರು ಡಿಎಂಕೆ ಮತ್ತು ಕಾಂಗ್ರೆಸ್ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಭ್ರಷ್ಟಾಚಾರ ದಲ್ಲಿ ಜೈಲು ಪಾಲಾಗಿದ್ದ ಶಶಿಕಲಾ ಎಐಎಡಿಎಂಕೆಯ ಭಾಗವಾಗಿದ್ದು ಅವರ ಜತೆ ಮೈತ್ರಿಗೆ ಮುಂದಾದರೆ ಕೇಸರಿ ಪಕ್ಷದ ವರ್ಚಸ್ಸಿಗೆ ಚ್ಯುತಿ ಬರುವ ಸಾಧ್ಯತೆ ಇದೆ. ಹೀಗಾಗಿ ಚಿನ್ನಮ್ಮ ರಾಜಕೀಯದಿಂದ ಹಿಂದೆ ಸರಿದಿರುವುದು ಬಿಜೆಪಿ ಮಟ್ಟಿಗೆ ಧನಾತ್ಮಕ ಬೆಳವಣಿಗೆ.
ರಾಜ್ಯದಲ್ಲಿ ಬಿಜೆಪಿ ತನ್ನ ನೆಲೆಯನ್ನು ಕಂಡುಕೊ ಳ್ಳುವ ಪ್ರಯತ್ನ ಮಾಡಲಿದ್ದು, 5 ವರ್ಷಗಳ ಬಳಿಕ ಎಐಎಡಿಎಂಕೆಯಲ್ಲಿ ಬದಲಾವಣೆಯಾಗಲಿದ್ದು, ಈ ಸಂದರ್ಭ ಶಶಿಕಲಾ ಅವರ ನಡೆ ಕುತೂಹಲವಾಗಲಿದೆ. ಸದ್ಯ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡು ಏಕಾಂಗಿ ಎದುರಾಳಿ ಡಿಎಂಕೆಯನ್ನು ಸುಲಭವಾಗಿ ಚುನಾವಣೆಯಲ್ಲಿ ಮಣಿಸಿ ಅಧಿಕಾರದ ಭಾಗವಾಗುವ ಯೋಜನೆ ಬಿಜೆಪಿಯದ್ದಾಗಿದೆ. ಬಿಜೆಪಿಯ ಲಕ್ಷ್ಯ ಏನಿದ್ದರೂ 2024ರ ಲೋಕಸಭಾ ಚುನಾವಣೆಯಾಗಿದ್ದು ಈ ಬಾರಿಯ ವಿಧಾನಸಭೆ ಚುನಾವಣೆಯನ್ನೇ ಇದಕ್ಕೆ ಬುನಾದಿಯನ್ನಾಗಿಸಿಕೊಳ್ಳಲು ಚಿಂತನೆ ನಡೆಸಿದೆ. ಇದಕ್ಕೆ ಪೂರಕವಾದ ವಾತಾವರಣವನ್ನು ಪಕ್ಷ ತಮಿಳುನಾಡಿನಲ್ಲಿ ರೂಪಿಸಿಕೊಳ್ಳುತ್ತಿದೆ.
– ಕಾರ್ತಿಕ್ ಅಮೈ