ಚೆನ್ನೈ : ಕೊನೆಗೂ ತಮಿಳುನಾಡು ರಾಜಕಾರಣಧಿದಲ್ಲಿ ಕಳೆದ ಕೆಲ ದಿನಗಳಿದ ಇದ್ದ ಗೊಂದಲ ನಿವಾರಣೆಯಾಗಿದ್ದು, ಹೊಸ ತಿರುವು ಎಂಬಂತೆ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪರಮಾಪ್ತೆ “ಚಿನ್ನಮ್ಮ’ಎಂದೇ ಖ್ಯಾತಿ ಗಳಿಸಿರುವ ಶಶಿಕಲಾ ನಟರಾಜನ್ ಅವರು ಮುಂದಿನ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿದ್ದಾರೆ. ಅವರು ನಾಳೆ ಇಲ್ಲವೆ ಫೆಬ್ರವರಿ 9 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಎಲ್ಲಾ ಸಾಧ್ಯತೆಗಳಿವೆ.
ಎಐಎಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಶಾಸಕರ ಸಭೆಯಲ್ಲಿ ಬಹುಮತದಿಂದ ಚಿನ್ನಮ್ಮ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಆಯ್ಕೆ ಮಾಡಿ ಮುಖ್ಯಮಂತ್ರಿಯನ್ನಾಗಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಹಾಲಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಇಂದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ.
ಮಾಜಿ ಸಿಎಂ ಜೆ ಜಯ ಲಲಿತಾ ಅವರಿಗೆ ಪರಮಾಪ್ತರಾಗಿದ್ದ ಶಶಿಕಲಾ ನಟರಾಜನ್, ಜಯಾ ನಿಧನದ ನಂತರದ ಪಕ್ಷದ ಚುಕ್ಕಾಣಿ ಹಿಡಿದಿದ್ದರು. ಎಐಡಿಎಂಕೆ ಸಂಪ್ರದಾಯದಂತೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗುವವರೇ ಮುಖ್ಯಮಂತ್ರಿ ಸ್ಥಾನವನ್ನೂ ನಿಭಾಯಿಸುತ್ತಾರೆ.ಇಲ್ಲಿ ದ್ವಿಕೇಂದ್ರಿತ ಅಧಿಕಾರವಿರಬಾರದು ಎಂಬ ನಿಯಮವಿರುವ ಕಾರಣ ಭಾನುವಾರದ ಸಭೆಯಲ್ಲಿ ಶಾಸಕರೆಲ್ಲರೂ ಸೇರಿ ಶಶಿಕಲಾ ನಟರಾಜನ್ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿಯಾಗುವ ಮುನ್ನ ಶಶಿಕಲಾ ನಟರಾಜನ್ ಪಕ್ಷದ ಯಾವುದೇ
ಹುದ್ದೆಯಲ್ಲಾಗಲಿ ಅಥವಾ ಸಕ್ರಿಯವಾಗಿ ರಾಜಕಾರಣಕ್ಕೆ ಇಳಿದಿರಲೇ ಇಲ್ಲ. ಅಲ್ಲದೆ ಸದ್ಯ ಅವರು
ವಿಧಾನಸಭೆಯ ಸದಸ್ಯರೂ ಅಲ್ಲ. ಆದರೆ ಇದೀಗ ಅವರನ್ನು ಸಿಎಂ ಮಾಡಿ, ಜಯಲಲಿತಾ ಸಾವಿನಿಂದ
ತೆರವಾಗಿರುವ ಅವರ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ವಿಧಾನಸಭೆಗೆ ಪ್ರವೇಶಿಸುವಂತೆ ಮಾಡುವ
ಚಿಂತನೆ ಪಕ್ಷಕ್ಕಿದೆ ಎಂದು ಹೇಳಲಾಗಿದೆ.
ಶಶಿಕಲಾ ನಟರಾಜನ್, ಜನವರಿ ಅಂತ್ಯದಲ್ಲೇ ಸಿಎಂ ಗಾದಿಗೆ ಕುಳಿತುಕೊಳ್ಳಬೇಕಿತ್ತು. ಆದರೆ
ಜಲ್ಲಿಕಟ್ಟು ಕ್ರೀಡೆ ವಿವಾದ ಸಂಬಂಧ ತಮಿಳುನಾಡಿನಲ್ಲಿ ಭಾರಿ ಪ್ರತಿಭಟನೆಗಳು ಶುರುವಾದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ನೆನಗುದಿಗೆ ಬಿದ್ದಿತ್ತು.