ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮುಂಚೂಣಿ ವಾರಿಯರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಪರಿಗಣಿಸಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ 2000 ರೂ. ನೆರವು ಘೋಷಿಸಿದ್ದು, ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆ ಸಚಿವೆಯಾಗಿರುವ ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ರೋಗಿಗಳ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಕೊರೊನಾ ಸೋಂಕಿನ ಪ್ರಮಾಣ ಕಡಿಮೆ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ.
ಇದನ್ನೂ ಓದಿ : ಹಣಕ್ಕಾಗಿ ಕಿರುಕುಳ: ಬೆಂಕಿ ಹಚ್ಚಿಕೊಂಡು ಸ್ಟಾಫ್ ನರ್ಸ್ ಆತ್ಮಹತ್ಯೆ
ಮಹಾಮಾರಿ ವಿರುದ್ಧ ಜೀವದ ಹಂಗು ತೊರೆದು ಗ್ರಾಮೀಣ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಆತ್ಮಸ್ಥೈರ್ಯ ತುಂಬಲು ವಿಶೇಷ ಪ್ಯಾಕೇಜ್ ನೀಡುವಂತೆ ಕಳೆದ ವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವಿನಂತಿ ಮಾಡಿಕೊಳ್ಳಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿ, ರಾಜ್ಯದ 64,423 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 59,169 ಅಂಗನವಾಡಿ ಸಹಾಯಕಿಯರಿಗೆ ತಲಾ 2000 ರೂ. ಗಳಂತೆ ಸಹಾಯಧನ ನೀಡಲು ಮುಖ್ಯಮಂತ್ರಿಳು ಘೋಷಣೆ ಮಾಡಿದ್ದಾರೆ. ಇದರಿಂದ ರಾಜ್ಯ ಸರ್ಕಾರಕ್ಕೆ 24.07 ಕೋಟಿ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರನ್ನು ಪರಿಗಣಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವ ರಾಜ್ಯದ ಮುಖ್ಯಮಂತ್ರಿಗಳಿಗೆ ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ.
ಇದೇ ವೇಳೆ, ಲಾಕ್‌ಡೌನ್ ಘೋಷಣೆಯಿಂದ ರಾಜ್ಯದಲ್ಲಿ ಹಾಲು ಬಳಕೆಯಾಗದೇ ನಷ್ಟವಾಗುತ್ತಿರುವುದನ್ನು ಮನಗಂಡ ಮುಖ್ಯಮಂತ್ರಿಗಳು ಹಾಲಿನ ಪುಡಿ ಸಿದ್ದಪಡಿಸಿ, ಪ್ರತಿ ಮಗುವಿಗೂ ಜೂನ್ ಹಾಗೂ ಜುಲೈ ತಿಂಗಳು ತಲಾ ಅರ್ಧ ಕೆ.ಜಿ. ಹಾಲಿನ ಪುಡಿ ನೀಡುವುದಾಗಿ ಘೋಷಣೆ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆ.
ಸರ್ಕಾರದ ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಎಲ್ಲ ಮಕ್ಕಳಿಗೂ ಯಶಸ್ವಿಯಾಗಿ ತಲುಪಿಸುವ ಕೆಲಸ ಮಾಡಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಇನ್ನು ರಾಜ್ಯ ಸರ್ಕಾರ ತಮ್ಮ ಸೇವೆಯನ್ನು ಗುರುತಿಸಿ ವಿಶೇಷ ಪ್ಯಾಕೇಜ್ ನೀಡಿರುವುದರಿಂದ ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕೊರೊನಾ ನಿಯಂತ್ರಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ, ಸರ್ಕಾರದ ಜೊತೆ ಕೈಜೋಡಿಸಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.