ಚೆನ್ನೈ: ಅಕ್ರಮ ಆಸ್ತಿ ಪ್ರಕರಣದಲ್ಲಿ ವಿಕೆ ಶಶಿಕಲಾ ನಟರಾಜನ್ ದೋಷಿ ಎಂದು ಹೇಳಿರುವ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಬೆಂಗಳೂರಿನ ವಿಶೇಷ ಕೋರ್ಟ್ ಗೆ ಶರಣಾಗುವ ಮುನ್ನ ಶಶಿಕಲಾ ಶತಾಯಗತಾಯ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಯಾವುದೇ ಕಾರಣಕ್ಕೂ ಸಿಎಂ ಪಟ್ಟ ಅಲಂಕರಿಸಬಾರದೆಂಬ ಹಠಕ್ಕೆ ಬಿದ್ದಿದ್ದಾರೆ. ಆ ನಿಟ್ಟಿನಲ್ಲಿ ಶಶಿಕಲಾ ಜೆ.ಜಯಲಲಿತಾ ಅವರ ಹಾದಿಯನ್ನೇ ಅನುಸರಿಸುವ ಮೂಲಕ ರಣತಂತ್ರ ಹೆಣೆಯುವ ಮೂಲಕ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಯುತ್ತಿದೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.
ಈ ಹಿಂದೆಯೂ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಂದು ಸಿಎಂ ಆಗಿದ್ದ ಜಯಲಲಿತಾ ಜೈಲುಪಾಲಾದಾಗ, ಬಲಗೈ ಬಂಟ ಪನ್ನೀರ್ ಸೆಲ್ವಂ ಅವರನ್ನೇ 2 ಬಾರಿ ಹಂಗಾಮಿ ಸಿಎಂ ಆಗಿ ಮಾಡಿದ್ದರು.
ಇದೀಗ ಜಯಲಲಿತಾ ನಿಧನ ನಂತರ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ವಿರುದ್ಧವೇ ಪನ್ನೀರ್ ಸೆಲ್ವಂ ಸೆಡ್ಡು ಹೊಡೆಯುವ ಮೂಲಕ ಇಬ್ಬರ ನಡುವೆಯೂ ರಾಜಕೀಯ ಜಂಗೀಕುಸ್ತಿ ನಡೆಯುವ ಮೂಲಕ ತಮಿಳುನಾಡಿನ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿತ್ತು.
ಆ ನಿಟ್ಟಿನಲ್ಲಿ ತಮ್ಮ ಆಪ್ತರನ್ನೇ ಸಿಎಂ ಪಟ್ಟದಲ್ಲಿ ಕೂರಿಸುವ ಬಗ್ಗೆ ಶಶಿಕಲಾ ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ಶಾಸಕರು ಹಾಗೂ ಸಂಸದರ ಜೊತೆ ಚರ್ಚೆ ನಡೆಸಿದ್ದಾರೆ. ವಿಕೆ ಶಶಿಕಲಾ ಕುಟುಂಬದವರೇ ಸಿಎಂ(ಶಿಶಿಕಲಾ ಪತಿ ನಟರಾಜನ್ ಅಥವಾ ಅಣ್ಣ ದಿನಕರನ್) ಪಟ್ಟ ಏರಬೇಕೆಂದು ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ಶಶಿಕಲಾ ಪರ ಕೆಲವು ಶಾಸಕರು ಒತ್ತಡ ಹೇರಿದ್ದಾರೆ ಎಂದು ವರದಿ ವಿವರಿಸಿದೆ.
ಜೈಲು ಸೇರುವ ಮುನ್ನ ಎಐಎಡಿಎಂಕೆಗೆ ಪ್ರಧಾನ ಕಾರ್ಯದರ್ಶಿ ಹಾಗೂ ತನ್ನ ಆಪ್ತರನ್ನು ಸಿಎಂ ಪಟ್ಟದಲ್ಲಿ ಕೂರಿಸುವುದು ಶಶಿಕಲಾ ಹೆಣೆದಿರುವ ಹೊಸ ತಂತ್ರವಾಗಿದೆ.
ಯಾರಿಗೆ ಸಿಎಂ ಪಟ್ಟ ದಿಂಡಿಗಲ್ ಶ್ರೀನಿವಾಸ್, ದೀಪಕ್?
ಜಯಲಲಿತಾ ಸಹೋದರ ಜಯಕುಮಾರ್ ಪುತ್ರ ದೀಪಕ್ ಗೆ ಮುಖ್ಯಮಂತ್ರಿ ಸ್ಥಾನ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಎಐಎಡಿಎಂಕೆಯ ಸೆಂಗೋಟ್ಟೆಯನ್ ಅಥವಾ ಅರಣ್ಯ ಸಚಿವ ದಿಂಡಿಗಲ್ ಗೆ ಸಿಎಂ ಪಟ್ಟ ಕಟ್ಟುವ ಬಗ್ಗೆ ಚರ್ಚೆ ನಡೆದಿದೆ ಎಂದು ವರದಿ ವಿವರಿಸಿದೆ. ಒಟ್ಟಾರೆ ಪನ್ನೀರ್ ಸೆಲ್ವಂ ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಲ್ಲಿ ಮುಂದುವರಿಯಬಾರದು ಎಂದು ಶಶಿಕಲಾ ರಣತಂತ್ರ ರೂಪಿಸಿರುವುದಾಗಿ ವರದಿ ಹೇಳಿದೆ.