Advertisement

ಪರಪ್ಪನ ಕಾರಾಗೃಹ ಐಜಿ v/s ಡಿಐಜಿ; ಲಂಚದ ಆರೋಪದ ಬಗ್ಗೆ ತನಿಖೆಗೆ ಆದೇಶ

02:35 PM Jul 13, 2017 | Sharanya Alva |

ಬೆಂಗಳೂರು: ಪರಪ್ಪನ ಅಗ್ರಹಾರ ಡಿಜಿ ಎಚ್.ಎನ್.ಸತ್ಯನಾರಾಯಣ ರಾವ್ ಅವರು ತಮಿಳುನಾಡಿನ ಶಶಿಕಲಾ ನಟರಾಜನ್ ಅವರಿಗೆ ವಿಶೇಷ ಆತಿಥ್ಯ ನೀಡಲು ಕೋಟ್ಯಂತರ ರೂಪಾಯಿ ಲಂಚ ಸ್ವೀಕರಿಸಿದ್ದಾರಂದು ಕಾರಾಗೃಹ ಡಿಐಜಿ ರೂಪಾ ಅವರು ನೀಡಿರುವ ವರದಿ ಇದೀಗ ಇಬ್ಬರು ಅಧಿಕಾರಿಗಳ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟಿದೆ. ಮತ್ತೊಂದೆಡೆ ಲಂಚ ಪಡೆದಿರುವ ಆರೋಪದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

Advertisement

ಡಿಐಜಿ ರೂಪಾ ವರದಿಯಲ್ಲಿ ಹುರಳಿಲ್ಲ: ಡಿಜಿ ಸತ್ಯನಾರಾಯಣ ರಾವ್
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತ ಗೆಳತಿ ಶಶಿಕಲಾ ಅವರಿಗೆ ವಿಐಪಿ ಸೌಲಭ್ಯ ಕಲ್ಪಿಸಲು 2 ಕೋಟಿ ರೂ. ಲಂಚ ಸ್ವೀಕಾರ ಆಗಿದೆ ಎಂಬ ಡಿಐಜಿ ರೂಪಾ ಅವರ ವರದಿ ಬಗ್ಗೆ ಗುರುವಾರ ಪರಪ್ಪನ ಅಗ್ರಹಾರ ಡಿಜಿ ಸತ್ಯನಾರಾಯಣ ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಶಶಿಕಲಾಗೆ ನಾವು ಯಾವುದೇ ವಿಐಪಿ ಟ್ರೀಟ್ ಮೆಂಟ್ ಕೊಟ್ಟಿಲ್ಲ. ರೂಪಾ ಬರೆದಿರುವ ವರದಿಯಲ್ಲಿ ಹುರುಳಿಲ್ಲ. ಯಾವ ಅಪರಾಧಿಗಳಿಂದಲೂ ಒಂದು ರೂಪಾಯಿಯೂ ಪಡೆದಿಲ್ಲ ಎಂದು ಹೇಳಿದರು.

ರೂಪಾ ಅವರು ಸಾಕ್ಷ್ಯವನ್ನು ನನಗೆ ಕೊಡಬೇಕು. ಸಾಕ್ಷ್ಯವನ್ನು ಟಿವಿ ಚಾನೆಲ್ ಗಳಿಗೆ ಕೊಡೋದಲ್ಲ, ನಾನು ಕಾರಾಗೃಹದ ಐಜಿ. ಶಶಿಕಲಾ ಅವರು ಸಾಮಾನ್ಯ ಕೈದಿಯಾಗಿಯೇ ಜೈಲಿನಲ್ಲಿದ್ದಾರೆ. ಅವರು ಯಾವ ಆಧಾರದಲ್ಲಿ ಆರೋಪ ಮಾಡಿದ್ದಾರೋ ಗೊತ್ತಿಲ್ಲ ಎಂದು ಸತ್ಯನಾರಾಯಣ ಅವರು ತಿಳಿಸಿದ್ದಾರೆ.

ವರದಿಯಲ್ಲಿ ಸುಳ್ಳಿದ್ದರೆ ತನಿಖೆ ನಡೆಸಿ; ಡಿಐಜಿ ರೂಪಾ
ನಾನು ಕೊಟ್ಟಿರುವ ವರದಿಯಲ್ಲಿ ಸುಳ್ಳಿದ್ದರೆ ತನಿಖೆ ನಡೆಸಲಿ. ನಾನು ನಾಲ್ಕು ಪುಟಗಳ ವರದಿಯನ್ನು ಡಿಜಿಪಿಗೆ ಕಳುಹಿಸಿದ್ದೇನೆ. ನನ್ನ ವರದಿ ನೋಡಿದ್ರೆ ಸಾಕ್ಷ್ಯಾಧಾರಗಳು ಸಿಗುತ್ತದೆ. ನನ್ನ ವರದಿ ಸಂಪೂರ್ಣ ಸತ್ಯ, ನಾನು ನೋಡಿದ್ದನ್ನು ವರದಿಯಲ್ಲಿ ಉಲ್ಲೇಖಿಸಿದ್ದೇನೆ ಎಂದು ಕಾರಾಗೃಹ ಡಿಐಜಿ ರೂಪಾ ತಿರುಗೇಟು ನೀಡಿದ್ದಾರೆ.

ಉನ್ನತ ಮಟ್ಟದ ತನಿಖೆಗೆ ಆದೇಶ: ಸಿಎಂ
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಶಶಿಕಲಾಗೆ ವಿಶೇಷ ಆತಿಥ್ಯ ನೀಡಿರುವ ಹಾಗೂ ಲಂಚ ಸ್ವೀಕರಿಸಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯನವರು ಚರ್ಚೆ ನಡೆಸಿದ್ದು, ಆರೋಪದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಆದೇಶ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next