ಸಸಿಹಿತ್ಲು: ಸಮುದ್ರದ ಉಪ್ಪು ನೀರಿನ ತಡೆಗಾಗಿ, ಸಿಹಿ ನೀರಿನ ಒಳ ಅರಿವಿಗಾಗಿ ನಿರ್ಮಿಸಿದ ಕಿಂಡಿ ಅಣೆಕಟ್ಟೊಂದು ಸೂಕ್ತವಾದ ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆಯಲ್ಲಿರುವುದು ಹಳೆ ಯಂಗಡಿ ಗ್ರಾಮ ಪಂಚಾಯತ್‌ನ ಸಸಿಹಿತ್ಲು ಪ್ರದೇಶದಲ್ಲಿ ಕಂಡು ಬಂದಿದೆ.
ಲಭ್ಯ ಮಾಹಿತಿಯ ಪ್ರಕಾರ ಹಳೆಯಂಗಡಿ ಮಂಡಲ ಪಂಚಾಯತ್ ಅಧಿಕಾರದಲ್ಲಿದ್ದಾಗ ಸಸಿಹಿತ್ಲಿನಗಡಿ ಪ್ರದೇಶದಲ್ಲಿ ಈ ಕಿಂಡಿ ಅಣೆಕಟ್ಟು ನಿರ್ಮಾಣವಾಗಿತ್ತು. ಈ ಭಾಗದ ಒಂದಷ್ಟು ಕೃಷಿಕರಿಗೆ ಹಾಗೂ ತೆಂಗಿನ ತೋಟ, ಬಾಳೆ ತೋಟದ ಇನ್ನಿತರ ಪರ್ಯಾಯ ಕೃಷಿ ಮಾಡುವವರಿಗೂ ವರದಾನವಾಗಿದ್ದ ಈ ಕಿಂಡಿ ಅಣೆಕಟ್ಟು ಕಾಲ ಕ್ರಮೇಣ ಶಿಥಿಲಗೊಂಡು ಸೂಕ್ತವಾದ ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆಯನ್ನು ತಲುಪಿದೆ.
ಈ ಭಾಗಕ್ಕೆ ಜವಾಬ್ದಾರಿಯನ್ನು ಹೊತ್ತಿರುವ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಯಾರೂ ಸಹ ಈ ಭಾಗಕ್ಕೆ ಬರುತ್ತಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಪ್ರತಿ ವರ್ಷ ಹಲಗೆಗಳನ್ನು ಹಾಕಲಾಗುತ್ತಿದ್ದ ಪರಿಪಾಠವನ್ನು ಆರಂಭದಲ್ಲಿ ಗ್ರಾಮ ಪಂಚಾಯತ್ ನಡೆಸುತ್ತಿತ್ತು. ಆದರೆ ಹಲವಾರು ವರ್ಷದಿಂದ ಈ ಪದ್ಧತಿಯನ್ನು ಕೈ ಬಿಟ್ಟಿರುವುದರಿಂದ ಇಲ್ಲಿ ಹಲಗೆಯೂ ಇಲ್ಲದೆ ಕಿಂಡಿ ಅಣೆಕಟ್ಟು ಅಲ್ಲಲ್ಲಿ ಬಿರುಕು ಬಿಟ್ಟು ಕುಸಿಯುವ ಹಂತಕ್ಕೆ ಬಂದು ತಲುಪಿದೆ ಎಂಬ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನಂದಿನಿ ನದಿಯ ನೀರು ಸಮುದ್ರ ಸೇರುವುದಕ್ಕೆ ಅಡ್ಡಲಾಗಿ ಹಾಕಿರುವ ಈ ಕಿಂಡಿ ಅಣೆಕಟ್ಟಿನ್ನು ಸುಸ್ಥಿಯಲ್ಲಿಟ್ಟಿದ್ದಲ್ಲಿ ಹತ್ತಿರದ ಜನತೆಗೆ ಕುಡಿಯುವ ನೀರಿನ ಬವಣೆ ತಪ್ಪುತ್ತಿತ್ತು. ಜತೆಗೆ ಇಲ್ಲಿನ ಜನರು ಸಹ ಕಿಂಡಿಅಣೆಕಟ್ಟಿನ ಮೇಲೆ ಸಂಚಾರ ನಡೆಸುವುದನ್ನು ನಿಲ್ಲಿಸಿದ್ದಾರೆ. ಶಿಥಿಲಗೊಂಡಿರುವ ಅಣೆಕಟ್ಟಿನಲ್ಲಿ ಸಂಚರಿಸುವುದು ಸಹ ಅಪಾಯವಾಗಿದೆ. ಅದರ ಸ್ಲ್ಯಾಬ್‌ನ ಅಡಿಯಲ್ಲಿ ಕಬ್ಬಿಣದ ರಾಡುಗಳು ಕಾಣುತ್ತಿದೆ. ಸ್ಲ್ಯಾಬ್‌ನ ಮೇಲೆ ಭಾರ ಬಿದ್ದಲ್ಲಿ ಕುಸಿಯುವುದು ನಿಶ್ಚಿತ ಎಂಬಂಥ ಸ್ಥಿತಿ ಇದೆ.
ಶೀಘ್ರದಲ್ಲಿ ಪರಿಶೀಲನೆ
ಪ್ರತಿಯೊಂದು ಕಿಂಡಿ ಅಣೆಕಟ್ಟು ನಿರ್ವಹಣೆ ನಡೆಸಲು ಯಾವುದೇ ಇಲಾಖೆಗಳಿಂದಲೂ ನಿರ್ದಿಷ್ಟವಾದ ಅನುದಾನ ಇಲ್ಲ. ಆದರೂ ಸ್ಥಳ ಪರಿಶೀಲಿಸಿ ಪಂಚಾಯತ್‌ನ ಅನುದಾನವೇ ಬಳಸಿಕೊಂಡು ಸ್ಥಳೀಯರಿಗೆ ನಿರ್ವಹಣೆ ನೀಡಲು ಚಿಂತಿಸಲಾಗುವುದು
– ಜಲಜಾ ಪಾಣಾರ್,
ಅಧ್ಯಕ್ಷರು,ಹಳೆಯಂಗಡಿ ಗ್ರಾಮ ಪಂಚಾಯತ್
ಜನಪ್ರತಿನಿಧಿಗಳ ನಿರ್ಲಕ್ಷ್ಯ
ಇಲ್ಲೊಂದು ಕಿಂಡಿ ಅಣೆಕಟ್ಟು ಇದೆ ಎಂಬ ಮಾಹಿತಿಯೂ ಸಹ ನಮ್ಮ ಜನಪ್ರತಿನಿಧಿಗಳಿಗೆ ಬಹುಶಃ ತಿಳಿದಿಲ್ಲ. ಈ ಅಣೆಕಟ್ಟನ್ನು ಸೂಕ್ತವಾಗಿ ನಿರ್ವಹಣೆ ನಡೆಸಲು ಕನಿಷ್ಠ ಸ್ಥಳೀಯರಿಗಾದರೂ ನೀಡಿದಲ್ಲಿ ನಾವೇ ನೋಡಿಕೊಳ್ಳುತ್ತಿದ್ದೆವು. ಕೂಡಲೇ ಈ ಬಗ್ಗೆ ಗ್ರಾಮ ಪಂಚಾಯತ್ ಅಗತ್ಯ ಕ್ರಮ ಕೈಗೊಳ್ಳಬೇಕು.
– ಸ್ಥಳೀಯ ಗ್ರಾಮಸ್ಥರು
ನರೇಂದ್ರ ಕೆರೆಕಾಡು