Advertisement
ಸಸಿಹಿತ್ಲುವಿನ ಕಡಲ ಕಿನಾರೆಗಳಿಗೆ ಆಗಮಿಸುವ ಪ್ರವಾಸಿಗರ ಸಹಿತ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಲು ಕೆಂಪು ಫಲಕಗಳನ್ನು ಜಿಲ್ಲಾಡಳಿತದ ಮೂಲಕ ಹಾಕಲಾಗಿದೆ. ಸಸಿಹಿತ್ಲುವಿನಲ್ಲಿ ಕರ್ತವ್ಯ ನಿರ್ವಹಿಸು ತ್ತಿರುವ ಖಾಯಂ ಜೀವರಕ್ಷಕರ ಸಹಿತ ಗೃಹರಕ್ಷಕದಳದವರು ಕಾರ್ಯಪ್ರವೃತ್ತರಾಗಿದ್ದಾರೆ. ನಿರ್ಬಂಧಿತ ಪ್ರದೇಶವನ್ನು ಉಲ್ಲಂಘಿಸಿ ಅತಿಕ್ರಮಿಸಿ ಪ್ರವೇಶಿಸಿದಲ್ಲಿ ಅಥವಾ ಉದ್ಧಟತನದಿಂದ ವರ್ತಿಸಿದಲ್ಲಿ ಅಂತಹವರನ್ನು ಸಂಬಂಧಿಸಿದ ಸುರತ್ಕಲ್ ಪೊಲೀಸ್ ಠಾಣೆಗೆ ಒಪ್ಪಿಸಲು ಸಹ ಅವರಿಗೆ ಆದೇಶ ನೀಡಲಾಗಿದೆ. ಗುಂಪಾಗಿ ಬರುವ ಪ್ರವಾಸಿಗರು ಎಚ್ಚರಿಕೆಯ ಮಾತನ್ನು ಮೀರಿ ವರ್ತಿಸಬಾರದು ಎಂದು ಗೃಹರಕ್ಷಕದಳದವರು ಸೂಚಿಸಿದ್ದಾರೆ. ಬೆಳಗ್ಗೆ 9ರಿಂದ ಸಂಜೆ 7ರ ವರೆಗೆ ಮಾತ್ರ ಸಸಿಹಿತ್ಲು ಬೀಚ್ ತೆರೆದಿರುತ್ತದೆ. ಸಮಯದ ಪರಿಪಾಲನೆ ಹಾಗೂ ಪ್ರವಾಸಿಗರು ತಾಳ್ಮೆಯಿಂದ ವರ್ತಿಸಬೇಕು ಎಂದು ಆಗಾಗ ಸ್ಥಳದಲ್ಲಿಯೇ ಸೂಚಿಸಲಾಗುತ್ತಿದೆ ಎಂದು ಗೃಹ ರಕ್ಷಕದಳ ಸಿಬಂದಿ ರಾಜೇಶ್ ಪತ್ರಿಕೆಗೆ ಪ್ರತಿಕ್ರಿಯಿಸಿದರು.
ಸಸಿಹಿತ್ಲುವಿನ ಕಡಲ ಕಿನಾರೆಗಳಲ್ಲಿ ಇಬ್ಬರು ಮಂದಿ ಗೃಹ ರಕ್ಷಕದಳದವರನ್ನು ನಿಯೋಜಿಸಲಾಗಿದೆ. ಇವರು ಪ್ರತಿದಿನ ಸುರತ್ಕಲ್ ಠಾಣೆಯಲ್ಲಿ ಹಾಜರಾತಿ ಹಾಕಿ ಸಸಿಹಿತ್ಲುವಿನ ಬೀಚ್ ನಲ್ಲಿ ಕರ್ತವ್ಯ ನಿರ್ವಹಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ಪ್ರಕ್ರಿಯೆ ಆಗಸ್ಟ್ 30ರವರೆಗೆ ಮುಂದುವರಿಯಲಿದೆ.