Advertisement
ಮಹಿಳಾ ಮತ್ತು ಮಕ್ಕಳ ಇಲಾಖೆ, ಜಿಲ್ಲಾಡಳಿತ, ಜಿ.ಪಂ. ವತಿಯಿಂದ ಬ್ರಹ್ಮಗಿರಿ ಬಾಲಭವನದ ಆವರಣದಲ್ಲಿ ನಿರ್ಮಾಣಗೊಂಡ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕರ ನೂತನ ಕಚೇರಿಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಪೋಷಣ್ ಅಭಿಯಾನದ ಸಾಧನೆಯಲ್ಲಿ ರಾಜ್ಯ ಹಿಂದೆ ಉಳಿದಿದೆ. ಮುಂದಿನ 5 ತಿಂಗಳೊಳಗೆ ಅಭಿಯಾನದಲ್ಲಿ ಸಂಪೂರ್ಣ ಯಶಸ್ಸು ಸಾಧಿಸಿ, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ನಂಬರ್ ಒನ್ ಸ್ಥಾನಕ್ಕೇರಿಸುವ ಗುರಿ ಇದೆ ಎಂದರು.
ರಾಜ್ಯದ ಎಲ್ಲ ಅಂಗನವಾಡಿ ಕಾರ್ಯ ಕರ್ತೆಯರಿಗೆ ಶೀಘ್ರದಲ್ಲಿ ಸ್ಮಾರ್ಟ್ ಫೋನ್‌ಗಳನ್ನು ವಿತರಿಸಲಾಗುತ್ತದೆ. ಪ್ರತೀ ತಿಂಗಳು ಮಕ್ಕಳ ಹಾಜರಾತಿ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಸ್ಮಾರ್ಟ್ ಫೋನ್‌ನಲ್ಲಿ ದಾಖಲಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. ಇದರಿಂದ ಅಂಗನವಾಡಿಗಳ ಸಂಪೂರ್ಣ ಮಾಹಿತಿಯನ್ನು ಬೆಂಗಳೂರು ಮತ್ತು ದಿಲ್ಲಿಯಲ್ಲಿ ಕುಳಿತುಕೊಳ್ಳುವವರು ಸಹ ಪಡೆಯ ಬಹುದಾಗಿದೆ ಎಂದರು. ಪ್ರತಿ ತಿಂಗಳ 10ರೊಳಗೆ ಗೌರವಧನ
ಅಂಗನವಾಡಿ ಸಹಾಯಕಿಯರ ಗೌರವಧನ 2,000ರೂ. ಹೆಚ್ಚಳ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಂಗನವಾಡಿ ಸಹಾಯಕರಿಗೆ ನೀಡುವ ಗೌರವ ಧನವನ್ನು ಪ್ರತಿ ತಿಂಗಳ 10ನೇ ತಾರೀಕಿನ ಒಳಗೆ ಖಾತೆಗೆ ಜಮೆ ಮಾಡ ಲಾಗುತ್ತದೆ. ಅಂಗನವಾಡಿ ಕಾರ್ಯಕರ್ತೆ, ಸಹಾಯಕರನ್ನು ಸಂಬೋಧಿಸಲು ಒಳ್ಳೆಯ ಹೆಸರಿನ ಆವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಹೊಸ ಹೆಸರು ಸೂಚಿಸಿ ಎಂದರು.
Related Articles
Advertisement
ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಬೇರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿಯಲ್ಲಿ ನಡೆಯುವ ಅಕ್ರಮಗಳು ಕಡಿಮೆ ಇದೆ. ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರನ್ನಾಗಿಸಲು ಮಹಿಳಾ ಸ್ವಸಹಾಯ ಸಂಘಗಳಿಂದ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆಯನ್ನು ಮುಂದಿನ ಬಜೆಟ್‌ನಲ್ಲಿ ಮಂಡಿಸುವಂತಾಗಬೇಕು ಎಂದು ಹೇಳಿದರು.
ಜಿ.ಪಂ.ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ. ಕೆ. ಶೆಟ್ಟಿ , ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ರೇಶ್ಮಾ ಉದಯ ಶೆಟ್ಟಿ ಮತ್ತು ಶಿಲ್ಪಾ ಜಿ. ಸುವರ್ಣ ಜಿಲ್ಲಾಧಿಕಾರಿ ಜಿ ಜಗದೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್. ಶೇಷಪ್ಪ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶೋಭಾ ಜಿ. ಪುತ್ರನ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಉಪಸ್ಥಿತರಿದ್ದರು. ವೀಣಾ ವಿವೇಕಾನಂದ್ ಸ್ವಾಗತಿಸಿ, ನಿರೂಪಿಸಿದರು. ಪ್ರಭಾರ ಶಿಶು ಅಧಿಕಾರಿ ಶೋಭಾ ಶೆಟ್ಟಿ ವಂದಿಸಿದರು.
ಶೇ. 60ರಷ್ಟು ಖಾಲಿ ಹುದ್ದೆ ಭರ್ತಿ
ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು, ಹತ್ತು ವರ್ಷ ಗಳಿಂದ ಬಾಕಿಯಿರುವ ಮುಂಬಡ್ತಿ, ವರ್ಗಾವಣೆ ಮತ್ತು ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಖಾಲಿ ಇರುವ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುತ್ತದೆ. ಇಲಾಖೆಗೆ ದಕ್ಷತೆಯನ್ನು ಹೆಚ್ಚಿಸಲು ಖಾಲಿ ಇರುವ ಶೇ. 60 ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲಾಗುವುದು ಎಂದು ಸಚಿವೆ ಹೇಳಿದರು.