Advertisement

ಸಸಾಲಟ್ಟಿ ಏತ ನೀರಾವರಿಗೆ ಮುಕ್ತಿ ಎಂದು?

12:35 PM Mar 04, 2020 | Suhan S |

ಮಹಾಲಿಂಗಪುರ: ರಬಕವಿ-ಬನಹಟ್ಟಿ, ಮುಧೋಳ, ಜಮಖಂಡಿ, ಬೀಳಗಿ ತಾಲೂಕಿನ ರೈತರ ಆಶಾಕಿರಣ ಸಸಾಲಟ್ಟಿ ಏತ ನೀರಾವರಿ ಯೋಜನೆಗೆ ರಾಜ್ಯ ಬಜೆಟ್‌ನಲ್ಲಿ ಹೆಚ್ಚಿನ ಅನುದಾನದ ನಿರೀಕ್ಷೆ ಹೊಂದಿರುವ ತೇರದಾಳ ಮತಕ್ಷೇತ್ರದ ರೈತರು ಯೋಜನೆ ಪೂರ್ಣಗೊಳ್ಳುವ ಆಶಾಭಾವನೆ ಹೊಂದಿದ್ದಾರೆ.

Advertisement

ಏನಿದು ಯೋಜನೆ?: ಸಸಾಲಟ್ಟಿ ಏತ ನೀರಾವರಿ ಯೋಜನೆಯು ಮಳೆಗಾಲದಲ್ಲಿ ಕೃಷ್ಣಾ ನದಿಯಲ್ಲಿ ಹರಿದು ಹೋಗುವ ನೀರನ್ನು 12 ಕಿ.ಮಿ. ಲಿಪ್ಟ್ ಮೂಲಕ ಸಸಾಲಟ್ಟಿ ಹತ್ತಿರ ಘಟಪ್ರಭಾ ಕಾಲುವೆಗೆ ನೀರು ಹರಿಸುವುದಾಗಿದೆ. ರಾಯಬಾಗ ತಾಲೂಕಿನ ಕೆಲ ಹಳ್ಳಿಗಳು ಸೇರಿದಂತೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ, ಮುಧೋಳ-ಬೀಳಗಿ, ಜಮಖಂಡಿ ತಾಲೂಕಿನ ಸುಮಾರು 36 ಸಾವಿರ ಹೆಕ್ಟೇರ್‌ ಜಮೀನಿಗೆ ನೀರುಣಿಸುವ ಪ್ರಮುಖ ಯೋಜನೆಯಾಗಿದೆ. ಇದರಿಂದ ನಾಲ್ಕು ತಾಲೂಕಿನ ರೈತರಿಗೆ ಸಂಪೂರ್ಣ ನೀರಾವರಿ ಸೌಲಭ್ಯ ದೊರಕಲಿದೆ.

ರೈತ ಸಂಘದ ದಶಕಗಳ ಹೋರಾಟ: ಈ ಯೋಜನೆ ಜಾರಿಗೆ ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳು ಒಂದೂವರೆ ದಶಕದಿಂದ ಹೋರಾಟ ನಡೆಸುತ್ತಿವೆ. ಅಲ್ಲದೇ, ಕಳೆದ 10ವರ್ಷಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿ ಘಟಪ್ರಭಾ ಕಾಲುವೆ ನೀರು ನಿಗದಿತ ಪ್ರಮಾಣದಲ್ಲಿ ಬಾರದೇ ರೈತ ಸಮುದಾಯ ಕಂಗಾಲಾಗಿದೆ. ಏತ ನೀರಾವರಿ ಯೋಜನೆಯಿಂದ ಮಳೆಗಾಲದ 4 ತಿಂಗಳಲ್ಲಿ ಕೃಷ್ಣಾ ನದಿಯಿಂದ ಸುಮಾರು 8.47 ಟಿಎಂಸಿ ನೀರನ್ನು ಬಳಸಿ, ಹಿಡಕಲ್‌ ಜಲಾಶಯದಿಂದ ಕಾಲುವೆ ನೀರನ್ನು ಸಂಗ್ರಹಿಸಿಕೊಂಡರೆ ಬೇಸಿಗೆಯಲ್ಲಿ ರೈತ ಸಮುದಾಯಕ್ಕೆ ಅನುಕೂಲವಾಗಲಿದೆ.

38 ದಿನಗಳ ಹೋರಾಟಕ್ಕೆ ಸಿಕ್ಕ ಫಲ: ಸಸಾಲಟ್ಟಿ ಏತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಮಹಾಲಿಂಗಪುರ ಚನ್ನಮ್ಮ ವೃತ್ತದಲ್ಲಿ 16-1-2017ರಿಂದ 22-2-2017ರವರೆಗೆ ರೈತ ಸಂಘದ ನೇತೃತ್ವದಲ್ಲಿ ಪಕ್ಷಾತೀತವಾಗಿ 38 ದಿನಗಳ ಕಾಲ ಹೋರಾಟ ಮಾಡಲಾಗಿತ್ತು. ಈ ಹೋರಾಟದಲ್ಲಿ ಮತಕ್ಷೇತ್ರದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘಟನೆಗಳು ಭಾಗವಹಿಸಿ ಬೆಂಬಲ ಸೂಚಿಸಿದ್ದವು.

ಭರವಸೆ ಈಡೇರಿಸಿದ್ದ ಉಮಾಶ್ರೀ-ಪಾಟೀಲ: ಹೋರಾಟದ ವೇದಿಕೆಗೆ ಭೇಟಿ ನೀಡಿದ್ದ ಅಂದಿನ ನೀರಾವರಿ ಸಚಿವ ಎಂ.ಬಿ.ಪಾಟೀಲ, ಅಂದಿನ ಶಾಸಕಿ, ಸಚಿವೆ ಉಮಾಶ್ರೀ ಯೋಜನೆ ಜಾರಿ ಮಾಡುವ ಭರವಸೆ ನೀಡಿದ್ದರಿಂದ ಹೋರಾಟ ಅಂತ್ಯಗೊಳಿಸಿದ್ದರು. ಅದರಂತೆ 2018ರ ರಾಜ್ಯ ಬಜೆಟ್‌ನಲ್ಲಿ ಸಸಾಲಟ್ಟಿ ಏತ ನೀರಾವರಿ ಯೋಜನೆ ಜಾರಿಗೆ 140ಕೋಟಿ ಮಂಜೂರಿ ಮಾಡಿಸುವ ಮೂಲಕ ಹೋರಾಟಗಾರರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದರು.

Advertisement

ಘೋಷಣೆಗೆ ಮಾತ್ರ ಸೀಮಿತ?: ಅನುದಾನ ಮಂಜೂರು ಮಾಡಿಸಿದ್ದ ಉಮಾಶ್ರೀ 2018ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿ, ಬಿಜೆಪಿಯ ಸಿದ್ದು ಸವದಿ ಶಾಸಕರಾದರು. ನಂತರ ಸಮ್ಮಿಶ್ರ ಸರಕಾರ ರಚನೆ ಹಗ್ಗಜಗ್ಗಾಟ, ಪಕ್ಷಾಂತರ ಪರ್ವ ಸೇರಿದಂತೆ ಹಲವು ಕಾರಣಗಳಿಂದ ಯೋಜನೆ ಘೋಷಣೆಗೆ ಮಾತ್ರ ಸೀಮಿತವಾಗಿಯೇ ಉಳಿಯಿತು. ಕಳೆದ ಎರಡು ವರ್ಷಗಳಲ್ಲಿ ಯೋಜನೆ ಜಾರಿ ಕುರಿತು ಯಾವುದೇ ಬೆಳವಣಿಗೆ ನಡೆದಿಲ್ಲ.

ಈ ಬಜೆಟ್‌ನಲ್ಲಾದರೂ ಪೂರ್ಣಗೊಳ್ಳಲಿ :  ತೇರದಾಳ ಮತಕ್ಷೇತ್ರದಲ್ಲಿ ಬಿಜೆಪಿಯ ಸಿದ್ದು ಸವದಿ ಶಾಸಕರಿದ್ದಾರೆ. ರಾಜ್ಯದಲ್ಲಿ ಪೂರ್ಣ ಬಹುಮತದ ಬಿಜೆಪಿ ಸರಕಾರ ಅ ಧಿಕಾರದಲ್ಲಿದೆ. ಮುಧೋಳ ಶಾಸಕ ಗೋವಿಂದ ಕಾರಜೋಳ ಉಪಮುಖ್ಯಮಂತ್ರಿಗಳು ಇರುವುದರಿಂದ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಸಸಾಲಟ್ಟಿ ಏತ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ಬಿಡುಗಡೆಗೊಂಡು ನಾಲ್ಕು ತಾಲೂಕಿನ ರೈತರ ದಶಕಗಳ ಕನಸು ನನಸಾಗಲಿ.  –ಗಂಗಾಧರ ಮೇಟಿ, ಸಸಾಲಟ್ಟಿ ಏತ ನೀರಾವರಿಯ ಹೋರಾಟಗಾರರು.

 

-ಚಂದ್ರ ಶೇಖರ ಮೋರೆ

Advertisement

Udayavani is now on Telegram. Click here to join our channel and stay updated with the latest news.

Next