Advertisement
ಕಾವೇರಿ ಮತ್ತು ಮಹದಾಯಿ, ಕೃಷ್ಣಾ ಮತ್ತಿತರ ಜಲವಿವಾದಗಳು, ರಾಜ್ಯದ ಜಲಾಶಯಗಳಲ್ಲಿ ನೀರಿನ ಪರಿಸ್ಥಿತಿ ಕುರಿತು ಚರ್ಚಿಸಲು ಆ. 23ರಂದು ಸರ್ವಪಕ್ಷಗಳ ಸಭೆ ಕರೆದಿದ್ದು, ಕೆಲವು ಸಂಸದರಿಗೂ ಆಹ್ವಾನ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.
Related Articles
Advertisement
ಸರಕಾರದ ವಿರುದ್ಧ ವಿಪಕ್ಷಗಳ ಸಮರ
ಒಂದೆಡೆ ಮಳೆ ಕೊರತೆಯಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಸರಕಾರದ ನಡೆಯನ್ನು ಖಂಡಿಸಿವೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸರಕಾರದ ಮೌನವನ್ನು ಪ್ರಶ್ನಿಸಿದ್ದಾರೆ. ಸರಕಾರ ಈ ವಿಷಯವನ್ನು ಲಘುವಾಗಿ ಪರಿಗಣಿಸಿದೆ. ಪ್ರತೀ ವರ್ಷ ತನ್ನ ಸಾಗುವಳಿ ಭೂಮಿಯನ್ನು ತಮಿಳುನಾಡು ವಿಸ್ತರಿಸುತ್ತಿದೆ. ನ್ಯಾಯಮಂಡಳಿಯು ತಮಿಳುನಾಡಿಗೆ ಒಂದು ಲಕ್ಷ ಹೆಕ್ಟೇರ್ ಸಾಗುವಳಿ ನೀರನ್ನು ನೀಡಿದೆ. ಆದರೆ ನಾಲ್ಕು ಲಕ್ಷ ಹೆಕ್ಟೇರ್ ಭೂಮಿಗೆ ನೀರು ಪೂರೈಸುವುದು ಆ ರಾಜ್ಯದ ಬೇಡಿಕೆಯಾಗಿದೆ. ಇದನ್ನು ನಾವು ಪ್ರತಿಭಟಿಸಬೇಕಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತತ್‌ಕ್ಷಣ ನಿಲ್ಲಿಸಬೇಕು ಹಾಗೂ ಸುಪ್ರೀಂಕೋರ್ಟ್‌ಗೆ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಆ ಮೂಲಕ ರೈತರ ಹಿತ ಕಾಯಬೇಕು. ತಮಿಳುನಾಡು ಕುರುವೈ ಬೆಳೆಗೆ ಎರಡು ಪಟ್ಟು ನೀರು ಬಳಕೆ ಮಾಡಿದೆ. ರಾಜ್ಯ ಸರಕಾರ ಇದನ್ನು ಪ್ರತಿಭಟಿಸದೆ, ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ಸರಕಾರ ಅರ್ಜಿ ಹಾಕಿದ ಕೂಡಲೇ ನೀರು ಬಿಡುಗಡೆ ಮಾಡಿರುವುದು ಖಂಡನೀಯ ಎಂದಿದ್ದಾರೆ.
ಇಂದು ಬಿಜೆಪಿ, ರೈತ ಸಂಘಗಳ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರಕಾರದ ನಡೆಯನ್ನು ಖಂಡಿಸಿ ಸೋಮವಾರ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಬಂದ್‌ಗೆ ಬಿಜೆಪಿ ಕರೆ ನೀಡಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಆಹ್ವಾನ ನೀಡಲಾಗಿದೆ. ಜತೆಗೆ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಆಟೋ, ಟ್ಯಾಕ್ಸಿ ಮಾಲಕರ ಸಂಘಗಳಿಗೂ ಮನವಿ ಮಾಡಲಾಗಿದೆ. ಈ ಎಲ್ಲ ಒತ್ತಡಗಳಿಗೆ ಮಣಿದ ಸರಕಾರವು ಸರ್ವಪಕ್ಷಗಳ ಸಭೆ ಕರೆದಿದೆ.
ಇಂದು ಸುಪ್ರೀಂ ವಿಚಾರಣೆ
ತಮಿಳುನಾಡು ಸಲ್ಲಿಸಿರುವ ಅರ್ಜಿಯು ಆ. 21ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ನಮ್ಮ ರಾಜ್ಯದಿಂದಲೂ ಮನವಿ ಸಲ್ಲಿಸಲಾಗುವುದು ಎಂದು ಸರಕಾರ ಹೇಳಿದೆ.
ತಮಿಳುನಾಡು ಸಲ್ಲಿಸಿದ ಅರ್ಜಿ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ನಿಗದಿಯಾಗಿದೆ. ಕರ್ನಾಟಕವನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ನಮ್ಮ ವಾದಕ್ಕೆ ಕಾಲಾವಕಾಶ ಕೇಳಲಾಗುವುದು.
– ಕೆ. ಶಶಿಕಿರಣ್ ಶೆಟ್ಟಿ, ಅಡ್ವೊಕೇಟ್ ಜನರಲ್
ಕಾವೇರಿ ನದಿ ನೀರು ವಿಚಾರದಲ್ಲಿ ಪ್ರತಿಭಟನೆ ಮಾಡುವ ಯಾವುದೇ ನೈತಿಕ ಹಕ್ಕು ಬಿಜೆಪಿಗಿಲ್ಲ. ಹಿಂದೆ ಅವರ ಸರಕಾರ ಇದ್ದಾಗಲೇ ತಮಿಳುನಾಡಿಗೆ ಸಾಕಷ್ಟು ನೀರು ಬಿಟ್ಟಿದ್ದಾರೆ.
– ಸಿದ್ದರಾಮಯ್ಯ, ಸಿಎಂ
ಅಧಿಕಾರಕ್ಕೆ ಬರುವುದಕ್ಕೆ ಮುನ್ನ ಮೇಕೆದಾಟು ಯೋಜನೆಗಾಗಿ ಹೋರಾಟ ಮಾಡಿದವರು ಈಗ ಏನು ಮಾಡುತ್ತಿದ್ದಾರೆ?
– ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ