Advertisement

ಬಿಜೆಪಿ ಸರ್ಕಾರ ವೈಫಲ್ಯ ಮರೆಮಾಚಲು ಸಾರ್ವಕರ್‌ ಉತ್ಸವ: ಪ್ರಿಯಾಂಕ್‌ ಖರ್ಗೆ

08:54 PM Aug 24, 2022 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ ಹೇಳಿಕೊಳ್ಳಲು ಯಾವುದೇ ಜನಪರ ಸಾಧನೆ ಇಲ್ಲ. ಹೀಗಾಗಿ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಾರ್ವಕರ್‌ ಉತ್ಸವ ಮಾಡುತ್ತಿದೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಡೀ ಸರ್ಕಾರ ಕಮೀಷನ್‌ನಲ್ಲಿ ಮುಳುಗಿದೆ. ಕೆಂದ್ರ ಹಾಗೂ ರಾಜ್ಯ ಸರ್ಕಾರದ ನೀತಿಗಳಿಂದ ಜನಸಾಮಾನ್ಯರು ಬೆಲೆ ಏರಿಕೆ, ನಿರುದ್ಯೋಗದಿಂದ ತತ್ತರಿಸುತ್ತಿದ್ದಾರೆ. ಇದನ್ನು ಮರೆಮಾಚಲು ಭಾವನಾತ್ಮಕ ವಿಚಾರ ಮುಂದಿಡಲಾಗುತ್ತಿದೆ ಎಂದು ದೂರಿದರು.

ಸಾವರ್ಕರ್‌ ಅವರು ಸ್ವಾತಂತ್ಯ ಹೋರಾಟ ಮಾಡುವ ಉದ್ದೇಶ ಇದ್ದಿದ್ದರೆ ಅವರು ವಿದೇಶದಲ್ಲಿ ಬಂಧನವಾದಾಗ ಭಾರತಕ್ಕೆ ಬರಲು ಯಾಕೆ ಒಪ್ಪಲಿಲ್ಲ. ಅವರು ಸೆರೆವಾಸದಲ್ಲಿದ್ದಾಗ ಬ್ರಿಟೀಷರಿಗೆ ಆರು ಬಾರಿ ಕ್ಷಮಾಪಣಾ ಪತ್ರ ಬರೆದಿದ್ದು ಯಾಕೆ. ಜೈಲಿಂದ ಬಿಡುಗಡೆಯಾದ ನಂತರ ಅವರು ಎಷ್ಟು ಹೋರಾಟ ಮಾಡಿದರು? ಅದರ ಪರಿಣಾಮಗಳೇನು. ಮುಸ್ಲಿಂ ಲೀಗ್ ಜತೆ ಅವರು ದೇಶದ ಹಲವು ಕಡೆಗಳಲ್ಲಿ ಸರ್ಕಾರ ರಚಿಸಿದ್ದು ಯಾಕೆ? ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಲಿಲ್ಲ ಯಾಕೆ ಎಂಬುದಕ್ಕೆ ಬಿಜೆಪಿಯವರು ಉತ್ತರಿಸಲಿ ಎಂದು ಸವಾಲು ಹಾಕಿದರು.

ಸಾರ್ವಕರ್‌ ಹಿಂದುತ್ವದ ಪಿತಾಮಹ ಎಂಬುದು ನಿಜವಾಗಿದ್ದರೆ, ಅವರು ಗೋಮಾತೆಯ ಪೂಜೆ ಮಾಡಬೇಡಿ ಎಂದಿದ್ದರು. ಅವರ ಮಾತಿನಿಂತೆ ಗೋಮಾತೆ ಪೂಜೆ ಬಿಡುತ್ತೀರಾ. ಧರ್ಮದ ಆಧಾರದ ಮೇಲೆ ನಮ್ಮ ದೇಶ ವಿಭಜನೆ ಮಾಡಬೇಕು ಎಂದು ಮೊದಲು ಧ್ವನಿ ಎತ್ತಿದವರ ಪೂಜೆ ಯಾಕೆ ಮಾಡುತ್ತಿದ್ದೀರಿ? ಸಾವರ್ಕರ್‌ ನಾಸ್ತಿಕರಾಗಿದ್ದರು, ಈಗ ಪ್ರತಿ ಗಣೇಶೋತ್ಸವದ ಪೆಂಡಾಲ್‌ ನಲ್ಲಿ ಸಾರ್ವಕರ್‌ ಫೋಟೋ ಇಡುತ್ತಿರುವುದೇಕೆ? ಆ ಮೂಲಕ ದೇವರು ಮತ್ತು ಸಾವರ್ಕರ್‌ ಗೆ ಅಪಮಾನ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಸಂವಹನ ವಿಭಾಗದ ಉಪಾಧ್ಯಕ್ಷ ರಮೇಶ್‌ ಬಾಬು ಉಪಸ್ಥಿತರಿದ್ದರು.

ಬಿಜೆಪಿಯವರು ಮಠಗಳಿಗೆ ಶೇ.30, ಗುತ್ತಿಗೆದಾರರಿಗೆ ಶೇ.40, ಬಿಬಿಎಂಪಿಯಲ್ಲಿ ಶೇ.50, ತಮ್ಮ ಕಾರ್ಯಕರ್ತರಿಗೆ ಶೇ. 60 ಕಮಿಷನ್‌ ನಿಗದಿ ಮಾಡಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಸಚಿವರ ಮೇಲೆ ನೇರ ಆರೋಪ ಮಾಡುತ್ತಿರುವಾಗ ಇದಕ್ಕಿಂತ ಬೇರೆ ಸಾಕ್ಷಿ ಮತ್ತೇನು ಬೇಕು?
– ಪ್ರಿಯಾಂಕ್‌ ಖರ್ಗೆ, ಶಾಸಕ

Advertisement
Advertisement

Udayavani is now on Telegram. Click here to join our channel and stay updated with the latest news.

Next