ಕುರುಗೋಡು: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಕವಿ ಸರ್ವಜ್ಞ ಜಯಂತಿ ಆಚರಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಕವಿ ಸರ್ವಜ್ಞ ಭಾವ ಚಿತ್ರಕ್ಕೆ ಗೌರವ ಸಲ್ಲಿಸಿ ಮಾತನಾಡಿ, ಸರ್ವಜ್ಞರ ವಚನಗಳು ಜೀವನದ ಅನುಭವಗಳನ್ನು ಒಳಗೊಂಡಿವೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಯತ್ನ ವಚನಗಳ ಮೂಲಕ ನಡೆದಿದೆ. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಸರ್ವಜ್ಞ ತನ್ನ ಹಿತನುಡಿಗಳಿಂದ ಸಮಾಜವನ್ನು ಒಳ್ಳೆಯ ಹಾದಿಯಲ್ಲಿ ಮುನ್ನಡೆಸಿದ್ದಾರೆ. ಇವರ ತ್ರಿಪದಿಗಳಲ್ಲಿರುವ ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಆಡು ಮಾತಿನಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರು ಸರ್ವಜ್ಞ. ಅವಿದ್ಯಾವಂತರಾದವರೂ ಎಲ್ಲ ಜನರನ್ನೂ ಒಂದೇ ದೃಷ್ಟಿಯಿಂದ ನೋಡಿ ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದವರು ಎಂದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಮಲ್ಲೇಶಪ್ಪ, ಉಪ ತಹಸೀಲ್ದಾರರು, ಕಂದಾಯ ನೀರಿಕ್ಷಕರು, ಗ್ರಾಮಲೆಕ್ಕಿಗರು, ಕಂದಾಯ ಇಲಾಖೆ ಸಿಬ್ಬಂದಿಗಳು ಹಾಗೂ ಪಟ್ಟಣದ ಮುಖಂಡರು, ಸಮುದಾಯದ ಮುಖಂಡರು ಹಾಜರಿದ್ದರು.