Advertisement

ವಿದ್ಯಾರ್ಥಿ ಸಂಖ್ಯೆ ಹೆಚ್ಚಳಕ್ಕೆ ಸರ್ವ ಶಿಕ್ಷಾ ಅಭಿಯಾನ ಪಣ

11:19 PM Aug 19, 2019 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಸರ್ವ ಶಿಕ್ಷಾ ಅಭಿಯಾನವು ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಒಟ್ಟು 3,06,864 ವಿದ್ಯಾರ್ಥಿಗಳಿದ್ದು, ಶೇ. 95.37 ಗುರಿ ಸಾಧನೆಯಾಗಿದೆ.

Advertisement

ಮಕ್ಕಳಿಗೆ ಶಿಕ್ಷಣದ ಹಕ್ಕು ಕಡ್ಡಾಯ. ಯಾವುದೇ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದೆಂಬ ಕಾರಣಕ್ಕಾಗಿ ಸರ್ವ ಶಿಕ್ಷಾ ಅಭಿಯಾನ ಪ್ರಯತ್ನ ನಡೆಸುತ್ತಿದ್ದು, ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಯತ್ತ ಕರೆತರಲು ಮಕ್ಕಳ ಮನೆ ಬಾಗಿಲಿಗೇ ತೆರಳಿ ಕ್ರಮ ವಹಿಸಲಾಗುತ್ತಿದೆ. ಅದಕ್ಕಾಗಿಯೇ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಗುರಿ ನಿಗದಿಪಡಿಸಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಕಳೆದ ವರ್ಷ ಜಿಲ್ಲೆಯ ಸರಕಾರಿ, ಅನುದಾನಿತ, ಅನುದಾನರಹಿತ, ಖಾಸಗಿ, ಸಿಬಿಎಸ್ಸಿಇ ಶಾಲೆಗಳ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 3,21,757 ಆಗಿತ್ತು. ಅದೇ ಸಂಖ್ಯೆಯನ್ನು ಗುರಿಯಾಗಿರಿಸಿಕೊಂಡು ಈ ಬಾರಿ ಪ್ರಯತ್ನ ನಡೆಸಲಾಗಿದ್ದು, ಹೊಸ ದಾಖಲಾತಿಗಳೂ ಸೇರಿ ಒಟ್ಟು ಸಂಖ್ಯೆ 3,06864 ಆಗಿದೆ.

ಬಂಟ್ವಾಳ ಶೇ. 98.32
ಬಂಟ್ವಾಳದಲ್ಲಿ ಒಟ್ಟು ಗುರಿ 59,148 ಆಗಿದ್ದು, ಪ್ರಸ್ತುತ 58,156 ಮಕ್ಕಳಿದ್ದು, ಶೇ. 98.32 ಗುರಿ ಸಾಧಿಸಲಾಗಿದೆ. ಬೆಳ್ತಂಗಡಿಯಲ್ಲಿ 40,051 ಒಟ್ಟು ಗುರಿಯಾಗಿದ್ದು, 38,785 ಮಕ್ಕಳಿದ್ದು, ಶೇ. 96.84 ಗುರಿ ಸಾಧಿಸಲಾಗಿದೆ. ಮಂಗಳೂರು ಉತ್ತರದಲ್ಲಿ 66,465 ಒಟ್ಟು ಗುರಿಯಾಗಿದ್ದು, ಪ್ರಸ್ತುತ 63,017 ಮಕ್ಕಳಿದ್ದು, ಶೇ. 94.81 ಗುರಿ, ಮಂಗಳೂರು ದಕ್ಷಿಣದಲ್ಲಿ 68917 ಒಟ್ಟು ಗುರಿಯಾದರೆ, 62,950 ಮಕ್ಕಳು ಪ್ರಸ್ತುತ ಇದ್ದು, ಶೇ. 91.34 ಗುರಿ ಸಾಧನೆಯಾಗಿದೆ.

ಮೂಡಬಿದಿರೆಯಲ್ಲಿ 19,159 ಒಟ್ಟು ಗುರಿಯಾದರೆ, 18,238 ಮಕ್ಕಳು ಪ್ರಸ್ತುತ ಇದ್ದು, ಶೇ. 95.19 ಗುರಿ ಸಾಧನೆಯಾಗಿದೆ. ಪುತ್ತೂರಿನಲ್ಲಿ 47,791 ಒಟ್ಟು ಮಕ್ಕಳ ಗುರಿಯಾಗಿದ್ದರೆ, 45,690 ಮಕ್ಕಳು ಪ್ರಸ್ತುತ ಇದ್ದು, ಶೇ. 95.60 ಗುರಿ ಸಾಧನೆಯಾಗಿದೆ.

Advertisement

1ನೇ ತರಗತಿಗೆ 32,832 ಮಕ್ಕಳು
ಖಾಸಗಿ ಶಾಲೆಗಳತ್ತ ವಿದ್ಯಾರ್ಥಿಗಳು ಹೆಚ್ಚು ಬಂದರೂ ಸರಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯುವುದು ಇಲಾಖೆಗೂ ಸವಾಲು. ಆದರೆ ಈ ವರ್ಷ ಕರ್ನಾಟಕ ಪಬ್ಲಿಕ್‌ ಸ್ಕೂಲ್ ಆರಂಭಿಸಿರುವುದು, ಆಯ್ದ ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಿರುವುದು ಮತ್ತು ನಲಿಕಲಿಯಲ್ಲಿಯೂ ಪರಿಣಾಮಕಾರಿ ಆಂಗ್ಲ ಶಿಕ್ಷಣ ಬೋಧನೆಗೆ ಸರಕಾರ ಕ್ರಮ ಕೈಗೊಂಡಿರುವುದು ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಒಂದನೇ ತರಗತಿಗೆ ಇಲ್ಲಿವರೆಗೆ ಒಟ್ಟು 32,832 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ವಿಶೇಷ ದಾಖಲಾತಿ
ವಿಶೇಷ ದಾಖಲಾತಿ ಆಂದೋಲನದಡಿ ಸಿಆರ್‌ಪಿ, ಬಿಆರ್‌ಪಿಯವರು ಮನೆಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ದಾಖಲು ಮಾಡಲು ಅರಿವು ಮೂಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 29 ಮಂದಿ ದಾಖಲಾತಿ ಪಡೆದುಕೊಂಡಿದ್ದಾರೆ.

ಶೇ. 100ರಷ್ಟು ತಲುಪಲು ಪ್ರಯತ್ನ

ಮಕ್ಕಳ ವಿಶೇಷ ದಾಖಲಾತಿ ಆಂದೋಲನದೊಂದಿಗೆ, ಈ ಬಾರಿ ಕರ್ನಾಟಕ ಪಬ್ಲಿಕ್‌ ಸ್ಕೂಲ್, ಆಂಗ್ಲ ಮಾಧ್ಯಮ ತರಗತಿ ಆರಂಭ ಮುಂತಾದವು ಮಕ್ಕಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಇದರೊಂದಿಗೆ ಸರಕಾರಿ ಶಾಲೆಗಳಿಗೆ ಮಕ್ಕಳು ಬರಲು ದಾನಿಗಳು ಬಸ್‌ ವ್ಯವಸ್ಥೆ ಮಾಡಿರುವುದು, ಅವಶ್ಯ ಸಾಮಗ್ರಿಗಳನ್ನು ನೀಡಿರುವುದರಿಂದ ಮಕ್ಕಳಿಗೆ ಸುಲಭವಾಯಿತು. ಇನ್ನೂ ಶೇ.5ರಷ್ಟು ಮಕ್ಕಳ ದಾಖಲಾತಿ ಬಾಕಿಯಿದ್ದು, ಶೇ.100ಕ್ಕೆ ನಿರಂತರ ಪ್ರಯತ್ನಿಸಲಾಗುವುದು.
– ಲೋಕೇಶ್‌, ಜಿಲ್ಲಾ ಉಪ ಯೋಜನ ಸಮನ್ವಯಾಧಿಕಾರಿ, ಸರ್ವ ಶಿಕ್ಷಾ ಅಭಿಯಾನ, ದ.ಕ.
– ಧನ್ಯಾ ಬಾಳೆಕಜೆ
Advertisement

Udayavani is now on Telegram. Click here to join our channel and stay updated with the latest news.

Next