ಸಾಹಿತ್ಯ ಸೇರಿದಂತೆ ಯಾವುದೇ ರೀತಿ ಕಲಾ ಅಭಿವ್ಯಕ್ತಿಯನ್ನು ರಾಜಕೀಯ ಕನ್ನಡಕ ಹಾಕಿಕೊಂಡು ನೋಡಿದರೆ ಇಂತಹ ವಿವಾದಗಳು ಸೃಷ್ಟಿ ಆಗುತ್ತಲೇ ಇರುತ್ತದೆ. ಕಲೆಯನ್ನು ಅದರ ಪಾಡಿಗೆ ಬಿಡುವುದೇ ಇದಕ್ಕಿರುವ ಪರಿಹಾರ.
ಪಂಜಾಬಿನ ಮಾದಕ ವಸ್ತು ಹಾವಳಿಯ ಕಥಾ ವಸ್ತು ಹೊಂದಿದ್ದ ಉಡ್ತಾ ಪಂಜಾಬ್ ಸಿನೆಮಾ ಕಳೆದ ವರ್ಷ ಸೃಷ್ಟಿಸಿದ ರಾದ್ಧಾಂತ ಇನ್ನೂ ಹಸಿರಾಗಿದೆ. ಅನುರಾಗ್ ಕಶ್ಯಪ್ ನಿರ್ಮಾಣದ ಈ ಚಿತ್ರಕ್ಕೆ ಪಹ್ಲಾಜ್ ನಿಹಲಾನಿ ನೇತೃತ್ವದ ಸೆನ್ಸಾರ್ ಮಂಡಳಿ 83 ಕತ್ತರಿ ಪ್ರಯೋಗ ಸೂಚಿಸಿದಾಗ ಇಡೀ ಚಿತ್ರರಂಗ ಮಾತ್ರವಲ್ಲದೆ ಕಾಂಗ್ರೆಸ್, ಆಪ್ ಸೇರಿದಂತೆ ವಿಪಕ್ಷಗಳೆಲ್ಲ ಸೆನ್ಸಾರ್ ಮಂಡಳಿ ಮತ್ತು ಕೇಂದ್ರ ಸರಕಾರದ ಮೇಲೆ ಮುಗಿಬಿದ್ದು ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎಂದು ಹುಯಿಲೆಬ್ಬಿಸಲಾಗಿತ್ತು. ಕೋರ್ಟ್ ಮೆಟ್ಟಿಲೇರಿದ ಈ ಚಿತ್ರ ಕಡೆಗೆ 13 ದೃಶ್ಯಗಳಿಗೆ ಕತ್ತರಿ ಹಾಕಿ ಬಿಡುಗಡೆಯಾಯಿತು. ಇದು ಪಂಜಾಬಿನ ವಿಧಾನಸಭೆ ಚುನಾವಣೆ ನಡೆಯುವುದಕ್ಕಿಂತ ಕೆಲವೇ ತಿಂಗಳು ಮೊದಲು ಆದ ಬೆಳವಣಿಗೆಗಳು.
ಉಡ್ತಾ ಪಂಜಾಬ್ ನೆಪವಾಗಿ ದೇಶಾದ್ಯಂತ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸೆನ್ಸಾರ್ ಮಂಡಳಿಯ ಅಗತ್ಯದ ಕುರಿತು ಭಾರೀ ಚರ್ಚೆಯಾಗಿ ಕೇಂದ್ರ ಸರಕಾರ ವ್ಯವಸ್ಥಿತವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ವಿಪಕ್ಷಗಳು ಮತ್ತು ತಥಾಕಥಿತ ಬುದ್ಧಿಜೀವಿಗಳು ತೀರ್ಪು ನೀಡಿದರು. ಇದೇ ವೇಳೆ ಈ ಜಮಾನದಲ್ಲಿ ಸಿನೆಮಾಗಳನ್ನು ಸೆನ್ಸಾರ್ ಮಾಡುವುದೇ ಒಂದು ಅಸಂಗತ ವಿಷಯ. ಏನು ನೋಡಬೇಕು ಮತ್ತು ಏನನ್ನು ನೋಡಬಾರದು ಎನ್ನುವುದನ್ನು ತೀರ್ಮಾನಿಸುವ ಪ್ರಬುದ್ಧತೆ ಜನರಿಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು.
ಇದೀಗ ಇನ್ನೊಂದು ಸಿನೆಮಾ ಇದೇ ಮಾದರಿಯ ವಿವಾದಕ್ಕೀಡಾಗಿದೆ. ಇದು 1975ರಿಂದ 1977ರ ತನಕ ದೇಶದಲ್ಲಿ ಜಾರಿಯಾಗಿದ್ದ ತುರ್ತು ಪರಿಸ್ಥಿತಿಯ ಕತೆಯನ್ನೊಳಗೊಂಡಿರುವ ಇಂದು ಸರ್ಕಾರ್ ಸಿನೆಮಾ. ಮಧುರ್ ಭಂಡಾರ್‌ಕರ್ ನಿರ್ದೇಶಿಸಿರುವ ಚಿತ್ರಕ್ಕೆ ಎಂದಿನಂತೆ ಸೆನ್ಸಾರ್ ಮಂಡಳಿ 13 ಕತ್ತರಿ ಪ್ರಯೋಗಗಳನ್ನು ಸೂಚಿಸಿದೆ. ಇದು ನಿರ್ದೇಶಕ ಮತ್ತು ಸೆನ್ಸಾರ್ ಮಂಡಳಿ ಬಗೆಹರಿಸಿಕೊಳ್ಳಬೇಕಾದ ವಿಷಯ. ಒಂದು ವೇಳೆ ಸೆನ್ಸಾರ್ ಮಂಡಳಿಯಲ್ಲಿ ಪರಿಹಾರ ಸಿಗದಿದ್ದರೆ ಮೇಲ್ಮನವಿ ಸಲ್ಲಿಸಲು ಪುನರ್ ಪರಿಶೀಲನಾ ಸಮಿತಿಯಿದೆ. ಆದರೆ ಇಂದು ಸರ್ಕಾರ್ ಸುದ್ದಿಯಾಗಿರುವುದು ಈ ವಿಚಾರಕ್ಕೆ ಅಲ್ಲ. ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಿಗೆ ಯಾವ ಕಾಂಗ್ರೆಸ್ ಪಕ್ಷ ಅಭಿವ್ಯಕ್ತಿ ಸ್ವಾತಂತ್ರ್ಯದ ವಕ್ತಾರನಂತೆ ಮಾತನಾಡಿತ್ತೋ ಅದೇ ಕಾಂಗ್ರೆಸ್ ಈ ಚಿತ್ರವನ್ನು ವಿರೋಧಿಸಲಾರಂಭಿಸಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಅವರ ಪುತ್ರ ಸಂಜಯ್ ಗಾಂಧಿ ಮುಖ್ಯ ಪಾತ್ರವಾಗಿರುವ ಚಿತ್ರದಲ್ಲಿ ನಮ್ಮ ನಾಯಕಿ ಮತ್ತು ಪಕ್ಷಕ್ಕೆ ಅಪಚಾರ ಎಸಗುವ ವಿಚಾರಗಳಿವೆ ಎಂದು ಕಾಂಗ್ರೆಸ್ ತಕರಾರು ಎಬ್ಬಿಸಿದೆ. ಶನಿವಾರ ಪುಣೆಯಲ್ಲಿ ಚಿತ್ರದ ಪ್ರಚಾರ ನಿಮಿತ್ತ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಕಾರ್ಯಕ್ರರ್ತರು ನುಗ್ಗಿ ದಾಂಧಲೆ ಎಸಗಿದ್ದಾರೆ. ಇದರಿಂದಾಗಿ ಪ್ರಚಾರ ಕಾರ್ಯಕ್ರಮ ಅರ್ಧಕ್ಕೆ ನಿಂತಿದೆ. ಇಷ್ಟು ಮಾತ್ರವಲ್ಲ ಇನ್ನೊಂದು ನಗರದಲ್ಲಿ ಇಂದು ನಡೆಯಬೇಕಾಗಿದ್ದ ಪ್ರಚಾರ ಕಾರ್ಯಕ್ರಮವನ್ನು ನಿರ್ದೇಶಕರು ಕಾಂಗ್ರೆಸ್ ಪ್ರತಿಭಟನೆಗೆ ಹೆದರಿ ರದ್ದು ಪಡಿಸಿದ್ದಾರೆ. ಇತ್ತೀಚೆಗೆ ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಕುರಿತ ಸಾಕ್ಷ್ಯಚಿತ್ರದಲ್ಲಿರುವ ಕೆಲವು ಶಬ್ದಗಳನ್ನು ಮ್ಯೂಟ್ ಮಾಡಲು ಸೆನ್ಸಾರ್ ಮಂಡಳಿ ಸೂಚಿಸಿದಾಗ ಅದನ್ನು ಮತ್ತು ಕೇಂದ್ರ ಸರಕಾರವನ್ನು ಹಿಗ್ಗಾಮುಗ್ಗಾ ಟೀಕಿಸಿದವರಿಗೆ ಇಂದು ಸರ್ಕಾರ್ ಕೂಡ ಇದೇ ರೀತಿಯ ಒಂದು ಸಿನೆಮಾ. ಉಡ್ತಾ ಪಂಜಾಬ್ ನಿರ್ದೇಶಕರಿಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಂದು ಸರ್ಕಾರ್ ನಿರ್ದೇಶಕರಿಗೂ ಇದೆ ಎನ್ನುವುದು ಗೊತ್ತಿಲ್ಲವೆ? ಅಥವಾ ಅವರ ವಿರೋಧ ಹಿತಾಸಕ್ತಿ ಕೇಂದ್ರಿತವೇ? ಸಾಹಿತ್ಯ ಸೇರಿದಂತೆ ಯಾವುದೇ ರೀತಿ ಕಲಾ ಅಭಿವ್ಯಕ್ತಿಯನ್ನು ರಾಜಕೀಯ ಕನ್ನಡಕ ಹಾಕಿಕೊಂಡು ನೋಡಿದರೆ ಇಂತಹ ವಿವಾದಗಳು ಸೃಷ್ಟಿ ಆಗುತ್ತಲೇ ಇರುತ್ತದೆ. ಕಲೆಯನ್ನು ಅದರ ಪಾಡಿಗೆ ಬಿಡುವುದೇ ಇದಕ್ಕಿರುವ ಪರಿಹಾರ.