ಶಿವಮೊಗ್ಗ: ಕೆಲ ದಿನಗಳ ಹಿಂದೆ ಚರ್ಚೆಗೆ ಕಾರಣವಾಗಿದ್ದ ಡಾ.ಧನಂಜಯ ಸರ್ಜಿ ಹೆಸರಲ್ಲಿ ಕಹಿ ಸ್ವೀಟ್ ಬಾಕ್ಸ್ ಕಳುಹಿಸಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಹಿ ತುಂಬಿ ಸ್ವೀಟ್ ಹಾಕಿ ಕಳುಹಿಸಿದ್ದ ಆರೋಪಿ ಸೌಹಾರ್ದ್ ಪಟೇಲ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮೂವರು ಗಣ್ಯರನ್ನು ಟಾರ್ಗೆಟ್ ಮಾಡಿ ಸ್ವೀಟ್ ಬಾಕ್ಸ್ ಕಳುಹಿಸಿದ್ದ ಎಂಬ ಮಾಹಿತಿ ಹೊರಬಿದ್ದಿದೆ.
ಎಲ್‌ಎಲ್‌ಬಿ ಮುಗಿಸಿ ಲಾಯರ್ ಆಗಿದ್ದ ಸೌಹಾರ್ದ ಪಟೇಲ್ ಎಂಬಾತನೇ ಆರೋಪಿ. ಈತ ಎನ್ಇಎಸ್ ಕಾರ್ಯದರ್ಶಿ ನಾಗರಾಜ್, ಮಾನಸಿಕ ವೈದ್ಯರಾದ ಡಾ. ಅರವಿಂದ್ ಮತ್ತು ಡಾ. ಕೆ ಎಸ್ ಪವಿತ್ರ ಎಂಬವರನ್ನು ಟಾರ್ಗೆಟ್ ಮಾಡಿ ಸರ್ಜಿ ಹೆಸರಿನಲ್ಲಿ ಸ್ವೀಟ್ ಬಾಕ್ಸ್ ಕಳುಹಿಸಿದ್ದ.
ಮಾನಸಿಕ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಸೌಹಾರ್ದ ಪಟೇಲ್ ಈ ಹಿಂದೆ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗೆ ಸೇರಿದ ಕಾನೂನು ಕಾಲೇಜಿನಲ್ಲಿ ಎಲ್ಎಲ್‌ಬಿ ಮುಗಿಸಿದ್ದ. ಸೌಹಾರ್ದ ಪಟೇಲ್ ಅಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದ ವೈದ್ಯರೊಬ್ಬರ ಮಗಳನ್ನು ಪ್ರೀತಿಸುತ್ತಿದ್ದ. ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಅವರು, ಪ್ರೀತಿಸುತ್ತಿದ್ದ ಯುವತಿಯನ್ನು ಸೌಹಾರ್ದ ಪಟೇಲ್‌ನಿಂದ ದೂರ ಮಾಡಿದ್ದರು. ನಂತರ ಖಿನ್ನತೆಗೆ ಒಳಗಾಗಿದ್ದ ಆರೋಪಿ ಸೌಹಾರ್ದ್ ಪಟೇಲ್ ಮಾನಸಿಕ ರೋಗ ತಜ್ಞರಾದ ಅರವಿಂದ್, ಕೆ.ಎಸ್.ಪವಿತ್ರ ಬಳಿ ಚಿಕಿತ್ಸೆ ಪಡೆದಿದ್ದ.
ಮಾನಸಿಕ ರೋಗಿಯಾಗಿದ್ದ ಹಿನ್ನೆಲೆ ಸೌಹಾರ್ದ ಪಟೇಲ್ ನನ್ನು ತೊರೆದು ಆತನ ತಂದೆ-ತಾಯಿ ಬೇರೆಡೆ ವಾಸಿಸುತ್ತಿದ್ದರು. ಮಾತ್ರೆಗಳ ಮೇಲೆ ಮಾತ್ರೆಗಳನ್ನು ಕೊಟ್ಟು ತನ್ನನ್ನು ರೋಗಿಯನ್ನಾಗಿಸಿದ್ದಾರೆ ಎಂದು ವೈದ್ಯರ ಮೇಲೆ ಸಿಟ್ಟಾಗಿದ್ದ. ಹೀಗಾಗಿ ಮಾತ್ರೆಗಳನ್ನು ಪುಡಿಮಾಡಿ ಸ್ವೀಟ್ ಬಾಕ್ಸ್ ನಲ್ಲಿ ಬೆರೆಸಿ ಸರ್ಜಿ ಹೆಸರಿನಲ್ಲಿ ಅವರಿಗೆ ಕಳುಹಿಸಿ ತಿನ್ನಿಸಲು ಪ್ಲಾನ್ ಮಾಡಿದ್ದ.
ಇದೀಗ ಆರೋಪಿ ಸೌಹಾರ್ದ ಪಟೇಲ್ ಕೋಟೆ ಪೊಲೀಸರ ವಶದಲ್ಲಿದ್ದಾನೆ.