Advertisement
“ಏನಾಗಿದೆ ಈ ಕಾಲಕ್ಕೆ?’ ಎಂದು ಬೇಸರಿಸುತ್ತಾ ಸುಮ್ಮನಾದರು ಲತಾ ಪುಟ್ಟಣ್ಣ. ಅವರೊಬ್ಬ ವಸ್ತ್ರ ವಿನ್ಯಾಸಕಿ. ಅದರಲ್ಲೂ ಅವರು ಸೀರೆ ಸ್ಪೆಷಲಿಸ್ಟ್. ಕಳೆದ 26 ವರ್ಷಗಳಿಂದ ಅವರು ಸೀರೆಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ. ಸೀರೆಗಳ ಮೂಲಕವೇ ಬದುಕಿನ ಬಗ್ಗೆ ವಿಶಿಷ್ಟ ನೋಟವನ್ನು ಕಂಡುಕೊಂಡವರವರು. ಅವರ ಬೇಸರ ಈಗಿನ ಕಾಲದ ಫ್ಯಾಷನ್ ಕುರಿತಾದ್ದು. ಅವರಿಗೆ ಹಳೆಯ ಕಾಲದ ಫ್ಯಾಷನ್ ಕುರಿತೇ ಒಲವು, ಪ್ರೀತಿ, ಆಸಕ್ತಿ ಎಲ್ಲವೂ. ಕೆಲ ಸಮಯದ ಹಿಂದಷ್ಟೇ ಅವರು “ಯಶೋಧಾ’ ಎಂಬ ಸೀರೆಗಳ ಸರಣಿಯನ್ನು ಬಿಡುಗಡೆಗೊಳಿಸಿದ್ದರು. ಈ ಸೀರೆಗಳಿಗೆ ಸ್ಫೂರ್ತಿಯಾಗಿದ್ದು ಅವರು ಬಾಲ್ಯದಲ್ಲಿ ನೋಡಿದ್ದ ಸಿನಿಮಾಗಳು. ಆಗಿನ ಕಾಲದಲ್ಲಿ ತಾವು ಗಮನಿಸಿದ್ದ ವರ್ಣ ಸಂಯೋಜನೆಯನ್ನೇ ಸೀರೆಗಳಿಗೂ ಹಚ್ಚಿದ್ದಾರೆ. ನೋಡುಗರನ್ನು ಇವು ಹಳೆಯ ಕಾಲಕ್ಕೇ ಕೈ ಹಿಡಿದು ಕರೆದುಕೊಂಡು ಹೋಗಬಲ್ಲವು.
ಬಟ್ಟೆ ಎನ್ನುವುದು ಮನುಷ್ಯನಿಗೆ ಕ್ಯಾರೆಕ್ಟರ್ ನೀಡುವ ವಸ್ತು. ಒಬ್ಬ ಮನುಷ್ಯನ ಕುರಿತು ಮೊದಲ ಇಂಪ್ರಷನ್ ಸೃಷ್ಟಿಯಾಗುವುದು ಬಟ್ಟೆಗಳಿಂದಲೇ. ಸರಿಯೋ ತಪ್ಪೋ, ಇಂದಿನ ಕಾಲದಲ್ಲಿ ಬಟ್ಟೆಗಳಿಂದಲೇ ನಮ್ಮ ಮನೋಧರ್ಮವನ್ನು ಅಳೆಯಲಾಗುತ್ತಿದೆ. ಹೀಗಿರುವಾಗ, ಸೇವಿಸುವ ಆಹಾರದ ಕುರಿತು ಎಷ್ಟು ಕಾಳಜಿ ತೋರಿಸುತ್ತೇವೋ ಅಷ್ಟೇ ಕಾಳಜಿಯನ್ನು ನಾವು ಬಟ್ಟೆಯ ಮೇಲೂ ತೋರಿಸಬೇಕಾದ ಅಗತ್ಯವಿದೆ. ಶತಮಾನಕ್ಕೂ ಹಳೆಯದಾದ ಮನೆಯಲ್ಲಿ ಸೀರೆ ತಯಾರಿ
ಲತಾ ಅವರು ಬೆಂಗಳೂರಿನ ಜಯನಗರದಲ್ಲಿರುವ ಅತ್ತೆ ಮನೆಯನ್ನೇ ಸೀರೆ ತಯಾರಿಕಾ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಅಂದಹಾಗೆ ಈ ಮನೆ ಸುಮಾರು 140 ವರ್ಷಗಳಷ್ಟು ಹಳೆಯದು. ಇಂದಿಗೂ ಮನೆಯನ್ನು ಆಧುನೀಕರಣದ ನೆಪದಲ್ಲಿ ಅಂದಗೆಡಿಸಿಲ್ಲ. ಹೇಗಿತ್ತೋ ಅದೇ ರೂಪದಲ್ಲಿ ಅಚ್ಚುಕಟ್ಟಾಗಿ ಇಟ್ಟುಕೊಂಡಿªದಾರೆ. ಅವರ ಸೀರೆಗಳಿಗೆ ನಾಸ್ಟಾಲ್ಜಿಕ್ ಫೀಲಿಂಗ್ ಬರುವುದಕ್ಕೆ ಅದೂ ಒಂದು ಕಾರಣವಿರಬಹುದು. ಅವರ ಸೀರೆಗಳು ನಾಸ್ಟಾಲ್ಜಿಕ್ ಎನ್ನಿಸುವುದಕ್ಕೆ ಇನ್ನೊಂದು ಕಾರಣವೆಂದರೆ ವರ್ಣ ಸಂಯೋಜನೆ ಮತ್ತು ಕೈಮಗ್ಗದಲ್ಲೇ ತಯಾರಾಗುವುದು. ಲತಾ ಅವರ ಸೀರೆ ತಯಾರಿಕಾ ಕೇಂದ್ರದಲ್ಲಿ ಒಟ್ಟು 50 ಮಂದಿ ಮಹಿಳಾ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ವಿನ್ಯಾಸ ಮತ್ತು ಬಟ್ಟೆಯ ಮಟೀರಿಯಲ್ ಆಯ್ಕೆಯನ್ನು ಲತಾ ಅವರು ಅಂತಿಮಗೊಳಿಸಿದ ಬಳಿಕ ಕೆಲಸಗಾರರು ಸೀರೆ ತಯಾರಿಯಲ್ಲಿ ತೊಡಗುವರು. ಏನೇ ಆದರೂ ಸೀರೆಗಳನ್ನು ಮಾಸ್ ಪ್ರೊಡಕ್ಷನ್ ಮಾಡುವುದಿಲ್ಲ ಎನ್ನುತ್ತಾರೆ ಲತಾ. ಯಂತ್ರದ ಥರ ಒಂದೇ ಸಮನೆ ಉತ್ಪಾದನೆಯಲ್ಲಿ ತೊಡಗಿದರೆ ಸೀರೆಗಳೊಂದಿಗಿನ ಭಾವನಾತ್ಮಕ ಸಂಬಂಧವನ್ನು ಕಡಿದುಕೊಳ್ಳಬಹುದು ಎಂಬುದು ಅವರ ಭಯ. ಹೀಗಾಗಿ ಆರ್ಡರ್ ತೆಗೆದುಕೊಂಡ ಬಳಿಕವೇ ಫ್ರೆಶ್ ಆಗಿ ಸೀರೆಯನ್ನು ತಯಾರಿಸಿ ಗ್ರಾಹಕರಿಗೆ ಒದಗಿಸುತ್ತಾರವರು.
Related Articles
ಲತಾ ಅವರು ತಮ್ಮ “ಯಶೋಧಾ’ ಸೀರೆ ಸಂಗ್ರಹಕ್ಕೆ ಕಪ್ಪು ಬಿಳುಪು ಜಮಾನಾದ ನಟಿಯರನ್ನು ಪ್ರೇರಣೆಯಾಗಿ ಸ್ವೀಕರಿಸಿದ್ದಕ್ಕೂ ಕಾರಣವಿದೆ. ಇಂದು ಸ್ಟೈಲಿಸ್ಟ್ ಇಲ್ಲದೆ ನಟಿಯರು ಕ್ಯಾರಾವಾನ್‌ನಿಂದ ಕೆಳಕ್ಕಿಳಿಯುವುದೇ ಇಲ್ಲ. ಆದರೆ ಅಂದಿನ ಕಾಲದಲ್ಲಿ ನಾಯಕಿಗೆಂದೇ ಪ್ರತ್ಯೇಕ ಸ್ಟೈಲಿಸ್ಟ್ ಇರುತ್ತಿರಲಿಲ್ಲ. ಹೀಗಾಗಿ ಸೆಟ್‌ನಲ್ಲಿ ಉಡಬೇಕಾದ ಬಟ್ಟೆಗಳನ್ನು ನಾಯಕಿಯರೇ ಆರಿಸಿ ತಂದಿಟ್ಟುಕೊಳ್ಳುತ್ತಿದ್ದರು. ಸಂದರ್ಶನವೊಂದರಲ್ಲಿ ನಟ ಅಮಿತಾಭ್ ಬಚ್ಚನ್ ಹೇಳಿದ್ದು ಈ ಸಂದರ್ಭಕ್ಕೆ ಹೆಚ್ಚು ಸೂಕ್ತ ಎನ್ನಿಸುತ್ತದೆ. “70, 80ರ ದಶಕದ ನನ್ನ ಸಿನಿಮಾಗಳನ್ನು ಗಮನಿಸಿ. ಅವುಗಳಲ್ಲಿ ತೆರೆ ಮೇಲೆ ನಾನು ಧರಿಸಿರುವ ಬಟ್ಟೆಗಳೆಲ್ಲವೂ ನನ್ನವೇ. ಅವೆಲ್ಲಾ, ಸಿನಿಮಾಗಳಲ್ಲಿ ಚೆನ್ನಾಗಿ ಕಾಣಬೇಕೆಂದು ನಾನೇ ಶ್ರದ್ಧೆಯಿಂದ ಆರಿಸಿತಂದಂಥವು.’ ಎಂದಿದ್ದರವರು. ಅನೇಕ ಕಾರಣಗಳಿಂದ ನಾಯಕಿಯರ ಅದ್ಭುತ ಸ್ಕ್ರೀನ್ ಪ್ರಸೆನ್ಸ್ ಹಿಂದೆ ಅವರದೇ ಕೈಚಳಕವಿರುತ್ತಿತ್ತು. ಹೀಗಾಗಿ ಹಳೆಯ ಕಾಲದ ದಕ್ಷಿಣಭಾರತೀಯ ನಟಿಯರನ್ನೇ ಲತಾ ಅವರು ರೋಲ್ ಮಾಡೆಲ್ಲಾಗಿ ಆರಿಸಿಕೊಂಡಿದ್ದರಲ್ಲಿ ಅತಿಶಯೋಕ್ತಿಯಿಲ್ಲ.
Advertisement
ಹಿಂದೆಲ್ಲಾ ಒಂದು ಬಟ್ಟೆ ತಗೊಂಡರೆ ಜನರು ಅದರೊಂದಿಗೆ ಭಾವನಾತ್ಮಕ ಸೆಳೆತ ಬೆಳೆಸಿಕೊಳ್ಳುತ್ತಿದ್ದರು. ಅದನ್ನು ಕಡಿಮೆಯೆಂದರೂ ನಾಲ್ಕೈದು ವರ್ಷಗಳ ಕಾಲ ಧರಿಸುತ್ತಿದ್ದರು. ಅಂದರೆ ಅಷ್ಟು ಸಮಯದ ನಂತರವೂ ಅವು ಬಾಳಿಕೆ ಬರುತ್ತಿದ್ದವು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಆಗಿನ ಬಟ್ಟೆಗಳ ವೈಶಿಷ್ಟéವೆಂದರೆ ಪ್ರತಿ ಒಗೆತದ ನಂತರ ಅವು ಇನ್ನಷ್ಟು ರಂಗನ್ನು ಪಡೆದುಕೊಳ್ಳುತ್ತಿದ್ದವು, ಮತ್ತಷ್ಟು ಹೊಸತಾಗಿ ಕಾಣುತ್ತಿದ್ದವು. ಆದರೀಗ ಬಟ್ಟೆಗಳ ವಿಚಾರದಲ್ಲಿ “ಯೂಸ್ & ಥ್ರೋ’ ಮನೋಭಾವ ಜನರಲ್ಲಿ ಬೇರೂರುತ್ತಿದೆ. ಅಂದಿನ ಗುಣಮಟ್ಟವೂ ಈಗಿಲ್ಲ.– ಲತಾ ಪುಟ್ಟಣ್ಣ, ವಸ್ತ್ರ ವಿನ್ಯಾಸಕಿ ಎಲ್ಲಿ?: ಲತಾ ಪುಟ್ಟಣ್ಣ ಸ್ಟೋರ್, ನಂ. 102, 2ನೇ ಕ್ರಾಸ್
ಲಾಲ್‌ಬಾಗ್, ಸಿದ್ದಾಪುರ 1ನೇ ಹಂತ, ಜಯನಗರ