ರಾಜ್ ಕೋಟ್: ಹಲವು ವರ್ಷಗಳ ಕಾಯುವಿಕೆಯ ಬಳಿಕ ಕೊನೆಗೂ ಮುಂಬೈನ ಆಟಗಾರ ಸರ್ಫರಾಜ್ ಖಾನ್ ಅವರಿಗೆ ಟೆಸ್ಟ್ ಕ್ಯಾಪ್ ಸಿಕ್ಕಿದೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸರ್ಪರಾಜ್ ಖಾನ್ ಪದಾರ್ಪಣೆ ಮಾಡಿದ್ದಾರೆ.
ರಾಜ್ ಕೋಟ್ ನಲ್ಲಿ ಪಂದ್ಯಕ್ಕೂ ಮುನ್ನ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಸರ್ಫರಾಜ್ ಖಾನ್ ಅವರಿಗೆ ಟೆಸ್ಟ್ ಕ್ಯಾಪ್ ನೀಡಿದರು.
ಸರ್ಫರಾಜ್ ತಂದೆ ನೌಶಾದ್ ಖಾನ್ ಅವರು ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದು, ಮಗನ ಈ ಐತಿಹಾಸಿಕ ಸನ್ನಿವೇಶವನ್ನು ಕಣ್ತುಂಬಿಕೊಂಡರು. ಇದೇ ವೇಳೆ ಭಾವುಕರಾದ ನೌಶಾದ್ ಖಾನ್ ಮಗನಿಗಾಗಿ ಸಂತಸ ವ್ಯಕ್ತಪಡಿಸಿದರು. ಕಣ್ಣೀರು ಹರಿಸುತ್ತಲೇ ಮಗನನ್ನು ಅಪ್ಪಿಕೊಂಡರು.
ಇದೇ ವೇಳೆ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಕೂಡಾ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಜುರೆಲ್ ಗೆ ದಿನೇಶ್ ಕಾರ್ತಿಕ್ ಅವರು ಟೆಸ್ಟ್ ಕ್ಯಾಪ್ ನೀಡಿ ಹಾರೈಸಿದರು.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದೆ. ಮೊದಲ ಸೆಶನ್ ಅಂತ್ಯಕ್ಕೆ ಭಾರತ ತಂಡವು ಮೂರು ವಿಕೆಟ್ ಕಳೆದುಕೊಂಡು 93 ರನ್ ಗಳಿಸಿದೆ. 52 ರನ್ ಗಳಿಸಿರುವ ನಾಯಕ ರೋಹಿತ್ ಶರ್ಮಾ ಮತ್ತು 24 ರನ್ ಗಳಿಸಿರುವ ರವೀಂದ್ರ ಜಡೇಜಾ ಆಡುತ್ತಿದ್ದಾರೆ.