Advertisement

UV Fusion: ಸಾಮರಸ್ಯದ ಸೀರೆ; ನೇಯುವ ಏಕತೆಯ ನೂಲಿಂದ

03:57 PM Nov 06, 2023 | Team Udayavani |

ಭೂಮಿಯ ಹೃದಯ ಭಾಗದಲ್ಲೊಂದಿತ್ತು ವೈವಿಧ್ಯಮಯ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದ ನೆಲ. ಆ ನೆಲದ ಒಡತಿ ಸಪ್ತವರ್ಣೆ, ಎಲ್ಲರನ್ನೂ ಸಹ ತನ್ನ ಸೆರಗೊಳಗೆ ಹೊದ್ದುªಕೊಂಡು ಸಲಹುವ ಮಹಾತಾಯಿ ಆಕೆ, ಇಂತಹ ಮಹಾತಾಯಿಗೆ ವಿವಿಧ ವರ್ಣಗಳ ಏಳು ಮಕ್ಕಳು ಇದ್ದರು. ಒಂದೊಂದು ಮಗುವಿಗೊಂದು ಧಾರ್ಮಿಕ ನಂಬಿಕೆ, ವಿವಿಧ ಬಗೆಯ ಪೂಜಾ ವಿಧಾನ, ಏಕ ಅನೇಕ ದೇವರು, ಆದರೂ ಎಲ್ಲರ ಬೇರು ಒಂದೇ ಆಗಿತ್ತು.

Advertisement

ಕಾಲ ಕಳೆದಂತೆ, ಬುದ್ಧಿ ಬೆಳೆದಂತೆ, ಒಬ್ಬರೊಬ್ಬರ ನಡುವೆ ಅಪಶ್ರುತಿ ಹುಟ್ಟಿಕೊಳ್ಳಲು ಪ್ರಾರಂಭಿಸಿತು. ಪ್ರತಿಯೊಂದು ಮಗು ತನ್ನ ಪ್ರಾಬಲ್ಯ, ತನ್ನದೇ ಶ್ರೇಷ್ಠವೆಂಬುದನ್ನು ಪ್ರತಿಪಾದಿಸಲು ಶುರು ಮಾಡಿಕೊಂಡವು. ತನ್ನ ಧಾರ್ಮಿಕತೆಯನ್ನು ಮತ್ತೂಬ್ಬರ ಮೇಲೆ ಹೇರಲು ಪ್ರಯತ್ನಿಸಿದವು, ಈ ಪ್ರಕ್ರಿಯೆಯಲ್ಲಿ ನೊಂದವಳು ಮಾತ್ರ ಸಪ್ತವರ್ಣೆ.

ತಾಯಿಯ ಹಿರಿ ಮಗ ಕೇಸರಿಗೆ ತನ್ನ ನಂಬಿಕೆಗಳೇ ಶ್ರೇಷ್ಠ ಎನ್ನುವ ಭಾವ ಅವನಲ್ಲಿ ಗಾಢವಾಗಿ ಮೂಡಿತ್ತು. ಅದೇ ರೀತಿ ಎರಡನೇ ಮಗು ಹಸುರು ಸಹ ತನ್ನದೇ ಶ್ರೇಷ್ಠ ಮಿಕ್ಕೆಲ್ಲವೂ ಕನಿಷ್ಠವೆಂದು ಪ್ರತಿಪಾದಿಸುತ್ತಲೇಇತ್ತು. ಮಿಕ್ಕ ಮಕ್ಕಳಾದ ನೀಲಿ, ಹಳದಿ, ಕೆಂಪು, ನೇರಳೆ, ಇಂಡಿಗೋ ಬಣ್ಣಗಳು ತಮ್ಮ ತಮ್ಮ ನಂಬಿಕೆಗಳನ್ನು ತನ್ನ ಒಡಹುಟ್ಟಿದವರ ಮೇಲೆ ಹೇರಲು ಪ್ರಯತ್ನಿಸುತ್ತಲೇ ಇದ್ದವು. ಈ ಸತತ ಕಿತ್ತಾಟಗಳಿಂದ ಕುಟುಂಬದೊಳಗೊಂದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹೀಗೆ ಒಬ್ಬರ ನಡುವೆ ಅಸಮಾಧಾನ ಮುಂದುವರಿಯುತ್ತಲೇ ಇತ್ತು. ಆಗಸ್ಟ್‌ 15 ತಾಯಿಯ ಹುಟ್ಟಿದಬ್ಬವನ್ನು ಆಚರಿಸಲು ಮಕ್ಕಳೆಲ್ಲರೂ ನಿರ್ಧರಿಸಿದ್ದರು. ತಾಯಿಯ ಹುಟ್ಟು ಹಬ್ಬದಂದು ಎಲ್ಲ ಏಳೂ ಮಕ್ಕಳು ಏಳು ವಿವಿಧ ಬಣ್ಣದ ಸೀರೆಯನ್ನು ಉಡುಗೊರೆಯಾಗಿ ತಂದಿದ್ದರು. ತಾವು ತಂದ ಸೀರೆಯನ್ನೇ ತೊಡಬೇಕೆಂದು ತಮ್ಮ ತಾಯಿಗೆ ಒಬ್ಬೊಬ್ಬರೇ ಒತ್ತಾಯಿಸ ತೊಡಗಿದರು. ಒತ್ತಾಯಿಸುವ ಭರದಲ್ಲಿ, ಎಲ್ಲರ ಮಧ್ಯೆ ದೊಡ್ಡ ಜಗಳವೇ ಶುರುವಾಯಿತು.

ತಮ್ಮ ತಮ್ಮ ಗೊಂದಲ ಮತ್ತು ಹತಾಶಗಳನ್ನು ಪರಸ್ಪರ ವ್ಯಕ್ತಪಡಿಸಿಕೊಂಡರು ತಮ್ಮದೇ ಆದ ನಿಲುವುಗಳನ್ನು ಹೇರುವ ಅವರ ಪ್ರಯತ್ನಗಳು ದೊಡ್ಡಮಟ್ಟದಲ್ಲಿ ನಡೆದವು. ಇದನ್ನೆಲ್ಲಾ ಗಮನಿಸಿದ ತಾಯಿ, ತಂದ ಸೀರೆಗಳನ್ನು ಧರಿಸಲು ಕೋಣೆಗೆ ಹೋದಳು. ಕೋಣೆಯಿಂದ ಹೊರಬಂದ ತಾಯಿಯನ್ನು ಕಂಡಾಗ ಎಲ್ಲ ಮಕ್ಕಳಿಗೊಂದು ಅಚ್ಚರಿಯೊಂದು ಕಾದಿತ್ತು, ತಾವು ಕೊಟ್ಟ ಸೀರೆಗಳನ್ನು ತೊಡದೆ, ವಿವಿಧತೆ ಭಿನ್ನತೆ ಇತ್ಯಾದಿ ನೂಲುಗಳಿಗೆ ಏಕತೆಎನ್ನುವ ಸೂಜಿಯಿಂದ ಪೋಣಿಸಿ ಅದ್ಭುತವಾದ ಬಿಳಿಯ ಸೀರೆ ನೇಯ್ದು, ಸಪ್ತವರ್ಣೆ ಶ್ವೇತವರ್ಣೆ ಆಗಿ ಕಂಗೊಳಿಸುತ್ತಿದ್ದಳು. ಶಾಂತಿ ಮತ್ತು ಸಾಮರಸ್ಯದ ಸಹಕಾರ ಮೂರ್ತಿಯಂತೆ ಕಾಣುತ್ತಿದ್ದಳು.

Advertisement

ಎಲ್ಲ ಭಿನ್ನತೆಗಳನ್ನು ತೊರೆದು ಸಪ್ತವರ್ಣೆ ಕಾಮನಬಿಲ್ಲಿನಂತೆ ಹೊಳೆಯುತ್ತಿದ್ದಳು. ಕಾಮನ ಬಿಲ್ಲಿನ ಬಣ್ಣಗಳು ಬಿಳಿಯ ಬೆಳಕನ್ನು ರೂಪಿಸುವಂತೆ ವೈವಿಧ್ಯತೆಯ ಅಂತಿಮ ರೂಪ ಏಕತೆಯೆಂದು ವಿವರಿಸಿದಳು. ಎಲ್ಲ ಮಕ್ಕಳಿಗೂ ತಮ್ಮ ತಮ್ಮ ಸಿದ್ಧಾಂತ, ನಂಬಿಕೆಗಳನ್ನು ಹೇರುವ ವಿವಿಧ ಪ್ರಯತ್ನಗಳ ಅಂತಿಮ ಫಲವೇ ಅಸಹಿಷ್ಣತೆ ಮತ್ತು ಇಂತಹ ಅಸಹಿಷ್ಣತೆಯಿಂದ ಸಾಮರಸ್ಯ ಅಸಾಧ್ಯವೆಂದು ಉಚ್ಚರಿಸಿದಳು.

ತಮ್ಮ ತಾಯಿಯ ಮಾತುಗಳಿಂದ ತಮ್ಮ ತಮ್ಮ ತಪ್ಪುಗಳ ಅರಿವಾಗಿ, ಏಕತೆಯ ತಣ್ತೀದಿಂದ ಪ್ರೇರಿತರಾದ ಮಕ್ಕಳು, ತಮ್ಮ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಟ್ಟಿಗೆ ಕೈಜೋಡಿಸಿ ಕೆಲಸ ಮಾಡಲು ನಿರ್ಧರಿಸಿದರು. ಅವರು ತಮ್ಮ ತಮ್ಮ ವೈವಿಧ್ಯತೆಯಲ್ಲಿ ಬಲವನ್ನು ಕಂಡುಕೊಂಡರು. ಸಪ್ತವರ್ಣೆ ಮೊದಲಿನಂತೆ ಏಕತೆಯ ಕಾಮನಬಿಲ್ಲನ್ನು ಹೊದ್ದು ಪ್ರಕಾಶಮಾನವಾಗಿ ಬೆಳಗಲು ಪ್ರಾರಂಭಿಸಿದಳು. ವೈವಿಧ್ಯತೆಯ ಅಂತಿಮವೇ ಏಕತೆಯೆಂದು ತಿಳಿದು ಎಲ್ಲರೂ ಒಟ್ಟಾಗಿ ಸಂತಸ, ಶಾಂತಿಯಿಂದ ತಮ್ಮ ನೆಲದ ಗರಿಮೆಯನ್ನು ವಿಶ್ವಕ್ಕೆ ಸಾರಿದರು, ವಿಶ್ವಗುರುವಾದರು.

-ಶಂಕರ್‌ ಇಟಗಿ

ಮುದ್ದೇಬಿಹಾಳ

Advertisement

Udayavani is now on Telegram. Click here to join our channel and stay updated with the latest news.

Next