Advertisement
ಮನುಷ್ಯನಿಗೆ ಜಗತ್ತಿನಲ್ಲಿ ಅತಿದೊಡ್ಡ ಸಮಸ್ಯೆಯೆಂದರೆ ಆಯ್ಕೆ. ಕವಲು ದಾರಿಗಳನ್ನು ಸೃಷ್ಟಿಸಿ ನಮಗೆ ಗೊಂದಲ ಹುಟ್ಟಿಸಿ ಸೋಲು-ಗೆಲುವು, ಸಂತಸ-ದುಃಖದ ಫಲಿತಾಂಶಗಳನ್ನು ಹುಟ್ಟಿಸುವುದೇ ಆಯ್ಕೆ. ಆಯ್ಕೆಯ ಗೊಂದಲಗಳ ಪ್ರತ್ಯಕ್ಷದರ್ಶನವಾಗಿಸುವುದು ಬಟ್ಟೆಯಂಗಡಿ. ಬಟ್ಟೆಯಂಗಡಿ ದ್ವಂದ್ವದ ಪರಾಕಾಷ್ಠೆಗೆ ಒಯ್ದು ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಸಮದೂರ-ಸುಮಧುರ ದಾಂಪತ್ಯ ಪರೀಕ್ಷೆಗೆ ಬಟ್ಟೆಯಂಗಡಿಯೇ ಸ್ಪರ್ಧಾಕಣ. ಎಂತಹ ಹೊಂದಾಣಿಕೆಯ ದಂಪತಿಗಳಿಗೂ ಇಲ್ಲಿ ಚರ್ಚೆ ನಡೆದೇ ನಡೆಯುತ್ತದೆ. ಗಂಡನ ರುಚಿ ವೈವಿಧ್ಯಗಳ ಕುರಿತು ಹೆಂಡತಿಗೆ ಸಂಶಯ ಬರುವುದು ಇಲ್ಲಿಯೇ. ಹಾಗೆಯೇ ಹೆಂಡತಿ ಆಯ್ಕೆ ಮಾಡಿದ ಬಟ್ಟೆ ಗಂಡನಿಗೆ ಇಷ್ಟವಾಗುವುದೇ ಇಲ್ಲ. ಆತನ ಕಣ್ಣುರಿಗೆ ಆತ ಕೊಡುವ ದುಡ್ಡು ಕಾರಣವಿರಬಹುದೇನೊ?
Related Articles
Advertisement
ಇಷ್ಟಪಟ್ಟು ಖರೀದಿಸಿದ ಸೀರೆ ಧರಿಸಿ ಕನ್ನಡಿಯ ಎದುರು ಮಾರ್ಜಾಲ ನಡಿಗೆಯಲ್ಲಿ ಸಿಂಹಾವಲೋಕನ ಮಾಡುತ್ತ ಒಮ್ಮೆ ಹೆಗಲ ಮೇಲೆ ಬಾರ್ಡರ್ ಬರುವಂತೆ, ಇನ್ನೊಮ್ಮೆ ನೆರಿಗೆ ಬದಿಗೆ ಸರಿಸುವಂತೆ, ಮಗದೊಮ್ಮೆ ಸಿಂಗಲ್ ಸೆರಗು ಹಿಡಿದು, ಮತ್ತೂಮ್ಮೆ ಸೆರಗು ಪೋಣಿಸಿ ಪಿನ್ ಮಾಡಿಕೊಂಡಂತೆ ಅರುವತ್ತು, ತೊಂಬತ್ತು, ನೂರೆಂಬತ್ತು, ಮುನ್ನೂರರುವತ್ತು ಕೋನದಲ್ಲಿ ನಿಂತು ಪರೀಕ್ಷಿಸಿಯೂ ಕೆಲವೊಮ್ಮೆ ಅಸಮಾಧಾನ ಉಳಿಯುತ್ತದೆ. ಸೀರೆಯ ಬಣ್ಣ ಟೊಮ್ಯಾಟೋ ರೆಡ್ ಬದಲಿಗೆ ನೀರುಳ್ಳಿ ಪಿಂಕ್ ಆಗಿದ್ದರೆ, ಅಂಚು ಮಾವಿನಹಣ್ಣು ಡಿಸೈನ್ ಬದಲಿಗೆ ಸೇಬಿನ ಹಣ್ಣು ಆಗಿದಿದ್ದರೆ, ಸೆರಗಿನಲ್ಲಿ ಗರಿ ಬಿಚ್ಚಿದ ನವಿಲಿನ ಡಿಸೈನ್ ಬದಲಿಗೆ ಗರಿ ಮುಚ್ಚಿದ ನವಿಲು ಇರಬಾರದಿತ್ತೆ ಎಂದು ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿಯುತ್ತ ಕಲ್ಪಿಸಿಕೊಳ್ಳುತ್ತ ನೊಂದುಕೊಳ್ಳುತ್ತ ಖರೀದಿಯ ಖುಷಿಯನ್ನು ಕಳೆದುಕೊಳ್ಳುತ್ತೇವೆ. ಬಾಲ್ಯದಲ್ಲಿ ಮುಗ್ಧತೆಯ ಆವರಣದೊಳಗೆ ಹೊಸವಸ್ತ್ರ ನೀಡುತ್ತಿದ್ದ ಸಂಭ್ರಮ ಆಯ್ಕೆಗಳ ಸಾಧ್ಯತೆಗಳು, ಅರಿವು ಹೆಚ್ಚಾದಂತೆ ಕಡಿಮೆಯಾಗಿದೆ. ಬಾಲ್ಯದಲ್ಲಿ ಹೊಸ ವಸ್ತ್ರ ಧರಿಸಿದಾಗ ಮತ್ತೆ ಬಿಚ್ಚುವುದಕ್ಕೆ ಕೇಳುತ್ತಿರಲಿಲ್ಲ. ಧೂಳು-ಕೂಳು, ಕೆಸರು-ಮೊಸರು, ಮಳೆ-ಗಾಳಿ, ಕಸ-ಕಲೆ ಯಾವುದರ ಬಗ್ಗೆಯೂ ತಲೆಕಡಿಸಿಕೊಳ್ಳುತ್ತಿರಲಿಲ್ಲ. ಈಗ ಧರಿಸಿದ ಹೊಸ ಬಟ್ಟೆ ಅದಷ್ಟು ಬೇಗ ಬಿಚ್ಚಿ ಇಡುವುದಕ್ಕೆ, ಮಡಚಿ ಇಡುವುದಕ್ಕೆ, ತುಸು ಹಾನಿಯಾಗದಂತೆ ಒಪ್ಪವಾಗಿಡುವುದಕ್ಕೆ ಹೆಣಗುತ್ತೇವೆ. ಈಗ ಎಲ್ಲವೂ ಲೆಕ್ಕಾಚಾರದ ಬದುಕು.
ಎಂಥ ಸ್ಥಿರ ಮನಸ್ಸನ್ನು ಕೂಡಾ ತಟಪಟ ಮಾಡಬಲ್ಲ ಚಾಣಾಕ್ಷ ಸೇಲ್ಸ್ ಮ್ಯಾನ್‌ಗಳ ಮಾತಿನ ಮೋಡಿಯೋ, ಸೀರೆಗಳನ್ನು ನಮ್ಮ ಮುಂದೆ ಹರಡಿ ರೀಸೆಂಟ್ ಟ್ರೆಂಡ್, ನ್ಯೂ ಡಿಸೈನ್, ಗ್ರ್ಯಾಂಡ್ ಲುಕ್, ಪಾಸ್ಟ್ ಮೂವಿಂಗ್, ವಾಶ್ ಇಝಿ, ಲೈಟ್‌ವೈಟ್, ಪ್ರೀಟಿ ಕಲರ್, ಗ್ರೇಟ್ ಟೆಕ್ಚರ್, ಸಿಂಗಲ್ ಫೀಸ್, ರ್ಯಾರ್ ಕಲೆಕ್ಷನ್, ವೆರಿ ಸಾಫ್ಟ್ , ನೈಸ್ ಬಾರ್ಡರ್, ಸೂಪರ್ ಮಾಡೆಲ್, ರಿಚ್c ಪಲ್ಲು, ಬೆಸ್ಟ್ ಕ್ವಾಲಿಟಿ ಎಂದು ವರ್ಣಿಸುವ ಭರಾಟೆಗೆ ಆತ ನೀಲ ಸಾಗರದಲ್ಲಿ ಅಲ್ಲಲ್ಲಿ ಅರಳಿದ ಕೆಂದಾವರೆಗಳು, ಕಮ್ಯೂನಿಸ್ಟ್ ಗಿಡದ ಮೇಲೆ ಝೇಂಕರಿಸುವ ದುಂಬಿಗಳು ಎಂದು ವರ್ಣಿಸಿದರೂ ನಮ್ಮ ಕಿವಿಯನ್ನು ಅವನಿಡುವ ದಾಸವಾಳಕ್ಕೆ ಅಡವಿರಿಸಿಕೊಳ್ಳುತ್ತೇವೆಯೇನೋ?
ವಸ್ತ್ರ ಖರೀದಿಯ ಕುರಿತಂತೆ ಹೆಣ್ಮಕ್ಕಳನ್ನು ಸದಾ ಹೀಯಾಳಿಕೆಯಿಂದ, ಕಾಣುವುದು ಸಾಮಾನ್ಯ. ಹೆಣ್ಮಕ್ಕಳು ವಸ್ತ್ರ ಖರೀದಿಯಲ್ಲಿ ಹೆಚ್ಚು ಸಮಯ ವ್ಯಯಿಸುತ್ತಾರೆ ಎನ್ನುವುದು ಜಾಗತಿಕ ಸತ್ಯ, ಸಾರ್ವಕಾಲಿಕ ಸತ್ಯ ಎಂಬಂತೆ ಬಿಂಬಿತವಾಗಿದೆ. ಆಕೆಯ ವ್ಯಕ್ತಿತ್ವವನ್ನು ಹೀಗಳೆಯುವುದಕ್ಕೆ ಇನ್ನಿಲ್ಲದಂತೆ ಗಾದೆಗಳು, ಪಡೆನುಡಿಗಳು ಸೃಷ್ಟಿಯಾಗುತ್ತವೆ. “ಎಮ್ಮೆ ನೀರಿಗೆ ಬಿದ್ರೆ ಮೇಲೆ ಬರಲ್ಲ, ಹೆಣ್ಮಕ್ಕಳು ಸೀರೆ ಅಂಗಡಿಗೆ ಹೋದ್ರೆ ಹೊರಗೆ ಬರಲ್ಲ ಮತ್ತು ಗಂಡಸು ಬಾರ್‌ನಿಂದಾದರೂ ಬೇಗ ಹೊರಗೆ ಬರಬಹುದು, ಹೆಂಗಸು ಸೀರೆ ಅಂಗಡಿಯಿಂದ ಬೇಗ ಹೊರಗೆ ಬರಲಾರಳು’ ಎಂಬ ಮಾತುಗಳು ಅತ್ಯಂತ ಹಗುರವಾಗಿ ಹೆಣ್ಮಕ್ಕಳನ್ನೂ ಅಳೆಯುವ ಮಾನದಂಡಗಳಾಗಿವೆ. ಹೌದೇ? ಹೆಂಗಸರು ಬಟ್ಟೆಯಂಗಡಿಯಲ್ಲಿ ಸೀರೆ ಖರೀದಿಗೆ ಬಹಳ ಹೊತ್ತು ತೆಗೆದುಕೊಳ್ತಾರೆಯೇ? ಹೌದೆಂದಾದರೆ, ಯಾಕೆ? ಬದುಕಿನಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಅವರಿಗೆ ಅವಕಾಶ ದೊರೆಯದೇ ಇದ್ದಾಗ, ಇಲ್ಲೊಂದಿಷ್ಟು ಆಯ್ಕೆಗೆ ತುಸು ಸ್ಪೇಸ್ ಹುಡುಕಿಕೊಳ್ಳುವುದು ತಪ್ಪಾಗುತ್ತದೆಯೇ? ಮನಸ್ಸಿನ ಬಣ್ಣಗಳನ್ನು ಸೀರೆಗಳಲ್ಲಿ ಹುಡುಕುವ, ಬದುಕಿನ ಖಾಲಿತನಗಳನ್ನು ಸೀರೆಯ ಅಂಚುಗಳಲ್ಲಿ ಕಾಣುವ ಹೆಣ್ಣಿನ ಮನಸ್ಸು ಸೀರೆಯ ಸೆರಗಿನಲ್ಲಿ ಹೇಳಿದ ಕತೆಗಳನ್ನು- ಹೇಳದ ಪ್ರಾರ್ಥನೆಗಳನ್ನು ನೇಯ್ದಿರಬಹುದು. ಸೀರೆಯ ನೆರಿಗೆಗಳಲ್ಲಿ ನಿರೀಕ್ಷೆಯ ಜಲಪಾತಗಳಿದ್ದರೆ, ಸೀರೆಯ ಒಡಲಿನಲ್ಲಿ ಆತ್ಮದ ಪಸೆ ಇರಬಹುದು. ಸೀರೆಯ ನವಿರುತನದಲ್ಲಿ ಮುರಿದುಬಿದ್ದ ಪಾರಿಜಾತದ ಘಮಲಿನ ನೆನಪಿರಬಹುದು. ಹಾಗಾಗಿ, ಬಟ್ಟೆಯಂಗಡಿಯ ಬಣ್ಣಗಳಲ್ಲಿ ಹೆಣ್ಣಿನ ಮನಸ್ಸು ಒಳಗೊಳಗೆ ಹಾಡು ಕಟ್ಟಿಕೊಂಡು ಕುಣಿಯುವುದು, ಕಣ್ಣಂಚಿನಲ್ಲಿ ತೇವಗೊಂಡು ಹಗುರವಾಗುವುದು ವ್ಯಂಗ್ಯದ, ಅವಮಾನಿಸುವ ವಸ್ತುವಾಗಬೇಕಾಗಿಲ್ಲ, ಅಲ್ಲವೇ?
ಸುಧಾರಾಣಿ