ದೊಡ್ಡಬಳ್ಳಾಪುರ: ಕೋವಿಡ್-19 ಲಾಕ್‌ಡೌನ್ ನಡುವೆ ಸಂಕಷ್ಟಕ್ಕೆ ತುತ್ತಾಗಿದ್ದ ನೇಕಾರರ ಸೀರೆ ಗಳನ್ನು ಸರ್ಕಾರ ಖರೀದಿಗೆ ಮುಂದಾಗಿರುವುದು ಸಮುದಾಯದಲ್ಲಿ ಆಶಾಭಾವನೆ ಮೂಡಿಸಿದೆ.
ಸ್ತಬ್ಧಗೊಂಡ ನೇಕಾರಿಕೆ: ನೇಕಾರಿಕೆಗೆ ಕಚ್ಚಾ ಸಾಮಗ್ರಿಗಳ ಕೊರತೆಯಿದ್ದು, ಬೆಲೆಗಳೂ ಏರಿಕೆಯಾಗಿವೆ. 2 ತಿಂಗಳು ಕೋವಿಡ್ ಲಾಕ್‌ಡೌನ್ ಆಗಿದ್ದರಿಂದ ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದವು. ನಂತರ, ನಂತರ ಮಾರುಕಟ್ಟೆ ಕುಸಿತದಿಂದ ಕಂಗಾಲಾಗಿದ್ದರು. ಸಾಮಾನ್ಯವಾಗಿ ದಿನಕ್ಕೆ 3 ಸೀರೆ ನೇಯುವ ನೇಕಾರರು, ವಾರಕ್ಕೆ 3 ಸೀರೆ ನೇಯಬೇಕಾಗಿದೆ. ಹೀಗಾಗಿ ಮುಂದೇನು ಮಾಡುವುದು ಎನ್ನುವ ಚಿಂತೆಗೀಡಾಗಿದ್ದಾರೆ.
ಸರ್ಕಾರ ತಯಾರಿ: ಸಂಕಷ್ಟಕ್ಕೀಡಾಗಿರುವ ವಿದ್ಯುತ್ ಮಗ್ಗೆ ನೇಕಾರರು ತಯಾರಿಸಿರುವ ಸೀರೆಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಅಂದರೆ ಏ.1 ರಿಂದ ಜೂ.30ರವರೆಗೆ ಉಳಿದಿರುವ ದಾಸ್ತಾನಿನ ನಿಖರವಾದ ವಿವರಗಳನ್ನು ಘಟಕಗಳಿಂದ ಸಂಗ್ರಹಿಸುವ ನಿಟ್ಟಿನಲ್ಲಿ ನಮೂನೆಯೊಂದನ್ನು ಬಿಡುಗಡೆ ಮಾಡಿದ್ದು, ಜು.15ರೊಳಗೆ ಸಲ್ಲಿಸಲು ಸೂಚಿಸಿದೆ. ನಮೂನೆಯಲ್ಲಿ ನೇಕಾರರ ಹೆಸರು, ವಿಳಾಸ, ಆಧಾರ್ ಸಂಖ್ಯೆ, ಘಟಕದ ವಿದ್ಯುತ್ ಆರ್.ಆರ್.ಸಂಖ್ಯೆ, ಮಗ್ಗಗಳ ಸಂಖ್ಯೆ, ಮಾರಾಟವಾಗದೇ ದಾಸ್ತಾನು ಇರುವ ಸೀರೆಗಳ ಮಾದರಿ ಹಾಗೂ ಮೌಲ್ಯ ನಮೂದಿಸಿ ಇಲಾಖೆಗೆ ವ್ಯಾಟ್ಸ್ ಆ್ಯಪ್ ಮೂಲಕ ಸಲ್ಲಿಸುವಂತೆ ಕೋರಿದೆ. ಇಲಾಖೆ ವಾಟ್ಸಪ್ ಸಂಖ್ಯೆ: ವ್ಯವಸ್ಥಾಪಕ ನಿರ್ದೇಶಕರು 9663644411, ಪ್ರಧಾನ ವ್ಯವಸ್ಥಾಪಕರು 9448513398, ಜವಳಿ ಪ್ರವರ್ಧರಾಧಿಕಾರಿ 8904295945.
ರಾಜ್ಯದಲ್ಲಿ ಸುಮಾರು 50 ಲಕ್ಷ ಸೀರೆಗಳ ದಾಸ್ತಾನಿರಬಹುದು. ಸರ್ಕಾರ ನೇಕಾರರ ಸೀರೆಗಳನ್ನು ಕೊಳ್ಳುತ್ತಿರುವುದು ಸ್ವಾಗತಾರ್ಹ. ಮೊದಲ ಹಂತದಲ್ಲಿ 500ರಿಂದ 1000 ರೂ.ವರೆಗೆ ಸೀರೆ ಖರೀದಿಸಲು, ಸರ್ಕಾರ ತೀರ್ಮಾನಿಸಿದೆ. ನೇಕಾರರ ಹೋರಾಟ ಸಮಿತಿ ಅಶ್ರಯದಲ್ಲಿ ಸಭೆ ನಡೆಸಿ, ಸೀರೆಗಳಿಗೆ ಬೆಲೆ ನಿಗದಿ ಮಾಡಲಾಗಿದೆ.
–ಬಿ.ಜಿ.ಹೇಮಂತರಾಜು, ಅಧ್ಯಕ್ಷರು, ನೇಕಾರರ ಹೋರಾಟ ಸಮಿತಿ
-ಡಿ.ಶ್ರೀಕಾಂತ