Advertisement
“”ಓಹೊ, ಆಗಲೇ ಎಲ್ಲಾ ತಯಾರಿ ಮಾಡ್ಕೊಂಡು ಬಿಟ್ಟಿದ್ದೀರಿ ಹಾಗಾದ್ರೆ” ಪದ್ಮಕ್ಕನ ಮಾತಿಗೆ ಸರೋಜ “ಹೂಂ…’ ಎನ್ನುತ್ತ ನಕ್ಕಳು. ಭಾರತೀಯ ಗೃಹಿಣಿಗೆ ಸೀರೆಯಷ್ಟು ಅಚ್ಚುಮೆಚ್ಚಿನ ಉಡುಪು ಬೇರೊಂದಿಲ್ಲ. ಇತ್ತೀಚೆಗೆ ಮನೆಯಲ್ಲಿ ಧರಿಸುವ “ನೈಟಿ’ ಎಂಬ ಅನುಕೂಲಕರ ಉಡುಪು, ಮನೆಗೆಲಸದಲ್ಲಿ ತೊಡಗಿಕೊಂಡಿರುವಾಗ, ಚಿಕ್ಕಮಕ್ಕಳಿರುವಾಗ ತೊಡಕಿಲ್ಲದೆ ನಿಭಾಯಿಸಲು ಸುಲಭವಾಗು ವಂತಹ ಸರಳ ದಿರಿಸು. ಚೂಡಿದಾರ್, ಸೆಲ್ವರ್ ಕಮೀಜ್, ಪ್ಯಾಂಟ್, ಟೀಶರ್ಟ್ ಎಲ್ಲವೂ ಪ್ರಯಾಣಕ್ಕೆ, ಪ್ರವಾಸಕ್ಕೆ, ದಿಢೀರ್ ಮಾರ್ಕೆಟಿಗೆ ಹೋಗುವುದಕ್ಕೆಲ್ಲ ಆರಾಮದಾಯಕ ಉಡುಗೆಯೆಂದು ಈಗ ಜನಪ್ರಿಯವಾಗಿ ಚಾಲ್ತಿಯಲ್ಲಿದ್ದರೂ, ಸಾಂಪ್ರದಾಯಿಕ ಧಾರ್ಮಿಕ ಸಮಾರಂಭಗಳ ಸೌಂದರ್ಯಕ್ಕೆ ಸೀರೆಯೇ ಸರಿ.
Related Articles
Advertisement
ಸೌಂದರ್ಯದ ಜೊತೆಗೆ ಭಕ್ತಿಭಾವವನ್ನು ಸೃಜಿಸುವ ನಮ್ಮ ದೇವಾನುದೇವತೆಗಳಾದ ಲಕ್ಷ್ಮಿ, ಸರಸ್ವತಿ, ಪಾರ್ವತಿ, ಭಗವತಿ… ಎಲ್ಲರೂ ಕೂಡ “ಸೀರೆ’ ಎಂಬ ವಸನದಲ್ಲೇ ನಮ್ಮ ಮನಃಪಟಲದಲ್ಲಿ ಮೂರ್ತರೂಪ ತಾಳುತ್ತಾರೆ.
ಗೃಹಿಣಿಯ ಸೀರೆಯ ಭಾಗವಾದ ಸೆರಗು ಹಲವು ಕಾರಣಗಳಿಂದ ಪ್ರಾಮುಖ್ಯತೆವನ್ನು ಪಡೆಯುತ್ತದೆ. ಸೀರೆಯಾಗಿ ಮಹಿಳೆಯ ಮೈಯನ್ನು ಅಪ್ಪಿಯೂ, ಸ್ವತಂತ್ರವಾಗಿ ಗಾಳಿಯಲ್ಲಿ ಹಾರಾಡುವ ಸೆರಗು, ಸ್ತ್ರೀ ವ್ಯಕ್ತಿತ್ವದ ಹಲವು ಮಜಲುಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಹಳೆಯ ಕಪ್ಪು-ಬಿಳುಪು ಸಿನೆಮಾ ಒಂದರಲ್ಲಿ ನಾಯಕಿ ಗಾಳಿಯಲ್ಲಿ ಸೆರಗು ಬೀಸುತ್ತ ಬರುತ್ತಿದ್ದರೆ, ನಾಯಕ ಆಕೆಯ ಸೆರಗಿನ ತುದಿ ಹಿಡಿದು ಹಿಂದೆ ಹಿಂದೆ ಬರುತ್ತಾನೆ. ಆಗ ನಾಯಕಿ ವಾರೆಗಣ್ಣಿನಿಂದ ಆತನನ್ನು ನೋಡಿ, ಹುಸಿ ಮುನಿಸು ನಟಿಸುತ್ತ, ಛೋಡ್ ದೊ ಆಚಲ್… ಜಮಾನಾ ಕ್ಯಾ ಕಿಹೇಗಾ… ಎಂಬ ಮರ ಸುತ್ತುವ ಹಾಡೊಂದು ಆ ಕಾಲದಲ್ಲಿ ಬಹಳ ಜನಪ್ರಿಯವಾಗಿತ್ತು.
ಒಂದು ಸಂದರ್ಭದಲ್ಲಿ ಶ್ರೀಕೃಷ್ಣನ ಗಾಯದಿಂದ ರಕ್ತ ಬಾರದಂತೆ ತಡೆಯಲು ದ್ರೌಪದಿ ಆ ಕ್ಷಣ ತನ್ನ ಸೆರಗಿನ ತುದಿಯನ್ನೇ ಹರಿದು ಗಾಯಕ್ಕೆ ಕಟ್ಟುತ್ತಾಳೆ. ಈ ಸೆರಗಿನ ಋಣವೇ ಮತ್ತೆ ವಸ್ತ್ರಾಪಹರಣದ ಸಮಯದಲ್ಲಿ ಶ್ರೀಕೃಷ್ಣಾನುಗ್ರಹದಿಂದ ಅಕ್ಷಯಾಂಬರವಾಗಿ ಆಕೆಯ ಮಾನ ಕಾಪಾಡುತ್ತದೆ.
ಮಗುವಿನೊಂದಿಗೆ ಹೊರಗೆ ಹೋಗುವ ಅಮ್ಮ , ದಿಢೀರ್ ಸುರಿಯುವ ಮಳೆಗೆ ಮಗುವನ್ನು ತನ್ನ ಸೆರಗಲ್ಲಿ ಜೋಪಾನವಾಗಿಸುತ್ತಾಳೆ. ದೇವರಲ್ಲಿ ಸೆರ ಗೊಡ್ಡಿ ಬೇಡುವೆ ಎನ್ನುವಲ್ಲಿ ಸೆರಗು ಭಕ್ತಿ, ಶರಣಾಗತಿಯ ಸಂಕೇತ, ದಿಢೀರ್ ಆಘಾತಗಳಿಗೆ ಆಸರೆಯಾಗುವ ಸೆರಗು ಸೈರಣೆಯ ಕುರುಹು. ಸೆರಗು ಸ್ವಾತಂತ್ರ್ಯದ ಮೆರುಗು. ಸೌಂದರ್ಯದ ಬೆರಗು. ಗೃಹಿಣಿಯ ರಕ್ಷಣೆಯ ಲಕ್ಷ್ಮಣರೇಖೆ ಆ ಸೆರಗು. ದುಃಖ-ಬೇಸರದ ಸಂದರ್ಭದಲ್ಲಿ ಬಾಯಿಮೂಗಿಗೆ ಅಡ್ಡ ಹಿಡಿದ ಸೆರಗು ಭಾವೋದ್ವೇಗ ಹಿಡಿದಿಡುವ ಅಣೆಕಟ್ಟು. ಗಾಳಿಯಲ್ಲಿ ಹಾರುವ ಸೆರಗು ಸ್ವಾತಂತ್ರ್ಯದ ನಿರಾಳ ಭಾವದುಸಿರು. ಅಡುಗೆ ಮನೆಯಲ್ಲಿ ಸೆರಗು ಸರ್ವೋಪಯೋಗಿ. ಅಮ್ಮ ಮಾತ್ರವಲ್ಲ , ಇತರರೂ ಆಕೆಯ ಸೆರಗನ್ನು ಬಿಟ್ಟಿಯಾಗಿ ಉಪಯೋಗಿಸುವವರೇ. ಒದ್ದೆ ಕೈ ಒರೆಸಲು ಸೆರಗಿನಷ್ಟು ಸುಲಭದಲ್ಲಿ ಸಿಗುವುದು ಬೇರಾವುದೂ ಇಲ್ಲ. ಹೀಗೆ ಸೆರಗು ಬಹುರೂಪಿ. ಸರ್ವವ್ಯಾಪಿ. ಹೊಗೆಗೆ ಕಣ್ಣು ಮೂಗಲ್ಲೆಲ್ಲ ಸುರಿವ ನೀರು, ಮೈ ಬೆವರಿಗೆಲ್ಲ ಸೆರಗು ಸದಾ ಸಾಥಿ. ನಿಜಕ್ಕೂ ಈ ಸೆರಗು ಲೋಕದ ಬೆರಗೇ ಅಹುದು.
ಇಂತಹ ಸೆರಗಿನ ರೂಪಕವಾದ ಸೀರೆಯಲ್ಲಿ ವೈವಿಧ್ಯತೆಯ ಸೊಗಡನ್ನುನಮ್ಮ ಮಾರುಕಟ್ಟೆ ಪರಿಚಯಿಸುತ್ತದೆ. ಇವುಗಳಲ್ಲಿ ಮದುವೆ-ಸಮಾರಂಭ ಗಳಲ್ಲಿ ಮೇಲುಗೈ ಸಾಧಿಸುವ ರೇಶ್ಮೆ ಸೀರೆ ಉನ್ನತ ಮಟ್ಟದ ಆದರಕ್ಕೆ ಪಾತ್ರವಾಗಿದೆ. ಹಾಗಾಗಿಯೇ ಎಲ್ಲ ಸೀರೆ ಅಂಗಡಿಗಳು ತಮ್ಮ ಹೆಸರಿನಲ್ಲಿ “ಸಿಲ್ಕ್ಸ್’ ಎಂದು ಸೇರಿಸಿಕೊಳ್ಳುತ್ತವೆ. ಈ ಸಿಲ್ಕ್ ಸೀರೆ ಎಂಬ ಶಬ್ದವೇ ಗೃಹಿಣಿಗೆ ಆನಂದದೊಳಗಿನ ರೋಮಾಂಚನ. ರೇಶ್ಮೆ ಎಂದರೆ ಮಡಿ, ಶುದ್ಧ, ಪವಿತ್ರ ಹಾಗೂ ಗೌರವಾನ್ವಿತ ಸೌಂದರ್ಯದ ಸಂಕೇತ ಎಂಬ ಭಾವವನ್ನು ಸ್ಪುರಿಸುತ್ತದೆ.
ದಕ್ಷಿಣಭಾರತದಂತಹ ಸೆಕೆನಾಡಿನಲ್ಲಿ ಗೃಹಿಣಿಯರು ಕಾಟನ್ ಸೀರೆಯನ್ನೇ ಹೆಚ್ಚು ಇಷ್ಟಪಡುತ್ತಾರೆ. ಇನ್ನು ನಾರಿನ ಸೀರೆಗಳು ಪೌರಾಣಿಕ ಕಾಲದಲ್ಲಿ ವೈರಾಗ್ಯ, ವಾನಪ್ರಸ್ಥದ ಸಂಕೇತವಾಗಿತ್ತು.
ಕಾಟನ್ ಸಿಲ್ಕ್ , ಜೂಟ್ ಸಿಲ್ಕ್- ಎಂದೆಲ್ಲ ಬೇರೆ ಬೇರೆ ಮಿಶ್ರಣದ ಸೀರೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈಗ ಹೊರಗೆ ಹೋಗುವಾಗಲೆಲ್ಲ ಗೃಹಿಣಿ ಸೀರೆ ಧರಿಸುವುದು ಕಡಿಮೆ ಎಂದೆನಿಸಿದರೂ ಎಲ್ಲಾದರೂ ಸೀರೆ ಪ್ರದರ್ಶನವೊ, ದರಕಡಿತ ಮಾರಾಟವೊ ಇದ್ದರೆ ಅಲ್ಲಿ ಹೆಂಗಳೆಯರ ನೂಕುನುಗ್ಗಲು. ಹಾಗಾಗಿ ಗೃಹಿಣಿಯ ಸೀರೆ ವ್ಯಾಮೋಹ ಮಾತ್ರ ನಿರಂತರ.“ಸೀರೆ ನೀನಿರೆ ನಾನು ನನ್ನಿರವ ಮರೆವೆನೆ’ ಎಂಬ ಒಂದು ಉದ್ಗಾರ, ಸೀರೆ ಧಾರಿಣಿ ಮನಮೋಹಕವಾಗಿ ತನ್ನನ್ನೇ ಕೇಳಿಕೊಳ್ಳುವಂತಿದೆ. ವಿಜಯಲಕ್ಷ್ಮಿ ಶ್ಯಾನ್‌ಭೋಗ್