Advertisement

ಆಸ್ಪತ್ರೆ ಆವರಣದಲ್ಲಿ ಮಕ್ಕಳಿಗೆ ಸೀರೆ ತೊಟ್ಟಿಲು

05:36 PM Jan 14, 2022 | Team Udayavani |

ಸಿಂಧನೂರು: ಸರಕಾರಿ ಆಸ್ಪತ್ರೆಯಲ್ಲಿ ಮಹಿಳೆಯರಿಗಾಗಿ ನಡೆಸುವ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಶಿಬಿರಕ್ಕೆ ಬಂದ ವೇಳೆ ಹಸುಗೂಸುಗಳಿಗೆ ಆಸ್ಪತ್ರೆ ಆವರಣದ ಗಿಡಮರಗಳೇ ಆಸರೆಯಾಗುತ್ತಿವೆ.

Advertisement

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಂದಿರನ್ನು ಶಸ್ತ್ರ ಚಿಕಿತ್ಸೆಗೆ ಕರೆದೊಯ್ದ ಬಳಿಕ ಜೊತೆಗೆ ಬಂದ ಸಂಬಂಧಿಕರು, ಪುಟ್ಟ ಕಂದಮ್ಮಗಳಿಗೆ ಸೂಕ್ತ ವ್ಯವಸ್ಥೆ ಇಲ್ಲವಾಗಿದೆ.

ಆಸ್ಪತ್ರೆಯೊಳಗೆ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಗೆ ಸಂಬಂಧಿಸಿ ಬೆಡ್‌ ಕೂಡ ನೀಡುತ್ತಿಲ್ಲ. ಸಹಜವಾಗಿಯೇ ಮಹಿಳೆಯರನ್ನು ಆಪರೇಷನ್‌ ಥೇಟರ್‌ಗೆ ಕರೆದುಕೊಂಡ ಬಳಿಕ, ಹಸುಗೂಸು ಸಮೇತ ಪಾಲಕರು ಆಸ್ಪತ್ರೆ ಆವರಣದಲ್ಲಿ ದಿನವೆಲ್ಲ ಕಾಯುವಂತಾಗಿದೆ.

ಸೀರೆಯ ತೊಟ್ಟಿಲು

ಹೆರಿಗೆಯಾ ನಾಲ್ಕೈದು ತಿಂಗಳ ಅವಧಿಯಲ್ಲಿ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತದೆ. ಪುಟ್ಟ ಕೂಸಿನೊಂದಿಗೆ ತಾಯಂದಿರನ್ನು ಕರೆದುಕೊಂಡು ಬಂದ ಪಾಲಕರು, ಹಸುಗೂಸಿನೊಂದಿಗೆ ಕುಳಿತುಕೊಳ್ಳಲು ಆಸ್ಪತ್ರೆಯೊಳಗೆ ಜಾಗ ಇಲ್ಲದಂತಾಗಿದೆ. ಹೀಗಾಗಿ, ಪುಟ್ಟ ಕಂದಮ್ಮಗಳನ್ನು ಕರೆದುಕೊಂಡು ಹೊರಗಡೆ ಬಂದು ಆಸ್ಪತ್ರೆ ಆವರಣದ ಗಿಡಗಳಿಗೆ ಸೀರೆಯಿಂದ ತೊಟ್ಟಿಲು ಕಟ್ಟಲಾಗುತ್ತದೆ. ಮಕ್ಕಳನ್ನು ಹಾಕಿ, ಅದರಲ್ಲಿ ತೂಗುತ್ತಾ ದಿನವೆಲ್ಲ ಜಾಗರಣೆ ಮಾಡಬೇಕಿದೆ.

Advertisement

ಸೌಲಭ್ಯದತ್ತ ಗಮನವಿಲ್ಲ

ಸರಕಾರಿ ಆಸ್ಪತ್ರೆಯಲ್ಲಿ ಪ್ರತಿ ವಾರಕ್ಕೊಂದು ಈ ಶಿಬಿರ ನಡೆಸಲಾಗುತ್ತದೆ. ಡಾ| ನಾಗರಾಜ್‌ ಕಾಟ್ವಾ ನೇತೃತ್ವದ ತಂಡ ಉತ್ತಮವಾಗಿ ಸ್ಪಂದಿಸುತ್ತಿದೆ. ಸೌಲಭ್ಯದ ವಿಷಯದಲ್ಲಿ ಆಡಳಿತಾತ್ಮಕ ಸಮಸ್ಯೆ ಕಾಣಿಸಿದೆ. ಆರಂಭದಲ್ಲಿ 100ರಿಂದ 150 ಮಹಿಳೆಯರಿಗೆ ಒಂದೇ ಶಿಬಿರದಲ್ಲಿ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುತ್ತಿತ್ತು. ಈ ಕ್ರಮದಿಂದ ಸುರಕ್ಷತೆ ಕೊರತೆ, ಮಹಿಳೆಯರಿಗೆ ತೊಂದರೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರಿಂಕೋರ್ಟ್‌ ಈ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಿತ್ತು. ಆ ಬಳಿಕ ವಾರಕ್ಕೊಮ್ಮೆ ನಡೆಯುವ ಶಿಬಿರದಲ್ಲಿ 30 ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ಸಂಖ್ಯೆ ಕಡಿಮೆ ಮಾಡಿದ ಮೇಲೂ ಸೌಲಭ್ಯ ಕಲ್ಪಿಸುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಳಗಡೆ ಹೋದರೆ ಮಗುವಿಗೆ ಗಾಳಿಯಿಲ್ಲ. ಅತ್ತಾಗ ಸಂತೈಸುವುದು ಕಷ್ಟವಾಗಿ ಗಿಡಕ್ಕೆ ಜೋಕಾಲಿ ಕಟ್ಟಲಾಗಿದೆ. ಆಸ್ಪತ್ರೆ ಒಳಗೆ ನಿಲ್ಲಲಿಕ್ಕೂ ಜಾಗವಿಲ್ಲ. ಇನ್ನೆಲ್ಲಿ ಕುಳಿತುಕೊಳ್ಳುವುದು. -ಹೆಸರು ಹೇಳಿಚ್ಛಿಸದ ಪಾಲಕರು, ಸಿಂಧನೂರು

Advertisement

Udayavani is now on Telegram. Click here to join our channel and stay updated with the latest news.

Next