Advertisement

370ನೇ ವಿಧಿ ರದ್ದತಿಗೆ ಸರ್ದಾರ್‌ ಪಟೇಲರೇ ಸ್ಫೂರ್ತಿ : ಪ್ರಧಾನಿ

09:54 AM Sep 18, 2019 | sudhir |

ಕೇವಡಿಯಾ/ನವದೆಹಲಿ: “ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ವಾಪಸ್‌ ಪಡೆಯುವಂಥ ಐತಿಹಾಸಿಕ ನಿರ್ಧಾರ ಕೈಗೊಳ್ಳಲು ನಮಗೆ ಸರ್ದಾರ್‌ ಪಟೇಲ್‌ ಅವರೇ ಸ್ಫೂರ್ತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಮಂಗಳವಾರ 70ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ ಅವರು, ತಮ್ಮ ಜನುಮದಿನವನ್ನು ತವರು ರಾಜ್ಯ ಗುಜರಾತ್‌ನಲ್ಲೇ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಆಚರಿಸಿಕೊಂಡರು. ಅದರಂತೆ ಕೇವಡಿಯಾದಲ್ಲಿ ಸಾರ್ವಜನಿಕ ರ್ಯಾಲಿ ನಡೆಸಿ ಮಾತನಾಡಿದ ಅವರು, “ದೇಶವು ಸರ್ದಾರ್‌ ಪಟೇಲ್‌ ಅವರ ಪ್ರೇರಣೆಯಿಂದಲೇ 370ನೇ ವಿಧಿಗೆ ಸಂಬಂಧಿಸಿದ ಮಹತ್ವದ ನಿರ್ಧಾರ ಕೈಗೊಳ್ಳಲು ಸಾಧ್ಯವಾಯಿತು.

ಅದರಿಂದಾಗಿಯೇ, ದಶಕಗಳಷ್ಟು ಹಳೆಯ ಸಮಸ್ಯೆಯೊಂದರ ಪರಿಹಾರದ ನಿಟ್ಟಿನಲ್ಲಿ ಹೊಸ ಹೆಜ್ಜೆಯಿಡಲು ಸಾಧ್ಯವಾಯಿತು’ ಎಂದಿದ್ದಾರೆ.
ಇದೇ ವೇಳೆ, ಪಟೇಲರ ಏಕತಾ ಪ್ರತಿಮೆಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳವಾಗಿರುವ ಕುರಿತೂ ಸಂತಸ ವ್ಯಕ್ತಪಡಿಸಿದ ಮೋದಿ, “ಅಮೆರಿಕದಲ್ಲಿರುವ 133 ವರ್ಷ ಹಳೆಯ ಲಿಬರ್ಟಿ ಪ್ರತಿಮೆಗೆ ದಿನಕ್ಕೆ ಸರಾಸರಿ 10 ಸಾವಿರ ಮಂದಿ ಭೇಟಿ ನೀಡಿದರೆ, ಕೇವಲ 11 ತಿಂಗಳ ಏಕತಾ ಪ್ರತಿಮೆಗೆ ದಿನಕ್ಕೆ 8,500 ಮಂದಿ ಭೇಟಿ ನೀಡುತ್ತಿದ್ದಾರೆ’ ಎಂದು ಹೇಳಿದರು.

ಜನುಮದಿನ ಆಚರಣೆ:
ತವರು ರಾಜ್ಯದಲ್ಲಿ ನರ್ಮದಾಗೆ ಪೂಜೆ ಸಲ್ಲಿಸಿ, ಸರ್ದಾರ್‌ ಸರೋವರ ಅಣೆಕಟ್ಟು, ಏಕತಾ ಪ್ರತಿಮೆಗೆ ಭೇಟಿ ನೀಡಿದ ಬಳಿಕ ಅಮ್ಮನೊಂದಿಗೆ ಭೋಜನ ಸವಿಯುವ ಮೂಲಕ ಪ್ರಧಾನಿ ಮೋದಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಸರ್ದಾರ್‌ ಸರೋವರ ಅಣೆಕಟ್ಟು ಭರ್ತಿ(138.68 ಮೀಟರ್‌)ಯಾದ ಹಿನ್ನೆಲೆಯಲ್ಲಿ ಗುಜರಾತ್‌ ಸರ್ಕಾರ ಆಯೋಜಿಸಿರುವ “ನಮಾಮಿ ದೇವಿ ನರ್ಮದೆ ಮಹೋತ್ಸವ್‌’ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ಮೋದಿ, ನರ್ಮದೆಗೆ ನಮಿಸಿ, ಆರತಿ ನೆರವೇರಿಸಿದರು. ಈ ವೇಳೆ ಸಿಎಂ ರೂಪಾಣಿ ಕೂಡ ಸಾಥ್‌ ನೀಡಿದರು.

ಚಿಟ್ಟೆ ಉದ್ಯಾನಕ್ಕೆ ಭೇಟಿ:
ನಂತರ, ಕೇವಡಿಯಾದಲ್ಲಿನ ಚಿಟ್ಟೆ ಉದ್ಯಾನಕ್ಕೆ ತೆರಳಿದ ಮೋದಿ, ಅಲ್ಲಿನ ಕೇಸರಿ ಬಣ್ಣದ “ಟೈಗರ್‌ ಬಟರ್‌ಫ್ಲೈ’ ಎಂದು ಕರೆಯಲಾಗುವ ಚಿಟ್ಟೆಯನ್ನು “ರಾಜ್ಯದ ಚಿಟ್ಟೆ’ ಎಂದು ಘೋಷಿಸಿದರು. ಇದಕ್ಕೂ ಮುನ್ನ ಏಕತಾ ಪ್ರತಿಮೆಗೆ ಭೇಟಿ ನೀಡುವ ವೇಳೆ ಹೆಲಿಕಾಪ್ಟರ್‌ನಲ್ಲಿ ತಾವೇ ಸೆರೆಹಿಡಿದ ಏಕತಾ ಪ್ರತಿಮೆಯ ವಿಡಿಯೋವನ್ನೂ ಮೋದಿ ಟ್ವೀಟ್‌ ಮಾಡಿದರು. ಜತೆಗೆ, ಸರ್ದಾರ್‌ ಸರೋವರ ಅಣೆಕಟ್ಟಿನ ಸುತ್ತಮುತ್ತ ನಡೆಯುತ್ತಿರುವ ಅನೇಕ ಅಭಿವೃದ್ಧಿ ಕಾಮಗಾರಿಗಳ ಪ್ರದೇಶಕ್ಕೂ ಭೇಟಿ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಕೃಷಿಯಲ್ಲಿ “ಒಂದು ಹನಿ, ಹೆಚ್ಚು ಬೆಳೆ’ ಎಂಬ ಧ್ಯೇಯದತ್ತ ನಾವು ಗಮನನೆಟ್ಟಿದ್ದೇವೆ. ನಿಸರ್ಗ ಎನ್ನುವುದು ನಮ್ಮ ಆಭರಣವಿದ್ದಂತೆ. ಅವುಗಳ ರಕ್ಷಣೆಯೊಂದಿಗೇ ಅಭಿವೃದ್ಧಿಯೂ ಸಾಗುತ್ತದೆ ಎಂದರು.

Advertisement

ಗಣ್ಯರ ಶುಭಾಶಯ:
ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಸಂಪುಟ ಸಹೋದ್ಯೋಗಿಗಳು, ಪಕ್ಷದ ನಾಯಕರು, ಕಾಂಗ್ರೆಸ್‌ ನಾಯಕರಾದ ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಬಿಎಸ್‌ಪಿ ನಾಯಕಿ ಮಾಯಾವತಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಗಣ್ಯರು ಮಂಗಳವಾರ ಪ್ರಧಾನಿಗೆ ಜನುಮದಿನದ ಶುಭಾಶಯ ಹೇಳಿದ್ದಾರೆ.

569 ಕೆಜಿ ಲಡ್ಡು ಅನಾವರಣ
ಸುಲಭ್‌ ಇಂಟರ್‌ನ್ಯಾಷನಲ್‌ ಎಂಬ ಸರ್ಕಾರೇತರ ಸಂಸ್ಥೆ ದೆಹಲಿಯಲ್ಲಿ 569 ಕೆಜಿಯ ಲಡ್ಡು ಅನಾವರಣಗೊಳಿಸುವ ಮೂಲಕ ಪ್ರಧಾನಿ ಮೋದಿಯವರ ಜನ್ಮದಿನವನ್ನು ಆಚರಿಸಿತು. ಜತೆಗೆ, ಅವರ ಜನ್ಮದಿನವನ್ನು “ಸ್ವತ್ಛತಾ ದಿವಸ್‌’ ಎಂದೂ ಆಚರಿಸಿತು. ಇನ್ನು ನವದೆಹಲಿಯ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು 69 ಕೆಜಿ ಹಾಗೂ 370 ಕೆಜಿ ತೂಕದ ಕೇಕುಗಳನ್ನು ಕತ್ತರಿಸಿ ಮೋದಿಗೆ ಶುಭ ಕೋರಿದರು. ಜತೆಗೆ, ಸಮುದಾಯ ಉತ್ಸವ, ಯಜ್ಞಗಳನ್ನು ನಡೆಸುವ ಮೂಲಕ ಮೋದಿಗೆ ಆಯುರಾರೋಗ್ಯ ಭಾಗ್ಯವನ್ನು ಕರುಣಿಸುವಂತೆ ಪ್ರಾರ್ಥಿಸಲಾಯಿತು. ಈ ನಡುವೆ, “ಸ್ಮಾರಕಗಳ ಮುಖಾಂತರ ರಾಷ್ಟ್ರೀಯ ಏಕತೆ’ ಎಂಬ ಹೆಸರಿನ ವಸ್ತುಪ್ರದರ್ಶನವನ್ನೂ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರ ಆಯೋಜಿಸಿತ್ತು. ಅದರಲ್ಲಿ ಮಂಗಳಧಾಮ ಸರೋವರದ ದಡದ ರಾಮ್‌ಕೋಟ್‌ ಕೋಟೆ, ಗಿಲಿYಟ್‌ ಪಾಕಿಸ್ತಾನದಲ್ಲಿರುವ ಬುದ್ಧ ಮುಜಸ್ಸಾಮ, ಶಾರದಾ ಪೀಠ ಹಾಗೂ ಪಿಒಕೆಯಲ್ಲಿರುವ ಇತರೆ ಸುಂದರ ತಾಣಗಳ ಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next