Advertisement

ಸರ್ದಾರ್‌ ಪಟೇಲ್‌ ಸ್ಟೇಡಿಯಂ : ಕ್ರಿಕೆಟ್‌ ಲೋಕಕ್ಕೆ ನೂತನ ಹೆಬ್ಟಾಗಿಲು

12:06 AM Feb 22, 2021 | Team Udayavani |

ಅಹ್ಮದಾಬಾದ್‌ನ ಸಾಬರಮತಿ ನದಿ ದಂಡೆಯಲ್ಲಿ ತಲೆಯೆತ್ತಿ ನಿಂತಿರುವ ನವೀಕೃತ “ಸರ್ದಾರ್‌ ಪಟೇಲ್‌ ಸ್ಟೇಡಿಯಂ’ ಈಗ ವಿಶ್ವದ ಕೇಂದ್ರಬಿಂದು. ಜಗತ್ತಿನ ಶ್ರೇಷ್ಠ ಕ್ರಿಕೆಟ್‌ ಸ್ಟೇಡಿಯಂಗಳಾದ ಲಂಡನ್ನಿನ ಐತಿಹಾಸಿಕ ಲಾರ್ಡ್ಸ್‌, ಮೆಲ್ಬರ್ನ್ನ ಎಂಸಿಜಿ, ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೊದಲಾದವನ್ನೆಲ್ಲ ಮೀರಿಸಿದ ಹಿರಿಮೆ ಈ ಅಹ್ಮದಾಬಾದ್‌ ಸ್ಟೇಡಿಯಂನದ್ದು. ವೀಕ್ಷಕರ ಸಾಮರ್ಥ್ಯ, ಅತ್ಯಾಧುನಿಕ ತಂತ್ರಜ್ಞಾನ, ಅತ್ಯಾಕರ್ಷಕ ಮಾದರಿ, ಕಣ್ಸೆಳೆಯುವ ಸೌಂದರ್ಯ… ಎಲ್ಲವೂ ಒಂದಕ್ಕೊಂದು ಮಿಗಿಲು ಎಂಬಂತಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ “ನಮಸ್ತೆ ಟ್ರಂಪ್‌’ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಈ ಕ್ರೀಡಾಂಗಣ, ಸರಿಯಾಗಿ ಒಂದು ವರ್ಷದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ತೆರೆದುಕೊಳ್ಳಲಿದೆ. ಬುಧವಾರದಿಂದ ಇಲ್ಲಿ ಭಾರತ-ಇಂಗ್ಲೆಂಡ್‌ ಸರಣಿಯ 3ನೇ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. ಇದು ಹಗಲು-ರಾತ್ರಿ ನಡೆಯುವ ಪಿಂಕ್‌ ಬಾಲ್‌ ಟೆಸ್ಟ್‌ ಎಂಬುದು ವಿಶೇಷ. ಈ ಹಿನ್ನೆಲೆಯಲ್ಲಿ ಅಹ್ಮದಾಬಾದ್‌ ಕ್ರೀಡಾಂಗಣಕ್ಕೊಂದು ಸುತ್ತು…

Advertisement

ಹೈಮಾಸ್ಟ್‌ ಬದಲು ಎಲ್‌ಇಡಿ
ಸಾಮಾನ್ಯವಾಗಿ ಎಲ್ಲ ಕ್ರೀಡಾಂಗಣಗಳು ರಾತ್ರಿಯನ್ನು ಬೆಳಗಲು ಹೈಮಾಸ್ಟ್‌ ದೀಪಗಳನ್ನು ಹೊಂದಿರುತ್ತವೆ. ಆದರೆ ಇದರಿಂದ ಬಿಸಿ ಏರುವುದರಿಂದ ಇಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆ. ಇದರಿಂದ ಬೆಳಕಿನ ಗುಣಮಟ್ಟ
ಇನ್ನಷ್ಟು ಉಜ್ವಲವಾಗಿದ್ದು, ನೆರಳಿನ ಸಮಸ್ಯೆ ತಲೆದೋರದು.

ತಂಪು ಕಾಯ್ದುಕೊಳ್ಳುವ ಛಾವಣಿ
ಪುಣೆಯ ವಾಲ್ಟರ್‌ ಪಿ ಮೂರೆ ಆರ್ಕಿಟೆಕ್ಟ್ ಇಂಜಿನಿಯರಿಂಗ್‌ ಸಂಸ್ಥೆ ಇದರ ಛಾವಣಿಯನ್ನು ವಿನ್ಯಾಸಗೊಳಿಸಿದೆ. ಮೇಲ್ಛಾವಣಿಗೆ ಅತ್ಯಾಧುನಿಕ ಟೆಫ್ಲಾನ್‌ ಕೋಟೆಡ್‌ ಪಿಟಿಎಫ್ಇ ಫೈಬರ್‌ಗ್ಲಾಸ್‌ಗಳನ್ನು ಅಳವಡಿಸಲಾಗಿದೆ.

ವೀಕ್ಷಕರ ನೂತನ ದಾಖಲೆ
ದಾಖಲೆ ಸಂಖ್ಯೆಯ, ಒಂದು ಲಕ್ಷದ ಹತ್ತು ಸಾವಿರ ವೀಕ್ಷಕರನ್ನು ತನ್ನೊಡಲಲ್ಲಿ ತುಂಬಿಸಿಕೊಳ್ಳುವುದು ಈ ಕ್ರಿಕೆಟ್‌ ಕ್ರೀಡಾಂಗಣದ ಹೆಚ್ಚುಗಾರಿಕೆ. ಹಿಂದಿನ ದಾಖಲೆ ಮೆಲ್ಬರ್ನ್ನ ಎಂಸಿಜಿ ಹೆಸರಲ್ಲಿತ್ತು. ಇದರ ಸಾಮರ್ಥ್ಯ ಭರ್ತಿ ಒಂದು ಲಕ್ಷ. ಭಾರತದ ದಾಖಲೆ ಕೋಲ್ಕತಾದ ಈಡನ್‌ ಗಾರ್ಡನ್ಸ್‌ನದ್ದಾಗಿತ್ತು. ಇಲ್ಲಿ 80 ಸಾವಿರ ವೀಕ್ಷಕರು ತುಂಬುತ್ತಿದ್ದರು.

ಜಗತ್ತಿನ ಎಲ್ಲ ಕ್ರೀಡಾಂಗಣಗಳ ಸಾಮರ್ಥ್ಯದ ಲೆಕ್ಕಾಚಾರದಲ್ಲಿ ಸರ್ದಾರ್‌ ಪಟೇಲ್‌ ಸ್ಟೇಡಿಯಂಗೆ ದ್ವಿತೀಯ ಸ್ಥಾನ. 1,14,000 ವೀಕ್ಷಕರನ್ನು ಹಿಡಿಸಬಲ್ಲ ಉತ್ತರ ಕೊರಿಯಾದ ಪ್ಯೂoಗ್ಯಾಂಗ್‌ನಲ್ಲಿರುವ ಮಲ್ಟಿ ಪರ್ಪಸ್‌ “ರುಂಗ್ರಾಡೊ ಮೇ ಡೇ ಸ್ಟೇಡಿಯಂ’ ಸದ್ಯ ಅಗ್ರಸ್ಥಾನದಲ್ಲಿದೆ.

Advertisement

“ಎಲ್‌ ಆ್ಯಂಡ್‌ ಟಿ’ಗೆ ಕಾಂಟ್ರಾಕ್ಟ್
1982ರಷ್ಟು ಹಿಂದೆ ಗುಜರಾತ್‌ ಸರಕಾರ ಕ್ರಿಕೆಟ್‌ ಸ್ಟೇಡಿಯಂ ಒಂದರ ನಿರ್ಮಾಣಕ್ಕೆಂದೇ 100 ಎಕರೆ ಜಾಗವನ್ನು ಮಂಜೂರು ಮಾಡಿತ್ತು. ಕೇವಲ 9 ತಿಂಗಳಲ್ಲಿ ಅಂದಿನ ಸ್ಟೇಡಿಯಂ ತಲೆಯೆತ್ತಿತ್ತು. ಇದು 49 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿತ್ತು. ಇದಕ್ಕೂ ಮೊದಲು “ಅಹ್ಮದಾಬಾದ್‌ ಮುನ್ಸಿಪಲ್‌ ಕಾರ್ಪೊರೇಶನ್‌ ಸ್ಟೇಡಿಯಂ’ನಲ್ಲಿ ಕ್ರಿಕೆಟ್‌ ಪಂದ್ಯಗಳು ನಡೆಯುತ್ತಿದ್ದವು. 2016ರಲ್ಲಿ ಇದರ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿತು. ಜೀರ್ಣೋದ್ಧಾರ ಎನ್ನುವುದಕ್ಕಿಂತ ಪೂರ್ತಿ ಹೊಸತಾದ ಕ್ರೀಡಾಂಗಣ ಎನ್ನುವುದೇ ಹೆಚ್ಚು ಸೂಕ್ತ. ಮೂವರ ಸ್ಪರ್ಧೆಯಲ್ಲಿ “ಎಲ್‌ ಆ್ಯಂಡ್‌ ಟಿ ಕಂಪೆನಿ’ಗೆ ಕಾಂಟ್ರಾಕ್ಟ್ ಲಭಿಸಿತು. ಸತತ 4 ವರ್ಷಗಳ ಕಾಮಗಾರಿ ಬಳಿಕ ಸ್ಟೇಡಿಯಂ ರೂಪುಗೊಂಡಿದೆ. ಇದಕ್ಕೆ ತಗುಲಿದ ಒಟ್ಟು ವೆಚ್ಚ 800 ಕೋಟಿ ರೂ. ಆರಂಭದಲ್ಲಿ 700 ಕೋ.ರೂ. ಎಂದು ಅಂದಾಜಿಸಲಾಗಿತ್ತು.

76 ಕಾರ್ಪೊರೇಟ್‌ ಬಾಕ್ಸ್‌
3 ಬೃಹತ್‌ ಪ್ರವೇಶದ್ವಾರವನ್ನು ಹೊಂದಿರುವ ಈ ಕ್ರೀಡಾಂಗಣ, ತಲಾ 25 ಮಂದಿ ಸಾಮರ್ಥ್ಯದ 76 ಕಾರ್ಪೊರೇಟ್‌ ಬಾಕ್ಸ್‌ಗಳನ್ನು ಹೊಂದಿದೆ. ಅತ್ಯಧಿಕ 4 ಡ್ರೆಸ್ಸಿಂಗ್‌ ರೂಮ್‌, 3 ಪ್ರಸ್‌ ಬಾಕ್ಸ್‌ಗಳು ಇದರ ವೈಶಿಷ್ಟ್ಯ. ಒಲಿಂಪಿಕ್‌ ಮಾದರಿಯ ಈಜುಕೊಳದ ಜತೆಗೆ ಪ್ರತಿಯೊಂದು ಡ್ರೆಸ್ಸಿಂಗ್‌ ರೂಮ್‌ಗೂ ಪ್ರತ್ಯೇಕ ಜಿಮ್‌ ವ್ಯವಸ್ಥೆ ಇದೆ. ಒಳಾಂಗಣ ಕ್ರಿಕೆಟ್‌ ಅಕಾಡೆಮಿ, ಟೆನಿಸ್‌ ಮತ್ತು ಬ್ಯಾಡ್ಮಿಂಟನ್‌ ಕೋರ್ಟ್‌ಗಳನ್ನೂ ಇದು ಹೊಂದಿದೆ. ಸ್ಟೇಡಿಯಂನ ಯಾವುದೇ ಜಾಗದಲ್ಲಿ ಕುಳಿತರೂ ಇಡೀ ಕ್ರೀಡಾಂಗಣದ ದೃಶ್ಯಾವಳಿಯನ್ನು ವೀಕ್ಷಿಸಲು ಸಾಧ್ಯ. ಅಪಾರ ಕ್ರಿಕೆಟ್‌ ಸಂಗ್ರಹದ ಮ್ಯೂಸಿಯಂ ಇಲ್ಲಿನ ಮತ್ತೂಂದು ಆಕರ್ಷಣೆ.

ಸುಸಜ್ಜಿತ ಡ್ರೈನೇಜ್‌ ವ್ಯವಸ್ಥೆ
ಕ್ರೀಡಾಂಗಣ ಎಷ್ಟೇ ಸುಸಜ್ಜಿತವಾಗಿದ್ದರೂ ಡ್ರೈನೇಜ್‌ ವ್ಯವಸ್ಥೆ ಸರಿ ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ಇದಕ್ಕೆ ಈ ಸ್ಟೇಡಿಯಂ ಅಪವಾದ. ಎಷ್ಟೇ ಜೋರು ಮಳೆ ಸುರಿಯಲಿ, ಮಳೆ ನಿಂತ ಕೇವಲ ಅರ್ಧ ಗಂಟೆಯಲ್ಲಿ ಆಟವನ್ನು ಪುನರಾರಂಭಿಸುವ ರೀತಿಯ ಡ್ರೈನೇಜ್‌ ವ್ಯವಸ್ಥೆ ಇಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next