Advertisement

ಸರ್ದಾರ್‌ ಅಣೆಕಟ್ಟು ಲೋಕಾರ್ಪಣೆ: ಸಂತ್ರಸ್ತರ ಬದುಕಿಗೂ ನೆಲೆಯಾಗಲಿ 

08:23 AM Sep 18, 2017 | |

ಶಂಕುಸ್ಥಾಪನೆಯಾಗಿ ಬರೋಬ್ಬರಿ 56 ವರ್ಷಗಳ ಬಳಿಕ ಸರ್ದಾರ್‌ ಸರೋವರ್‌ ಅಣೆಕಟ್ಟನ್ನು ಲೋಕಾರ್ಪಣೆ ಮಾಡಲಾಗಿದೆ. ಒಂದು ಅಣೆಕಟ್ಟಿನ ನಿರ್ಮಾಣ ಕಾರ್ಯ ಅರ್ಧ ದಶಕಕ್ಕೂ ಹೆಚ್ಚು ಸಮಯ ಸಾಗಿರುವುದು ಬಹುಶಃ ಜಗತ್ತಿನಲ್ಲೇ ಇದು ಮೊದಲು ಆಗಿರಬೇಕು. ಇಷ್ಟುಮಾತ್ರವಲ್ಲದೆ  ಅತ್ಯಂತ ಹೆಚ್ಚು ವಿವಾದಕ್ಕೊಳಗಾದ  - ಅಡೆತಡೆ ಎದುರಿಸಿದ ಯೋಜನೆಯಿದು. ಗಾತ್ರದಲ್ಲಿ ಜಗತ್ತಿನ ಎರಡನೇ ಅಣೆಕಟ್ಟಿನ ಸುತ್ತಮುತ್ತಿರುವ ವಿವಾದಗಳು ಇನ್ನೂ ಪೂರ್ಣವಾಗಿ ಬಗೆಹರಿದಿಲ್ಲ ಮತ್ತು ಸದ್ಯಕ್ಕದು ಬಗೆಹರಿಯುವ ಲಕ್ಷಣವೂ ಇಲ್ಲ. ಗಾತ್ರದಂತೆಯೇ ವೆಚ್ಚದಲ್ಲೂ ಸರ್ದಾರ್‌ ಸರೋವರ್‌ ಅಣೆಕಟ್ಟಿನದು ಒಂದು ದಾಖಲಿಯೇ ಸರಿ. ಪ್ರಾರಂಭದಲ್ಲಿ 650 ಕೋ. ರೂ. ಯೋಜನಾ ವೆಚ್ಚ ಅಂದಾಜಿಸಲಾಗಿತ್ತು. ಅದು ಏರುತ್ತಾ ಹೋಗಿ ಪ್ರಸ್ತುತ ಸುಮಾರು 65,000 ಕೋ. ರೂ. ಆಗಿದೆ. ಅಣೆಕಟ್ಟಿನ ಕೆಲಸ ಸಂಪೂರ್ಣವಾಗಿ ಮುಗಿಯುವಾಗ ವೆಚ್ಚ ಸುಮಾರು 1 ಲಕ್ಷ ಕೋಟಿಯಾಗುವ ನಿರೀಕ್ಷೆಯಿದೆ. ಇದಕ್ಕೆ ಬಳಸಿರುವ ಕಾಂಕ್ರೀಟಿನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ಮತ್ತು ಕೊಂಡ್ಲಾದಿಂದ ಕೊಹಿಮಾ ತನಕ  ಸುಸಜ್ಜಿತ ಕಾಂಕ್ರೀಟು ರಸ್ತೆ ನಿರ್ಮಿಸಬಹುದೆಂಬ ಹೇಳಿಕೆ ಉತ್ಪ್ರೇಕ್ಷಿತವಲ್ಲ. ಬಹುತೇಕ ದೇಶೀಯ ಎಂಜಿನಿಯರ್‌ಗಳೇ ಅಣೆಕಟ್ಟಿನ ರೂವಾರಿಗಳು ಎನ್ನುವುದು ಹೆಮ್ಮೆಪಡಬೇಕಾದ ವಿಚಾರ. ಅಂತೆಯೇ ವಿಶ್ವಬ್ಯಾಂಕ್‌ ಅರ್ಧದಲ್ಲಿ ಕೈಬಿಟ್ಟರೂ ಲೆಕ್ಕಿಸದೆ ಅಣೆಕಟ್ಟು ನಿರ್ಮಿಸಿರುವುದು ದೇಶದ ಸಂಕಲ್ಪ ಶಕ್ತಿಗೊಂದು ನಿದರ್ಶನ. ಈ ಅಣೆಕಟ್ಟಿನಿಂದ ಗುಜರಾತ್‌ ಜತೆಗೆ ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ಥಾನಕ್ಕೂ ಪ್ರಯೋಜನವಿದೆ. 4 ರಾಜ್ಯಗಳಗೆ ನೀರಾವರಿ ಸೌಲಭ, ವಿದ್ಯುತ್‌ ಒದಗಿಸಲಿದೆ. ಗುಜರಾತ್‌ ರಾಜ್ಯವೊಂದರಲ್ಲೇ 18 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಗೆ ನೀರಾವರಿ ಒದಗಿಸಲಿದೆ ಎನ್ನುವ ಅಂಶ ಅಣೆಕಟ್ಟಿನ ಮಹತ್ವವನ್ನು ತಿಳಿಸುತ್ತದೆ. 

Advertisement

ಪ್ರಧಾನಿ ಮೋದಿಯ ಜನ್ಮದಿನದಂದೇ ಅಣೆಕಟ್ಟೆಯನ್ನು ಲೋಕಾ ರ್ಪಣೆ ಮಾಡಿರುವುದರ ಹಿಂದೆ ಬಿಜೆಪಿಯ ರಾಜಕೀಯ ಲಾಭದ ಲೆಕ್ಕಾಚಾರವೂ ಇದೆ. ಈ ವರ್ಷಾಂತ್ಯದಲ್ಲಿ ನಡೆಯುವ ಗುಜರಾತಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಣೆಕಟ್ಟು ಲೋಕಾರ್ಪಣೆ ಮಾಡಿರುವುದನ್ನು ಸಾಧನೆ ಎಂದು ಬಿಂಬಿಸಿಕೊಳ್ಳಲಿದೆ. ಮುಖ್ಯಮಂತ್ರಿ ವಿಜಯ್‌ ರೂಪಾನಿ ಈಗಾಗಲೇ ಇದನ್ನು ಗುಜರಾತಿನ ಜೀವನಾಡಿ ಎಂದಿರುವುದು ಈ ಅರ್ಥದಲ್ಲೇ. ಇನ್ನೂ ಒಂದು ಮುಖ್ಯ ಅಂಶ ಎಂದರೆ ಒಬಿಸಿ ಕೋಟಾ ಒತ್ತಾಯಿಸಿ ಪ್ರಬಲ ಆಂದೋಲನ ನಡೆಸುತ್ತಿರುವ ಪಟಿದಾರ್‌ ಸಮುದಾಯವನ್ನು ಖುಷಿ ಪಡಿಸುವ ಹುನ್ನಾರವೂ ಇದರ ಹಿಂದೆ ಇದೆ. ಪಟಿದಾರ್‌ ಸಮುದಾಯದಲ್ಲಿ ಹೆಚ್ಚಿನವರು ರೈತರು. ಕೃಷಿಗೆ ನೀರು ಒದಗಿಸುವ ಮೂಲಕ ರೈತರ ಹಿತರಕ್ಷಕ ಎಂದು ಹೇಳಿಕೊಳ್ಳಬಹುದು. ಸರ್ದಾರ್‌ ಸರೋವರ್‌ ಅಣೆಕಟ್ಟು ಯೋಜನೆಯೆಂದಾಗ ಕೂಡಲೇ ನೆನಪಾಗುವುದು ಯೋಜನೆಯನ್ನು ನರ್ಮದಾ ಬಚಾವೋ ಆಂದೋಲನ. ಮೇಧಾ ಪಾಟ್ಕರ್‌ ನೇತೃತ್ವದಲ್ಲಿ ಯೋಜನೆಯನ್ನು ವಿರೋಧಿಸಿ ನಡೆದ ಹೋರಾಟಗಳಿಗೆ ಲೆಕ್ಕವಿಲ್ಲ. ಬಾಬಾ ಆಮ್ಟೆ, ನಟ ಆಮೀರ್‌  ಖಾನ್‌ ಅವರಂತಹ ಗಣ್ಯರು ಕೂಡ ಹೋರಾಟಕ್ಕೆ ಕೈಜೋಡಿಸಿದ ಪರಿಣಾಮವಾಗಿ ಯೋಜನೆ ಜಗತ್ತಿನ ಗಮನ ಸೆಳೆದಿತ್ತು. ಯೋಜನೆಯನ್ನೇ ರದ್ದು ಮಾಡಬೇಕೆಂದು ಹೋರಾಟಕ್ಕಿಳಿದ ಮೇಧಾ ಪಾಟ್ಕರ್‌ ಗುರಿಯನ್ನು ತುಸು ಬದಲಾಯಿಸಿಕೊಂಡು ಈಗ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಿಸಲು ಹೋರಾಡುತ್ತಿದ್ದಾರೆ. ಇತ್ತ ಮೋದಿ ಅಣೆಕಟ್ಟೆಯನ್ನು ಲೋಕಾರ್ಪಣೆ ಮಾಡುತ್ತಿದ್ದರೆ ಅತ್ತ ಪಾಟ್ಕರ್‌ ನೇತೃತ್ವದಲ್ಲಿ ಸಂತ್ರಸ್ತರು ಸೊಂಟದ ಮಟ್ಟ ನೀರಿನಲ್ಲಿ ಮುಳುಗಿ ಜಲ್‌ ಸತ್ಯಾಗ್ರಹ ನಡೆಸುತ್ತಿದ್ದರು. ಹೀಗಾಗಿಯೇ ಇದು ಎಂದಿಗೂ ಮುಗಿಯದ ಹೋರಾಟ ಎನ್ನುವುದು. ಸುಪ್ರೀಂ ಕೋರ್ಟಿನ ಕಟ್ಟುನಿಟ್ಟಿನ ಆದೇಶ ಇರುವ ಹೊರತಾಗಿಯೂ ಯೋಜನೆ ಸಂತ್ರಸ್ತರಿಗೆ ಸಮರ್ಪಕವಾಗಿ ಪರಹಾರ ನೀಡಿಲ್ಲ. 56 ವರ್ಷದ ಹಿಂದೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವಾಗ ಅಂದಿನ ಪ್ರಧಾನಿ ನೆಹರೂ ಸಂತ್ರಸ್ತರಿಗೆ ಸಂಪೂರ್ಣ ನ್ಯಾಯ ಒದಗಿಸಲು ಸಾಧ್ಯವಾದರೆ ಮಾತ್ರ ಯೋಜನೆ ಸಾರ್ಥಕ ಆಗಲಿದೆ ಎಂದಿದ್ದರು. ಆದರೆ ಈಗಲೂ ಸುಮಾರು 900 ಕುಟುಂಬಗಳು ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿವೆ. ಉಳಿದವರಿಗೆ ಕೊಟ್ಟಿರುವ ಪರಿಹಾರವೂ ನ್ಯಾಯೋಚಿವಾಗಿಲ್ಲ ಎನ್ನುವ ಆರೋಪವಿದೆ. ಬೃಹತ್‌ ಅಣೆಕಟ್ಟೆಯಿಂದ ಕೃಷಿ ಮಾಡಬಹುದು, ವಿದ್ಯುತ್‌ ಉತ್ಪಾದಿಸಬಹುದು, ರೈತರ ಬಾಳು ಹಸನಾಗಬಹುದು ಎಲ್ಲ ಸರಿ. ಆದರೆ ಭೂಮಿ ಕಳೆದು ಕೊಂಡವರ ಅತಂತ್ರ ಬದುಕಿಗೂ ಒಂದು ನೆಲೆಯಾಗಬೇಕಲ್ಲವೆ?

Advertisement

Udayavani is now on Telegram. Click here to join our channel and stay updated with the latest news.

Next