Advertisement

ರಾಜ್ಯದೆಲ್ಲೆಡೆ ಸರಸ್ವತಿ ಪೂಜೆಯ ಸಂಭ್ರಮ

11:07 PM Oct 05, 2019 | Lakshmi GovindaRaju |

ನವರಾತ್ರಿಯ ಏಳನೇ ದಿನವಾದ ಶನಿವಾರ ರಾಜ್ಯಾದ್ಯಂತ ಸರಸ್ವತಿ ಪೂಜೆಯನ್ನು ಭಕ್ತಿ, ಸಡಗರದಿಂದ ನೆರವೇರಿಸಲಾಯಿತು. ಭಕ್ತರು ತಮ್ಮ ಮನೆಗಳಲ್ಲಿ ವಿದ್ಯೆಯ ಅಧಿದೇವತೆ ಶಾರದೆಯನ್ನು ಪೂಜಿಸಿ, ಕೃತಾರ್ಥರಾದರು. ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಸರಸ್ವತಿ ಪೂಜೆ ನೆರವೇರಿಸಿದರು. ಶೃಂಗೇರಿ, ಕೊಲ್ಲೂರುಗಳಲ್ಲಿ ಚಿಕ್ಕ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಇದೇ ವೇಳೆ, ಬನಶಂಕರಿ, ಹೊರನಾಡು ಅನ್ನಪೂರ್ಣೇಶ್ವರಿ ಸೇರಿ ರಾಜ್ಯದ ದೇವಿ ದೇವಾಲಯಗಳಲ್ಲಿ ಸರಸ್ವತಿ, ಶಾರದೆಯರ ಆರಾಧನೆಗಳು ಜರುಗಿದವು.

Advertisement

ಜಂಬೂಸವಾರಿ ಪೂರ್ವ ತಾಲೀಮು
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಗೆ ಇನ್ನೆರಡೇ ದಿನ ಬಾಕಿ ಇರುವಂತೆ ಸಿದ್ಧತೆಗಳು ಭರದಿಂದ ಸಾಗಿದ್ದು, ಶನಿವಾರ ಅರಮನೆ ಆವರಣದಲ್ಲಿ ಜಂಬೂಸವಾರಿಯ ತಾಲೀಮು ನಡೆಯಿತು. 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ಸಾಗುವ ದಸರಾ ಗಜಪಡೆ ಕ್ಯಾಪ್ಟನ್‌ ಅರ್ಜುನನಿಗೆ ಅರಮನೆ ಮುಂಭಾಗದ ವೇದಿಕೆಯಲ್ಲಿ ಪುಷ್ಪಾರ್ಚನೆಯ ಪೂರ್ವ ತಾಲೀಮು ನೀಡಲಾಯಿತು.

ಅರ್ಜುನನ ಜತೆಗೆ ದಸರಾ ಗಜಪಡೆಯ ಇತರ ಹತ್ತು ಆನೆಗಳೂ ಪೂರ್ವ ತಾಲೀಮಿನಲ್ಲಿ ಭಾಗವಹಿಸಿದ್ದವು. ಈ ಬಾರಿಯೂ ಹಿರಿಯ ಅನುಭವಿ ಆನೆ ಬಲರಾಮ ಜಂಬೂಸವಾರಿ ಮೆರವಣಿಗೆಯನ್ನು ಮುನ್ನಡೆಸಲಿದ್ದು, ಬಲರಾಮನನ್ನು ಹಿಂಬಾಲಿಸುತ್ತ ಅಭಿಮನ್ಯು ನೌಪತ್‌ ಆನೆಯಾಗಿ ಸಾಗಿದರೆ, ವಿಜಯ ಮತ್ತು ಕಾವೇರಿ ಆನೆಗಳು ಕುಮ್ಕಿ ಆನೆಗಳಾಗಿ ಭಾಗಿಯಾದವು. ವೇದಿಕೆ ಬಳಿ ಬರುತ್ತಿದ್ದಂತೆ ಕೊಂಚ ವಿಚಲಿತನಾದ ಈಶ್ವರ ಆನೆಯನ್ನು ಮಾವುತ ಮತ್ತು ಕಾವಾಡಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಹಸಿರು ಸಂತೆ, ಚಿತ್ರ ಸಂತೆ: ಈ ಮಧ್ಯೆ, ನಗರದ ಬುಲೇವಾರ್ಡ್‌ ರಸ್ತೆಯಲ್ಲಿ ಹಸಿರು ಸಂತೆ ಹಾಗೂ ಚಿತ್ರಸಂತೆಗೆ ಚಾಲನೆ ನೀಡಲಾಯಿತು. ಹಸಿರು ಸಂತೆಯಲ್ಲಿ 45ಕ್ಕೂ ಹೆಚ್ಚು ಮಳಿಗೆಗಳಿದ್ದು, ವಿವಿಧ ರೀತಿಯ ಸಾವಯವ ಕೃಷಿ ಉತ್ಪನ್ನಗಳು, ಸೊಪ್ಪು, ತರಕಾರಿ, ನಾಟಿ ಕೋಳಿ ಮೊಟ್ಟೆ, ವಿಶೇಷ ತಳಿಗಳ ಅಕ್ಕಿ, ಭತ್ತ, ಬಿತ್ತನೆ ಬೀಜಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.

ಚಿತ್ರ ಸಂತೆಯಲ್ಲಿ 56 ಮಳಿಗೆಗಳಿದ್ದು, ಹಲವಾರು ಛಾಯಾಚಿತ್ರಗಳು, ಪೇಂಟಿಂಗ್‌, ಕೈ ಬರಹ ಚಿತ್ರಗಳು, ತ್ರೀಡಿ ಚಿತ್ರಗಳ ಪ್ರದರ್ಶನ ಗಮನ ಸೆಳೆದವು. ಅಲ್ಲದೆ, ಪ್ರತಿನಿತ್ಯ ನಗರದ ಸ್ವತ್ಛತೆಗಾಗಿ ಶ್ರಮಿಸುವ ಪೌರಕಾರ್ಮಿಕರು ಶನಿವಾರ ಮುಂಜಾನೆ ಯೋಗಾಸನ ಮಾಡುವ ಮೂಲಕ ಗಮನ ಸೆಳೆದರು. ಜಗನ್ಮೋಹನ ಅರಮನೆಯಲ್ಲಿ ದಿವ್ಯಾಂಗರಿಗಾಗಿ ವಿಶಿಷ್ಟ ಕವಿಗೋಷ್ಠಿ ಏರ್ಪಡಿಸಲಾಗಿತ್ತು.

Advertisement

ಯದುವೀರರಿಂದ ಸರಸ್ವತಿ ಪೂಜೆ
ಮೈಸೂರು: ನವರಾತ್ರಿ ಉತ್ಸವದ ಏಳನೇ ದಿನವಾದ ಶನಿವಾರ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಸರಸ್ವತಿ ಪೂಜೆ ನೆರವೇರಿಸಿದರು. ವಿದ್ಯಾದೇವತೆ ಸರಸ್ವತಿ ಮಾತೆಯ ಭಾವಚಿತ್ರದ ಮುಂಭಾಗದಲ್ಲಿ ಗ್ರಂಥಭಂಡಾರಗಳು, ವೀಣೆಗಳನ್ನಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ, ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

8ರಿಂದ ಚಾಮುಂಡೇಶ್ವರಿ ಮಹಾ ರಥೋತ್ಸವ
ಮೈಸೂರು: ಚಾಮುಂಡಿಬೆಟ್ಟದಲ್ಲಿ ಅ.8ರಿಂದ ಚಾಮುಂಡೇಶ್ವರಿ ಅಮ್ಮನವರ ಮಹಾ ರಥೋತ್ಸವ “ಶ್ರೀಮುಖ’ ನಡೆಯಲಿದೆ. 8 ರಂದು ಮೃತ್ತಿಕಾ ಸಂಗ್ರಹಣಾ ಪೂರ್ವಕ ಅಂಕುರಾರ್ಪಣದೊಂದಿಗೆ ಉತ್ಸವ ಆರಂಭ ಗೊಳ್ಳಲಿದೆ. ಅ.13ರಂದು ಬೆಳಗ್ಗೆ 6.30 ರಿಂದ 7.15 ರವರೆಗೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಅಮ್ಮನವರ ಮಹಾರಥೋತ್ಸವ ನಡೆಯಲಿದ್ದು, 15 ರಂದು ಸಂಜೆ 6.30ಕ್ಕೆ ದೇವಿಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ. 18 ರಂದು ಸಾಯಂಕಾಲ ಮುಡಿ ಉತ್ಸವ (ಜವಾರಿ ಉತ್ಸವ) ಮಂಟಪೋತ್ಸವ ದೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ ಎಂದು ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್‌ ತಿಳಿಸಿದ್ದಾರೆ.

ಇಂದಿನ ದಸರಾ ಕಾರ್ಯಕ್ರಮ
ಮೈಸೂರು
ಯೋಗಚಾರಣ ಸ್ಥಳ: ಚಾಮುಂಡಿಬೆಟ್ಟದ ತಪ್ಪಲು. ಬೆಳಗ್ಗೆ 6.
ಹಾಫ್ ಮ್ಯಾರಥಾನ್‌ ಸ್ಥಳ: ಚಾಮುಂಡಿವಿಹಾರ ಕ್ರೀಡಾಂಗಣ.ಬೆಳಗ್ಗೆ 7.
ವಿಖ್ಯಾತ ಕವಿಗೋಷ್ಠಿ – ಸ್ಥಳ: ಜಗನ್ಮೋಹನ ಅರಮನೆ. ಬೆಳಗ್ಗೆ 10.30.
ಸಾಂಸ್ಕೃತಿಕ ಕಾರ್ಯಕ್ರಮಗಳು- ಅರಮನೆ ವೇದಿಕೆ
ಜನಪದ ಸಂಭ್ರಮ-ಅನನ್ಯಭಟ್‌, ಮೈಸೂರು. ಸಂ.6.15.
ನೃತ್ಯರೂಪಕ-ಸಂಭ್ರಮ ಡ್ಯಾನ್ಸ್‌ ಅಕಾಡೆಮಿ, ಬೆಂಗಳೂರು. ರಾತ್ರಿ 7.
ಸಂಗೀತ ಸುಧೆ- ಸಂಗೀತಾ ಕಟ್ಟಿ, ಬೆಂಗಳೂರು. ರಾತ್ರಿ 8.

ಶೃಂಗೇರಿ
ಶ್ರೀ ಶಾರದಾಂಬೆಗೆ ರಾಜರಾಜೇಶ್ವರಿ ಅಲಂಕಾರ, ಜಗದ್ಗುರುಗಳಿಂದ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ, ಸಂಜೆ ಬೀದಿ ಉತ್ಸವ. ರಾತ್ರಿ ಧರೆಕೊಪ್ಪ ಗ್ರಾಪಂ ಹಾಗೂ ವಿವಿಧ ಸಂಘ- ಸಂಸ್ಥೆಗಳ ಭಕ್ತಾದಿಗಳಿಂದ ಜಗದ್ಗುರುಗಳ ದರ್ಬಾರ್‌, ದಿಂಡಿ ದೀಪಾರಾಧನೆ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ. ಬೆಂಗಳೂರಿನ ಜ್ಞಾನೋದಯ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ಹಾಡುಗಾರಿಕೆ.

ಹೊರನಾಡು
ದೇವಿಗೆ ವೃಷಭಾರೂಢಾ ಅಲಂಕಾರ ಹಾಗೂ ವಿಶೇಷ ಪೂಜೆ.

Advertisement

Udayavani is now on Telegram. Click here to join our channel and stay updated with the latest news.

Next