Advertisement

ರಾಜ್ಯದೆಲ್ಲೆಡೆ ಭಕ್ತಿ ಸಂಭ್ರಮದ ಸರಸ್ವತಿ ಪೂಜ

02:16 PM Sep 28, 2017 | |

ಶೃಂಗೇರಿ: ಶರನ್ನವರಾತ್ರಿಯ 7ನೇ ದಿನವಾದ ಬುಧವಾರ ರಾಜ್ಯದೆಲ್ಲೆಡೆ ಭಕ್ತಿ-ಸಡಗರದಿಂದ ಸರಸ್ವತಿ ಪೂಜೆ ಆಚರಿಸಲಾಯಿತು. ಆಶ್ವಯಜ ಶುಕ್ಲ ಸಪ್ತಮಿಯಂದು ಮೂಲಾ ನಕ್ಷತ್ರ ದಿನ ಸರಸ್ವತಿ ಪೂಜೆ ಇರುವುದರಿಂದ ವಿವಿಧ ಕಡೆಗಳಿಂದ ಆಗಮಿಸಿದ್ದ ಭಕ್ತರು ಶೃಂಗೇರಿ ಹಾಗೂ ಕೊಲ್ಲೂರಿನಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದರು.

Advertisement

ಶೃಂಗೇರಿಯ ಶಾರದಾ ಪೀಠದಲ್ಲಿ ಶಾರದಾಂಬೆಗೆ ವೀಣಾ ಶಾರದಾಲಂಕಾರ ಮಾಡಲಾಗಿತ್ತು. ತಾಯಿ ಶಾರದೆಯು ಕರದಲ್ಲಿ ಪುಸ್ತಕ, ಜ್ಞಾನ ಮುದ್ರೆ, ಅಮೃತ ಕಲಶ, ವೀಣೆ ಹಿಡಿದು ಭಕ್ತರಿಗೆ ದರ್ಶನ ನೀಡಿದಳು. ವಿಶೇಷ ದಿನವಾದ ಬುಧವಾರ ಮಠದ ನರಸಿಂಹವನದ ಗುರುಭವನದಲ್ಲಿ ವಿಶ್ವದ ಬೃಹತ್‌ ವೀಣೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಉಭಯ ಜಗದ್ಗುರುಗಳು ಪ್ರಾತಃ ಕಾಲದ ಆಹ್ನಿಕ ಅನುಷ್ಠಾನದ ನಂತರ ಗುರು ಪಾದುಕೆಗಳಿಗೆ ಹಾಗೂ ಶ್ರೀ ಚಕ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಜಗದ್ಗುರು ಭಾರತೀತೀರ್ಥ ಸ್ವಾಮೀಜಿಗಳು ಮಠದ ಎಲ್ಲಾ ದೇವಸ್ಥಾನಗಳಿಗೂ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶಾರದಾಂಬಾ ದೇಗುಲಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಾಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ನೀಡಿದರು.

ವಿಧುಶೇಖರ ಭಾರತೀ ಸ್ವಾಮಿಗಳು ತುಂಗಾ ನದಿಯನ್ನು ದೋಣಿಯಲ್ಲಿ ದಾಟಿ, ಗಂಗಾ ಪೂಜೆ ನೆರವೇರಿಸಿದ ಬಳಿಕ ವಾದ್ಯ ಮೇಳದೊಂದಿಗೆ ಮಠದ ಹೊರ ಮತ್ತು ಒಳ ಪ್ರಾಕಾರದ ದೇಗುಲಗಳಿಗೆ ಆಗಮಿಸಿ ಪೂಜೆ ಸಲ್ಲಿಸಿ
ತದನಂತರ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಉಭಯ ಜಗದ್ಗುರುಗಳು ಶಾರದಾಂಬೆಗೆ ಪೂಜೆ ಸಲ್ಲಿಸಿದ ಬಳಿಕ ಶಾರದಾ ದೇಗುಲದಲ್ಲಿ ಮಠದ ಆಡಳಿತಾಧಿಕಾರಿ ಗೌರಿಶಂಕರ್‌ ಅವರು ಗುರು ಪಾದುಕೆ ಹಾಗೂ ಸರಸ್ವತಿ ಪೂಜೆ ಸಲ್ಲಿಸಿದರು. ಮಠದ ಪುರೋಹಿತ ಕೃಷ್ಣಭಟ್‌ ನೇತೃತ್ವದಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆಯಿತು.

ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದ್ವಾನ್‌ ಭಾಗ್ಯಲಕ್ಷ್ಮೀಚಂದ್ರಶೇಖರ್‌ ಮತ್ತು ವೃಂದದವರ ವೀಣಾವಾದನ ನಡೆಯಿತು. ರಾತ್ರಿ ಮಠದ ಒಳ ಪ್ರಾಂಗಣದಲ್ಲಿ ನಡೆದ ದಿಂಡಿ ದೀಪಾರಾಧನೆಯಲ್ಲಿ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿಗಳು ದರ್ಬಾರ್‌ ನಡೆಸಿದರು. ದೇವಿಯ ಉತ್ಸವ ಮೂರ್ತಿಯನ್ನು ಮಠದ ಒಳ ಪ್ರಾಕಾರದಲ್ಲಿ ಸ್ವರ್ಣ ರಥದಲ್ಲಿ ಕುಳ್ಳಿರಿಸಿ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಮಠದ ಪಂಡಿತರು ನಾಲ್ಕು ವೇದಗಳ ಪಠಣ ಮಾಡಿದರು.

Advertisement

ಮೂಲಾ ನಕ್ಷತ್ರದ ದಿನ ರಾತ್ರಿ ನಡೆಯುವ ಜಗದ್ಗುರುಗಳ ರಾಜ ದರ್ಬಾರಿನಲ್ಲಿ ಮಠಕ್ಕೆ ದತ್ತಿ ಕಾಣಿಕೆಗಳನ್ನು ನೀಡಿದ ಮಹಾರಾಜರುಗಳ ಹೆಸರಿನಲ್ಲಿ ದೇವಿಗೆ ಕಾಣಿಕೆ ಸಮರ್ಪಣೆ ನಡೆಯಿತು. ಇಂದಿ ನಿಂದ ಮಹಾನವಮಿಯವರೆಗೆ ಪ್ರತಿ ನಿತ್ಯ ರಾತ್ರಿ ದರ್ಬಾರಿನ ನಂತರ ಶ್ರೀಗಳವರು ಆಸೀನರಾಗಿದ್ದ ಸ್ವರ್ಣ ಸಿಂಹಾಸನಕ್ಕೆ ಪೂಜೆ ಸಲ್ಲಿಸಲಾಗುತ್ತದೆ.

ಅರಮನೆಯಲ್ಲಿ ಸರಸ್ವತಿ ಪೂಜೆನೆರವೇರಿಸಿದ ಯದುವೀರ್‌

ಮೈಸೂರು: ಕಂಕಣಧಾರಿಯಾಗಿ ಶರನ್ನವರಾತ್ರಿ ಆಚರಣೆಯಲ್ಲಿರುವ ಮೈಸೂರು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಬುಧವಾರ ಅರಮನೆಯ ಕನ್ನಡಿತೊಟ್ಟಿಯಲ್ಲಿ ಸರಸ್ವತಿ ಪೂಜೆ ಮಾಡಿದರು.  ಬೆಳಗ್ಗೆ 9.15ರಿಂದ 9.45ರವರೆಗೆ ಅರಮನೆಯ ಪುರೋಹಿತರ ಮಾರ್ಗದರ್ಶನದಲ್ಲಿ ಶ್ರೀದುರ್ಗ, ವಾಗ್ದೇವಿ, ವೀಣಾಪಾಣಿ, ಸರಸ್ವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ವೆಬ್‌ಸೈಟ್‌ಗೆ ಚಾಲನೆ: ಇದೇ ಸಂದರ್ಭದಲ್ಲಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಬುಧವಾರ www.ykcwadiyar.in ವೆಬ್‌ ಸೈಟ್‌ಗೆ ಚಾಲನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next