Advertisement

ಮೂಗ ಮಗನೊಂದಿಗೆ ಜೋಪಡಿ ಬದುಕು

10:50 PM Sep 01, 2019 | Sriram |

ಗುತ್ತಿಗಾರು: ಸುತ್ತಮುತ್ತಲೂ ಕಾಡು,ಸೋರುವ ಪ್ಲಾಸ್ಟಿಕ್‌ ಜೋಪಡಿ.ಇದರೊಳಗೆ ಇಳಿ ವಯಸ್ಸಿನಲ್ಲಿ ಮೂಗ ಮಗನೊಂದಿಗೆ ದಿನ ದೂಡುತ್ತಿರುವ ವೃದ್ಧೆ.

Advertisement

ಈ ದೃಶ್ಯ ಕಂಡು ಬರುತ್ತಿರುವುದು ದೇವಚಳ್ಳ ಗ್ರಾಮದ ಚಳ್ಳ ಎನ್ನುವಲ್ಲಿ. ಇಲ್ಲಿ ವೃದ್ಧೆ ಸರಸ್ವತಿ ನಾಯ್ಕ ತಮ್ಮ ಅಂಗವಿಕಲ ಮೂಗ ಮಗ ವೆಂಕಪ್ಪನೊಂದಿಗೆ ಪ್ರತೀದಿನ ಕಣ್ಣೀರಲ್ಲೇ ದಿನ ದೂಡುತ್ತಿದ್ದಾರೆ.

ಸರಸ್ವತಿ ಅವರು ಹಲವು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದು, ಇಬ್ಬರು ಗಂಡು ಮಕ್ಕಳೊಂದಿಗೆ ಜೀವಿಸುತ್ತಿದ್ದಾರೆ. ಹಿರಿ ಮಗ ಜನಾರ್ದನ ಮದುವೆಯಾಗಿ ಸದ್ಯ ಬೇರೆ ಮನೆ ಮಾಡಿಕೊಂಡಿದ್ದಾರೆ. ತಾಯಿ ಜತೆ ಇತ್ತೀಚೆಗೆ ಸಂಪರ್ಕವಿದ್ದರೂ ಆತ ಸುಳ್ಯ ಸಮೀಪ ಮನೆ ಮಾಡಿಕೊಂಡಿದ್ದಾರೆ. ಸರಸ್ವತಿ ಅವರು ಕಿರಿ ಮಗ ವೆಂಕಪ್ಪನೊಂದಿಗೆ ಚಳ್ಳದಲ್ಲಿ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಮಗ ವೆಂಕಪ್ಪ ಹುಟ್ಟು ಅಂಗವಿಕಲನಾಗಿದ್ದು, ಕೂಲಿ ಕೆಲಸ ಮಾಡಿದರೂ ಹಣದ ಬಳಕೆಯ ಕುರಿತು ತಿಳಿಯುವುದಿಲ್ಲ. ಸರಸ್ವತಿ ಅವರ ಕೂಲಿ ಹಣದಲ್ಲೇ ಮನೆಯ ಖರ್ಚು ನಿಭಾಯಿಸಬೇಕಿದ್ದು, ಇತ್ತೀಚೆಗೆ ಅವರ ಶಕ್ತಿಯೂ ಕುಂದಿದೆ. ಈಗ ಅವರ ಮನೆಯೂ ಶಿಥಿಲವಾಗಿದ್ದು, ಹೊಸದಾಗಿ ಸೂರು ನಿರ್ಮಿಸಲು ಅಸಮರ್ಥರಾಗಿದ್ದಾರೆ. ಹಳೆಯ ಮನೆ ಬಿದ್ದು ಹೋಗಿದ್ದು. ಇರುವ ಕೊಟ್ಟಿಗೆಗೆ ಟಾರ್ಪಲ್‌ ಹೊದೆಸಿ ಬದುಕುತ್ತಿದ್ದಾರೆ.

ಇರುಳಿಗೆ ಬೆಳಕಿಲ್ಲ
ಹಳೆ ಮನೆಗೆ ದೀನ ದಯಾಳ್‌ ಉಪಾಧ್ಯಾಯ ಯೋಜನೆ ಅಡಿ ವಿದ್ಯುತ್‌ ಮಂಜೂರಾಗಿದ್ದರೂ ಅದು ಊಟಕ್ಕಿಲ್ಲದ ಉಪ್ಪಿನಕಾಯಿ ಆಗಿದೆ. ಮನೆ ಮುರಿದ ಕಾರಣ ವಿದ್ಯುತ್‌ ಸಂಪರ್ಕವನ್ನು ಮೆಸ್ಕಾಂ ಕಡಿತಗೊಳಿಸಿದ್ದು, ರಾತ್ರಿಯನ್ನು ಕತ್ತಲಲ್ಲೇ ಕಳೆಯುತ್ತಿದ್ದಾರೆ. ಬೆಳಕು ಹಚ್ಚಲು ಕ್ಯಾಂಡಲ್‌ ಗತಿಯಾಗಿದೆ. ಮನೆ ಕೊಡುತ್ತೇವೆಂದು ಕೊಟ್ಟಿಲ್ಲ. ಈ ಹಿಂದೆ ಪಂಚಾಯತ್‌ನಿಂದ ವಸತಿ ಯೋಜನೆಯಲ್ಲಿ ಮನೆ ಮಂಜೂರು ಮಾಡುತ್ತೇವೆ ಎಂದು ಹೇಳಿದ್ದ ದೇವಚಳ್ಳ ಗ್ರಾ.ಪಂ., ಮಾತಿನಂತೆ ನಡೆದುಕೊಂಡಿಲ್ಲ ಎಂದು ಸರಸ್ವರಿ ಆರೋಪಿಸುತ್ತಾರೆ.

ಸಹಾಯ ಹಸ್ತ ಬೇಕಿದೆ
ವೃದ್ಧೆ ಸರಸ್ವತಿಯವರು ದೈಹಿಕವಾಗಿ ಮನೆ ನಿರ್ಮಿಸಿಕೊಳ್ಳಲು ಅಸಮರ್ಥರಾಗಿದ್ದು, ಇವರಿಗೆ ಮನೆ ನಿರ್ಮಾಣ ಮಾಡಲು ಸಂಘ ಸಂಸ್ಥೆಗಳ ಸಹಾಯ ಬೇಕಿದೆ. ಬಹುತೇಕ ಮಳೆಗಾಲವನ್ನು ಪ್ಲಾಸ್ಟಿಕ್‌ ಜೋಪಡಿಯಲ್ಲೇ ಕಳೆದಿದ್ದು, ಕಷ್ಟಕ್ಕೆ ಯಾರೂ ಆಗಿಬರಲಿಲ್ಲ ಎನ್ನುತ್ತಾರೆ ಸರಸ್ವತಿ.

Advertisement

 ಬಾಡಿಗೆ ಮನೆ ಕೊಡುತ್ತೇವೆ
ಸರಸ್ವತಿ ಅವರಿಗೆ ಪಂಚಾಯತ್‌ ವತಿಯಿಂದ ಮನೆಯನ್ನು ನೀಡುವ ವ್ಯವಸ್ಥೆ ಮಾಡಲಾಗುವುದು. ಆದರೆ ಈಗ ಪಂ.ಗೆ ಹೊಸ ಮನೆಗಳು ಮಂಜೂರಾಗದೇ ಇರುವುದರಿಂದ ಮನೆ ನೀಡಲಾಗುತ್ತಿಲ್ಲ. ಸದ್ಯ ಉಳಿದುಕೊಳ್ಳಲು ಬಾಡಿಗೆ ಮನೆ ಕೊಡಿಸುವ ಚಿಂತನೆ ನಡೆಸಲಾಗಿದೆ.
– ಕೃಷ್ಣಯ್ಯ ಮೂಲೆತೋಟ
ಗ್ರಾ.ಪಂ. ಸದಸ್ಯ, ದೇವಚಳ್ಳ

 ನೆರೆಮನೆಯೇ ಗತಿ
ಜೋಪಡಿಯಲ್ಲಿ ಮಳೆ ಬಂದಾಗ ಉಳಿದುಕೊಳ್ಳಲು ಕಷ್ಟವಾಗುತ್ತಿದೆ. ರಾತ್ರಿ ಮಳೆ ಸುರಿಯುವುದರಿಂದ ನೆರೆ ಮನೆಗಳಿಗೆ ತೆರಳುತ್ತೇವೆ.
– ಸರಸ್ವತಿ ಚಳ್ಳ

– ಕೃಷ್ಣಪ್ರಸಾದ್‌ ಕೋಲ್ಚಾರು

Advertisement

Udayavani is now on Telegram. Click here to join our channel and stay updated with the latest news.

Next